ಕಳ್ಳತನಕ್ಕೂ ಮುನ್ನ ಕಿಡಿಗೇಡಿಗಳು ದೇವಾಲಯದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಡಿವಿಆರ್ ಯಂತ್ರವನ್ನೂ ಸಹ ತಮ್ಮೊಂದಿಗೆ ಕೊಂಡೊಯ್ದಿದ್ದಾರೆ.
ಬೀಗ ಮುರಿದು ಹುಂಡಿ ಹಣ, ದೇವರ ಚಿನ್ನದ ವಸ್ತುಗಳ ಕಳವು । ಡಿವಿಆರ್ ಯಂತ್ರವು ನಾಪತ್ತೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆತಾಲೂಕಿನ ತ್ಯಾರನಹಳ್ಳಿ ಗ್ರಾಮದ ಶ್ರೀ ಬೀರೇಶ್ವರ ದೇವಾಲಯದ ಬೀಗ ಮುರಿದಿರುವ ದುಷ್ಕರ್ಮಿಗಳು ಹುಂಡಿ ಹಣ ಹಾಗೂ ದೇವರ ಚಿನ್ನದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಕಳ್ಳತನಕ್ಕೂ ಮುನ್ನ ಕಿಡಿಗೇಡಿಗಳು ದೇವಾಲಯದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದು, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಡಿವಿಆರ್ ಯಂತ್ರವನ್ನೂ ಸಹ ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಇದೇ ವ್ಯಾಪ್ತಿಯ ಪಕ್ಕದ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲೂ ಕಳ್ಳತನ ನಡೆದಿತ್ತು.ಕೇವಲ ಮೂರ್ನಾಲ್ಕು ದಿನಗಳ ಅಂತರದಲ್ಲಿ ಎರಡು ದೇವಾಲಯಗಳಲ್ಲಿ ಸರಣಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಎರಡೂ ದೇವಾಲಯಗಳಿಂದ ಸೇರಿ ಸಾವಿರಾರು ರುಪಾಯಿ ನಗದು ಹಾಗೂ ಭಕ್ತರು ಮತ್ತು ದಾನಿಗಳು ನೀಡಿದ್ದ ಸುಮಾರು 500 ಗ್ರಾಂ ಚಿನ್ನಾಭರಣ ಮತ್ತು 2 ಕೆಜಿ ಬೆಳ್ಳಿ ವಸ್ತುಗಳನ್ನು ಕಳ್ಳರು ದೋಚಿದ್ದಾರೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ. ರಾತ್ರಿ ಗಸ್ತಿನ ಕೊರತೆಯೇ ಸರಣಿ ಕಳ್ಳತನಗಳಿಗೆ ಕಾರಣವಾಗಿರಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದು, ಗ್ರಾಮಗಳಲ್ಲಿ ರಾತ್ರಿ ಗಸ್ತನ್ನು ಬಿಗಿಗೊಳಿಸಬೇಕು ಮತ್ತು ಶೀಘ್ರವೇ ಆರೋಪಿಗಳನ್ನು ಬಂಧಿಸಿ ಕದ್ದ ಹಣ ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.