ದೊಡ್ಡಬಳ್ಳಾಪುರ: ಇದೇ 27ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ದಿನದಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ಕೆಂಪೇಗೌಡ ಥೀಮ್ ಪಾರ್ಕ್ ಅನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಭವ್ಯ ಕಂಚಿನ ಪ್ರತಿಮೆ ಬಳಿ ಅಂದಾಜು ₹20 ಕೋಟಿ ರು.ಗಳ ವೆಚ್ಚದಲ್ಲಿ ಕೆಂಪೇಗೌಡ ತೀಮ್ ಪಾರ್ಕ್ ನಿರ್ಮಿಸಲಾಗಿದೆ. ಜೂ.27ರಂದು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.

ರಾಜ್ಯ ಮಟ್ಟದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಬೆಂಗಳೂರು ನಗರದ ಕೆಂಗೇರಿಯ ಕೆಂಪೇಗೌಡ ಬಡಾವಣೆಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಕೆಂಪೇಗೌಡರ ವಂಶಸ್ಥರು ನೆಲೆಸಿದ್ದಂತ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಿಂದ ಪ್ರತಿ ವರ್ಷದಂತೆ ಈ ವರ್ಷವೂ ಜ್ಯೋತಿ ಹೊರಡಲಿದೆ ಎಂದು ಹೇಳಿದರು.

ಆವತಿಯಿಂದ ಜ್ಯೋತಿ ಯಾತ್ರೆ:

ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಕನಿಷ್ಠ 5 ಸಾವಿರ ಜನ ಹೊರಡಬೇಕಿದೆ. ಆವತಿಯಿಂದ ಜ್ಯೋತಿ, ಜೊತೆಗೆ ಏರ್ಪೋರ್ಟ್ ಲಿ ಸಿಎಂ ಕಾರ್ಯಕ್ರಮ, ರಾಜ್ಯ ಮಟ್ಟದ ಕಾರ್ಯಕ್ರಮ ಒಂದೇ ದಿನ ಇರುವುದರಿಂದ ಏಕಕಾಲದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಜನರು ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಜಿಲ್ಲಾ ಮಟ್ಟದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಬೇರೊಂದು ದಿನ ಆಯೋಜಿಸಲು ತೀರ್ಮಾನಿಸಲಾಗಿದ್ದು ಸಮುದಾಯದ ಮುಖಂಡರ ಜೊತೆ ಚರ್ಚಿಸಿ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.


ಜೂ.27ರಂದು ಜಿಲ್ಲೆಯಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ನಾಡಪ್ರಭು ಕೆಂಪೇಗೌಡರ ಪುತ್ಥಳಿಗೆ ಬೆಳಗ್ಗೆ 7.30 ಕ್ಕೆ ಮಾಲಾರ್ಪಣೆ ಮಾಡಲಾಗುವುದು, ನಂತರ ಬೆಳಗ್ಗೆ 08 ಗಂಟೆಗೆ ಆವತಿಯಲ್ಲಿ ಜ್ಯೋತಿ ಹೊರಡಲು ಚಾಲನೆ ನೀಡಲಾಗುವುದು. ಬೆಳಗ್ಗೆ 8.30 ಕ್ಕೆ ಏರ್ಪೋರ್ಟ್ ಲಿ ಕೆಂಪೇಗೌಡ ಥೀಮ್ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದ್ದು ಅಲ್ಲಿಂದ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಹೊರಡಲಿದ್ದೇವೆ ಎಂದರು.

ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಹೊರಡಲು ಜಿಲ್ಲೆಯ ವಿವಿಧ ಭಾಗಗಳಿಂದ ಬೆಳೆಗ್ಗೆ 7 ಗಂಟೆಗೆ ಬಸ್ ವ್ಯವಸ್ಥೆ ಮಾಡಲಾಗುವುದು, ಜೊತೆಗೆ ಉಪಹಾರ ಇರಲಿದೆ. ಜಿಲ್ಲೆಯ ಎಲ್ಲಾ ಸಂಘಟನೆಗಳ ಮುಖಂಡರು, ಸಮುದಾಯ ಮುಖಂಡರು, ಸಾರ್ವಜನಿಕರು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಸಚಿವರು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಸಿಇಒ ಡಾ. ವಾಸಂತಿ ಅಮರ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

19ಕೆಡಿಬಿಪಿ1-

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು. ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧ, ಸಿಇಒ ಡಾ.ವಾಸಂತಿ ಅಮರ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ ಇತರರಿದ್ದರು.