ಶ್ರೀ ಗದ್ದೆಮ್ಮದೇವಿ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ

| Published : Mar 27 2024, 01:05 AM IST

ಶ್ರೀ ಗದ್ದೆಮ್ಮದೇವಿ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ
Share this Article
  • FB
  • TW
  • Linkdin
  • Email

ಸಾರಾಂಶ

ಅಮೀನಗಡ: ಪಟ್ಟಣದ ಚಿತ್ತರಗಿ ಕ್ರಾಸ್ ಮುಖ್ಯರಸ್ತೆಯ ಬಳಿಯಿರುವ ಶ್ರೀ ಗದ್ದೆಮ್ಮದೇವಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಳ್ಳರು ಕೈಚಳಕ ತೋರಿಸಿದ್ದು, ದೇವರ ಚಿನ್ನಾಭರಣಗಳನ್ನು ದೋಚಿದ್ದಾರೆ.

ಕನ್ನಡಪ್ರಭವಾರ್ತೆ ಅಮೀನಗಡಪಟ್ಟಣದ ಚಿತ್ತರಗಿ ಕ್ರಾಸ್ ಮುಖ್ಯರಸ್ತೆಯ ಬಳಿಯಿರುವ ಶ್ರೀ ಗದ್ದೆಮ್ಮದೇವಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಳ್ಳರು ಕೈಚಳಕ ತೋರಿಸಿದ್ದು, ದೇವರ ಚಿನ್ನಾಭರಣಗಳನ್ನು ದೋಚಿದ್ದಾರೆ.

ಕಳ್ಳರು ಬೀಗ ಮುರಿದು ಒಳನುಗ್ಗಿದ್ದು, ದೇವಸ್ಥಾನದೊಳಗಿದ್ದ ದೇವಿಯ 1 ತೊಲೆ ಬಂಗಾರದ ಮೂಗುತಿ, 1 ತೊಲೆ ಬೆಳ್ಳಿಯ ಕೊರೆದಾಡೆ, ತಲಾ 1 ತೊಲೆಯ 2 ಚಿನ್ನದ ಬೊರಮಳ ಸರ, ಒಂದೂವರೆ ತೊಲೆಯ 2 ಚಿನ್ನದ ತಾಳಿ, ತಲಾ 10 ತೊಲೆಯ 2 ಬೆಳ್ಳಿಯ ಕಾಲ್ಗಡಗ ಹಾಗೂ ಎರಡು ರೇಷ್ಮೇ ಸೀರೆಗಳು ಕಳ್ಳತನವಾಗಿದೆ ಎಂದು ದೇವಸ್ಥಾನದ ಪೂಜಾರಿ ಸುಂಕಪ್ಪ ಪೂಜಾರಿ ತಿಳಿಸಿದ್ದಾರೆ. ಸ್ಥಳಕ್ಕೆ ಅಮೀನಗಡ ಪೋಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ತನಿಖೆ ನಡೆಸಿದರು.

ಆಶ್ಚರ್ಯಗೊಂಡ ನಾಗರಿಕರು: ಪಟ್ಟಣದಲ್ಲಿ ಸೋಮವಾರ ರಾತ್ರಿ ಹೋಳಿಹುಣ್ಣಿಮೆಯ ನಿಮಿತ್ತ ಯುವಕರ ತಂಡ ರಾತ್ರಿಯಿಡೀ ಹಲಿಗೆ ಬಾರಿಸುತ್ತಾ ಸಂಭ್ರಮಿಸಿದ್ದಾರೆ. ಅಲ್ಲದೆ, ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಹೋರಾತ್ರಿ ಶ್ರೀಶೈಲ ಪಾದಯಾತ್ರಿಗಳಿಗೆ ಚಹಾ, ನೀರು ಮುಂತಾದ ಸೇವೆಗಳನ್ನು ಸಾರ್ವಜನಿಕರು ನೀಡುತ್ತಿದ್ದಾರೆ. ಹೈವೇ ಪೊಲೀಸರ ಗಸ್ತು ಇದ್ದರೂ, ದೇವಸ್ಥಾನ ದರೋಡೆ ನಡೆದಿರುವುದು ಜನರಲ್ಲಿ ಅಚ್ಚರಿ ಹಾಗೂ ಭಯ ಮೂಡಿಸಿದೆ.