ಸಾರಾಂಶ
ಕೆಲ ತಿಂಗಳ ಹಿಂದೆಯಷ್ಟೆ ದೇವಸ್ಥಾನವನ್ನು ಅಂದಾಜು 7 ಕೋಟಿ ರು. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿತ್ತು. ಈ ದೇವಸ್ಥಾನದಲ್ಲಿ ನಡೆಯುತ್ತಿದ್ದ ಸತ್ಯನಾರಾಯಣ ಪೂಜೆಯ ರಶೀದಿ ಹಣ ಹಾಗೂ ದೇವಸ್ಥಾನದ ಕಾಣಿಕೆ ಡಬ್ಬಿಯ ಸಂಗ್ರಹ ಹಣ ಸೇರಿ ಒಟ್ಟು 40 ಸಾವಿರಕ್ಕೂ ಅಧಿಕ ನಗದು ಕಳ್ಳನ ಚೀಲ ಸೇರಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರ
ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಶುಕ್ರವಾರ ತಡರಾತ್ರಿ ನುಗ್ಗಿದ ಅಪರಿಚಿತ ಕಳ್ಳನೋರ್ವ ನಗದು ದೋಚಿ ಪರಾರಿಯಾಗಿರುವ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.ಕೆಲ ತಿಂಗಳ ಹಿಂದೆಯಷ್ಟೆ ದೇವಸ್ಥಾನವನ್ನು ಅಂದಾಜು 7 ಕೋಟಿ ರು. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿತ್ತು. ಈ ದೇವಸ್ಥಾನದಲ್ಲಿ ನಡೆಯುತ್ತಿದ್ದ ಸತ್ಯನಾರಾಯಣ ಪೂಜೆಯ ರಶೀದಿ ಹಣ ಹಾಗೂ ದೇವಸ್ಥಾನದ ಕಾಣಿಕೆ ಡಬ್ಬಿಯ ಸಂಗ್ರಹ ಹಣ ಸೇರಿ ಒಟ್ಟು 40 ಸಾವಿರಕ್ಕೂ ಅಧಿಕ ನಗದು ಕಳ್ಳನ ಚೀಲ ಸೇರಿರುವ ದೃಶ್ಯಗಳು ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ದೇವಸ್ಥಾನ ಪೌಳಿಯಲ್ಲಿದ್ದ ಕವಾಟಿನಲ್ಲಿ ಇರಿಸಲಾಗಿದ್ದ ಹಣ ಕಳ್ಳನ ದೃಷ್ಟಿಗೆ ಬೀಳದೆ ಸುರಕ್ಷಿತವಾಗಿದೆ.ಬೆನ್ನಿಗೆ ಚೀಲವನ್ನು ಹಾಕಿಕೊಂಡು, ಕಾಲಿಗೆ ಚಪ್ಪಲಿ ಹಾಗೂ ಕೈಗೆ ಕೈಚೀಲವನ್ನು ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದ ಕಳ್ಳ, ದೇವಸ್ಥಾನದ ಬಾಗಿಲ ಚಿಲಕದ ಸ್ಕ್ರೂ ತೆಗೆದು ಸುತ್ತು ಪೌಳಿ ಪ್ರವೇಶಿಸಿದ್ದಾನೆ. ಚಪ್ಪಲಿ ಹಾಕಿಕೊಂಡೇ, ದೇವರಿಗೆ ಕೈ ಮುಗಿದು ಗಂಧ ಪ್ರಸಾದ ಹಣೆಗೆ ಹಚ್ಚಿ ಬಳಿಕ ತನ್ನ ಕೃತ್ಯ ಆರಂಭಿಸಿದ್ದಾನೆ. ಕ್ಷಣಾರ್ಧದಲ್ಲಿ ಹಣ ಎಗರಿಸುವ, ಕಾಣಿಕೆ ಡಬ್ಬಿಗಳನ್ನು ಹಿಡಿದುಕೊಂಡು ಓಡಾಡುವ ಹಾಗೂ ಅಕ್ಕ-ಪಕ್ಕ ನೋಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಪೊಲೀಸರು, ಸ್ಥಳಕ್ಕ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.-----ಪ್ರತಿ ಧ್ವನಿಸಿದ ಸೈನ್ ಇನ್ ಸೆಕ್ಯೂರಿಟಿಕಳ್ಳತನ ಸುದ್ದಿ ಕೇಳಿ ದೇವಸ್ಥಾನಕ್ಕೆ ಆಗಮಿಸಿದ್ದ ಬಹುಪಾಲು ಮಂದಿ, ಒಂದು ವೇಳೆ ಇಲ್ಲಿಯೂ ಕುಂದಾಪುರದ ''''ಸೈನ್ ಇನ್ ಸೆಕ್ಯೂರಿಟಿ'''' ಸಂಸ್ಥೆಯವರಿಗೆ ಇಲ್ಲಿನ ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದಲ್ಲಿ, ಇಲ್ಲಿ ಕಳವು ಮಾಡಿದ್ದ ಕಳ್ಳನು ಪೊಲೀಸರ ಬಂಧಿಯಾಗುವ ಸಾಧ್ಯತೆಗಳು ಇತ್ತು ಎನ್ನುವ ವಿಚಾರಗಳನ್ನು ಮಾತನಾಡುತ್ತಿದ್ದರು.