ಸಾರಾಂಶ
ಹುಬ್ಬಳ್ಳಿ:
ಇಲ್ಲಿಯ ರಮೇಶ ಭವನ ಬಳಿಯ ಭುವನೇಶ್ವರಿ ಜ್ಯುವೆಲರ್ಸ್ ಮಳಿಗೆಯ ಬೀಗ ಮುರಿದು ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಮಂಗಳವಾರ ನಡೆದಿದೆ.ನಗರದ ಜಗದೀಶ ದೈವಜ್ಞ ಎಂಬುವವರಿಗೆ ಸೇರಿರುವ ಜ್ಯುವೆಲರ್ಸ್ ಅಂಗಡಿಯಲ್ಲಿ ಕಳ್ಳತನವಾಗಿದೆ. ಗ್ಯಾಸ್ ಕಟರ್ ಮೂಲಕ ಅಂಗಡಿಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಅಂಗಡಿಯಲ್ಲಿನ ಸಿಸಿ ಕ್ಯಾಮೆರಾ ಸ್ಥಗಿತಗೊಳಿಸಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ₹ 22.65 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ, 10 ಕೆಜಿ ಬೆಳ್ಳಿ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬೆಳಗ್ಗೆ ಎಂದಿನಂತೆ ಸಿಬ್ಬಂದಿ ಅಂಗಡಿಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಎಸಿಪಿ ಶಿವಪ್ರಕಾಶ ನಾಯ್ಕ ಹಾಗೂ ಕೇಶ್ವಾಪೂರ ಠಾಣೆ ಪಿಐ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭುವನೇಶ್ವರಿ ಅಂಗಡಿಯಲ್ಲಿ ಹೆಚ್ಚಿನ ಪ್ರಮಾಣದ ಚಿನ್ನಾಭರಣ ಕಳ್ಳತನವಾಗಿದೆ ಎನ್ನಲಾಗುತ್ತಿದ್ದು, ಸದ್ಯ ಅಂಗಡಿಯ ಮಾಲೀಕರು ಮಾಹಿತಿ ದೊರೆತ ಚಿನ್ನಾಭರಣಗಳ ಕಳ್ಳತನ ಬಗ್ಗೆ ಮಾತ್ರ ದೂರು ನೀಡಿದ್ದಾರೆ. ಉಳಿದಂತೆ ಅಂಗಡಿಯಲ್ಲಿನ ಸಾಮಗ್ರಿ ಬಗ್ಗೆ ಲೆಕ್ಕಾಚಾರ ಮಾಡಿ ದೂರು ನೀಡುವುದಾಗಿ ಮಾಲೀಕರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮೊದಲ ಪ್ರಕರಣ:
ಹು-ಧಾ ನೂತನ ಪೊಲೀಸ್ ಕಮಿಷನರ್ ಆಗಿ ಎನ್. ಶಶಿಕುಮಾರ ಅಧಿಕಾರ ವಹಿಸಿಕೊಂಡ ನಂತರದಲ್ಲಿ ದಾಖಲಾದ ಮೊದಲ ಮತ್ತು ದೊಡ್ಡ ಪ್ರಮಾಣದ ಕಳ್ಳತನ ಪ್ರಕರಣ ಇದಾಗಿದೆ. ಹೀಗಾಗಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಚುರುಕಿನಿಂದ ತನಿಖೆ ಆರಂಭಿಸಿದ್ದಾರೆ.