ಸರಗಳ್ಳತನ: ₹40.5 ಲಕ್ಷ ಚಿನ್ನ, ₹4.2 ಲಕ್ಷ ಬೆಳ್ಳಿ ಸಾಮಗ್ರಿ ವಶ

| Published : Jun 27 2024, 01:13 AM IST

ಸರಗಳ್ಳತನ: ₹40.5 ಲಕ್ಷ ಚಿನ್ನ, ₹4.2 ಲಕ್ಷ ಬೆಳ್ಳಿ ಸಾಮಗ್ರಿ ವಶ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧೆಡೆ ಮನೆ, ಸರಗಳ್ಳತನ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಖದೀಮರನ್ನು ಬಂಧಿಸಿರುವ ನಗರದ ಜಯನಗರ ಠಾಣೆ ಪೊಲೀಸರು 40.50 ಲಕ್ಷ ರು. ಬೆಲೆಯ ಚಿನ್ನಾಭರಣ ಹಾಗೂ 4.22 ಲಕ್ಷ ರು. ಮೌಲ್ಯದ ಬೆಳ್ಳಿಯ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುವಿವಿಧೆಡೆ ಮನೆ, ಸರಗಳ್ಳತನ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಖದೀಮರನ್ನು ಬಂಧಿಸಿರುವ ನಗರದ ಜಯನಗರ ಠಾಣೆ ಪೊಲೀಸರು 40.50 ಲಕ್ಷ ರು. ಬೆಲೆಯ ಚಿನ್ನಾಭರಣ ಹಾಗೂ 4.22 ಲಕ್ಷ ರು. ಮೌಲ್ಯದ ಬೆಳ್ಳಿಯ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.ನಗರದ ಅಮರಜ್ಯೋತಿ ನಗರದಲ್ಲಿ ವಾಸವಾಗಿರುವ ಪಿ.ಎಸ್. ಶ್ರೀನಾಥ (39) ಹಾಗೂ ಶಾರದಾದೇವಿ ನಗರದ ನಿವಾಸಿ ವರುಣ್ (27) ಬಂಧಿತ ಆರೋಪಿಗಳು.ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರ ಕಿಟಕಿಯನ್ನು ಒಡೆದು ಒಳಗೆ ನುಗ್ಗಿರುವ ಕಳ್ಳರು ರೂಮ್‌ನ ಅಲ್ಮೇರಾದಲ್ಲಿದ್ದ ಬ್ಯಾಗ್ ಮತ್ತು ಬಾಕ್ಸ್ ಒಳಗಿದ್ದ 700 ಗ್ರಾಂ ಚಿನ್ನ ಒಡವೆಗಳು, 4580 ಗ್ರಾಂ ಬೆಳ್ಳಿಯ ಸಾಮಗ್ರಿಗಳು ಸೇರಿದಂತೆ 56,74,00 ರು. ಬೆಲೆಯ ಚಿನ್ನ-ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕಳ್ಳತನ ಪ್ರಕರಣವನ್ನು ಬೇಧಿಸಲು ಎಸ್ಪಿ ಅಶೋಕ್ ಕೆ.ವಿ. ಅಡಿಷನಲ್ ಎಸ್ಪಿಗಳಾದ ಮರಿಯಪ್ಪ, ಅಬ್ದುಲ್ ಖಾದರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ತಿಲಕ್‌ಪಾರ್ಕ್ ಸಿಪಿಐ ಪುರುಷೋತ್ತಮ್, ಜಯನಗರ ಪಿಎಸ್‌ಐ ಮಹಾಲಕ್ಷಮ್ಮ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ವಿಶೇಷ ತಂಡದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಜಯನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಮಾಡಿದ್ದ ಮನೆ, ಸರಗಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯಲ್ಲಿ ಕಳ್ಳತನ ಮಾಡಿದ್ದ 36.92 ಲಕ್ಷ ರು. ಬೆಲೆಯ ಚಿನ್ನಾಭರಣ, 4.22 ಲಕ್ಷ ರು. ಮೌಲ್ಯದ ಬೆಳ್ಳಿ ಸಾಮಗ್ರಿಗಳು, ಮತ್ತೊಂದು ಪ್ರಕರಣದಲ್ಲಿ 3.60 ಲಕ್ಷ ರು. ಬೆಲೆಯ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ 30 ಸಾವಿರ ರು. ಬೆಲೆ ಬಾಳುವ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಮಧುಗಿರಿ ಉಪವಿಭಾಗ ವ್ಯಾಪ್ತಿಯ ವಿವಿಧೆಡೆ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಮಿಡಿಗೇಶಿ ಪೊಲೀಸರು ಬಂಧಿಸಿ, 29.35 ಲಕ್ಷ ರು. ಮೌಲ್ಯದ ಚಿನ್ನಾಭರಣ, 82 ಸಾವಿರ ರು. ಬೆಲೆಯ ಮೊಬೈಲ್‌ಗಳು ಹಾಗೂ 3.80 ಲಕ್ಷ ರು. ಬೆಲೆ ಬಾಳುವ ಮೂರು ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹಿಂದೂಪುರದ ಜಿ.ಆರ್. ಜಿನ್ನಾ (34) ಹಾಗೂ ರಿಜ್ವಾನ್ ಭಾಷ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಈ ಆರೋಪಿಗಳು ಕಳವು ಮಾಡಿದ್ದ ಚಿನ್ನದ ಸರಗಳನ್ನು ಖರೀದಿಸಿದ್ದ ಹಿಂದೂಪುರದ ಚಿಲ್ಲರೆ ಅಂಗಡಿ ವ್ಯಾಪಾರಿ ಭರತ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಾದ ಚಿನ್ನ ಹಾಗೂ ರಿಜ್ವಾನ್ ಮಿಡಿಗೇಶಿ, ಕೊಡಿಗೇನಹಳ್ಳಿ, ಕೊರಟಗೆರೆ, ಪಟ್ಟನಾಯಕನಹಳ್ಳಿ, ಬಡವನಹಳ್ಳಿ, ಗೌರಿಬಿದನೂರು ಗ್ರಾಮಾಂತರ ಮಂಚೇನಹಳ್ಳಿ, ಮಡಶಿರಾ ವ್ಯಾಪ್ತಿಯಲ್ಲಿ ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರ ಕೊರಳಲ್ಲಿದ್ದ ಚಿನ್ನದ ಸರ, ಕಿವಿ ಒಲೆ ಮತ್ತು ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದರು. ಕಳೆದ ಮಾರ್ಚ್ 12 ರಂದು ಮಿಡಿಗೇಶಿ-ಐ.ಡಿ.ಹಳ್ಳಿ ರಸ್ತೆಯಲ್ಲಿ ಅಂಬಿಕಾ ಎಂಬುವರು ನಡೆದುಕೊಂಡು ಹೋಗುತ್ತಿದ್ದಾಗ ಈ ಇಬ್ಬರು ಖತರ್ನಾಕ್ ಕಳ್ಳರು ದ್ವಿಚಕ್ರ ವಾಹನದಲ್ಲಿ ಬಂದು ಓರ್ವ ಮಹಿಳೆಯ ಬಾಯಿಮುಚ್ಚಿ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಧುಗಿರಿ ಡಿವೈಎಸ್ಪಿ ರಾಮಚಂದ್ರ ನೇತೃತ್ವದಲ್ಲಿ ಸಿಪಿಐಗಳಾದ ಹನುಮಂತರಾಯಪ್ಪ, ಎಸ್.ಆರ್. ಕಾಂತರೆಡ್ಡಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಪಿ.ಎಂ. ಅಮ್ಮಣಗಿ ಮತ್ತು ಮುತ್ತುರಾಜು, ಎಎಸ್‌ಐ ಜಿ.ಪಿ. ವಿನೋದ್, ಸಿಬ್ಬಂದಿಗಳಾದ ರಮೇಶ್, ಪ್ರಕಾಶ್, ಗೋಪಾಲಕೃಷ್ಣ, ರವಿಕುಮಾರ್, ಜೀಪ್ ಚಾಲಕರಾದ ಕಲ್ಲೇಶ್ ಹಾಗೂ ಶ್ರೀನಿವಾಸ್ ರವರನ್ನೊಳಗೊಂಡ ತಂಡ ಆರೋಪಿಗಳ ಪತ್ತೆ ಮಾಡಿ ಬಂಧಿಸುವಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.