ಕನ್ನಡಪ್ರಭ ವಾರ್ತೆ ಬೆಳಗಾವಿ ಬೋರ್‌ವೆಲ್‌ಗಳಿಗೆ ಅಳವಡಿಸಿದ್ದ ಕೇಬಲ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿರುವ ಖಡಕಲಾಟ ಪೊಲೀಸರು, ಒಟ್ಟು 1,400 ಅಡಿ ಉದ್ದದ ಬೋರ್‌ವೆಲ್ ಕೇಬಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್‌ ಸೈಕಲ್ ಸೇರಿ ₹2.40 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೋರ್‌ವೆಲ್‌ಗಳಿಗೆ ಅಳವಡಿಸಿದ್ದ ಕೇಬಲ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿರುವ ಖಡಕಲಾಟ ಪೊಲೀಸರು, ಒಟ್ಟು 1,400 ಅಡಿ ಉದ್ದದ ಬೋರ್‌ವೆಲ್ ಕೇಬಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್‌ ಸೈಕಲ್ ಸೇರಿ ₹2.40 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಪಟ್ಟಣಕುಡಿ ಗ್ರಾಮದ ಮಹಾತ್ ಗೋಡೌನ್ ಸಮೀಪ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಪಕ್ಕದ ಸರ್ಕಾರಿ ಜಾಗದಲ್ಲಿರುವ ಗ್ರಾಪಂ ವ್ಯಾಪ್ತಿಯ ಕೊಳವೆಬಾವಿಗೆ ಅಳವಡಿಸಿದ್ದ ತಲಾ 600 ಅಡಿ ಉದ್ದದ 2 ಕೇಬಲ್ ಬಂಡಲ್‌ಗಳನ್ನು ಕಳ್ಳರು ಕಳವು ಮಾಡಿದ್ದರು. ಸುಮಾರು ₹60 ಸಾವಿರ ಮೌಲ್ಯದ ಕೇಬಲ್ ಕಳವು ಕುರಿತು ಪಟ್ಟಣಕುಡಿ ಪಿಡಿಒ ಖುರ್ಷಿದ್ ಆಲಂ ಅಬ್ದುಲ್‌ರಹೀಂ ಮೊಮಿನ್ ಅವರು ಜುಲೈ 21ರಂದು ಖಡಕಲಾಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

ನ.14ರಂದು ಪಟ್ಟಣಕುಡಿ ಗ್ರಾಮದ ಮಹಾತ್ ಗೋಡೌನ್ ಸಮೀಪ ಮೋಟಾರ್‌ ಸೈಕಲ್‌ನಲ್ಲಿ ಕೇಬಲ್ ಸಾಗಿಸುತ್ತಿದ್ದ ವಿಶಾಲ ಸಂಜು ಘಸ್ತೆ (27) ಎಂಬಾತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಆರೋಪಿ ತನ್ನ ಸ್ನೇಹಿತ ರಾಕೇಶ ರಾಜು ಘಸ್ತೆ ಎಂಬಾತನೊಂದಿಗೆ ಸೇರಿ ಪಟ್ಟಣಕುಡಿ ಹಾಗೂ ನಿಪ್ಪಾಣಿ ತಾಲೂಕಿನ ಗವಾನಿ ಗ್ರಾಮದಲ್ಲಿ ಬೋರ್‌ವೆಲ್ ಕೇಬಲ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯಿಂದ ಒಟ್ಟು 1,400 ಅಡಿ ಉದ್ದದ ಕೇಬಲ್ ಹಾಗೂ ಕಳವು ಕೃತ್ಯಕ್ಕೆ ಬಳಸಿದ್ದ ಕೆಎ-27, ಇಡಿ-1632 ನೋಂದಣಿ ಸಂಖ್ಯೆಯ ಹೋಂಡಾ ಶೈನ್ ಯುಗ-110 ಮೋಟಾರ್‌ಸೈಕಲ್ ಜಪ್ತಿ ಮಾಡಲಾಗಿದೆ. ಪರಾರಿಯಾಗಿರುವ ಮತ್ತೊಬ್ಬ ಆರೋಪಿ ರಾಕೇಶ ರಾಜು ಘಸ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ. ಬಸರಗಿ ಹಾಗೂ ಗೋಪಾಲಕೃಷ್ಣ ಗೌಡರ ಅವರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಡಿವೈಎಸ್ಪಿ ಹಾಗೂ ನಿಪ್ಪಾಣಿ ವೃತ್ತ ಸಿಪಿಐ ಬಿ.ಎಸ್.ತಳವಾರ ಅವರ ನೇತೃತ್ವದಲ್ಲಿ ಖಡಕಲಾಟ ಠಾಣೆಯ ಪಿಎಸ್‌ಐ ಕೃಷ್ಣವೇಣಿ ಸಿ.ಗುರ್ಲಹೊಸೂರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಕರಣ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಪ್ರಶಂಸಿಸಿದ್ದಾರೆ.