ಆಗ ಡಿಜಿಟಲ್‌ ಅರೆಸ್ಟ್‌, ಈಗ ಉಗ್ರರೆಂದು ಬೆದರಿಕೆ!

| Published : Jan 08 2025, 12:17 AM IST

ಆಗ ಡಿಜಿಟಲ್‌ ಅರೆಸ್ಟ್‌, ಈಗ ಉಗ್ರರೆಂದು ಬೆದರಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಳೆದ ನಾಲ್ಕು ತಿಂಗಳ ಹಿಂದೆ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದ ವಿಜಯಪುರದ ಸಾಮಾಜಿಕ ಕಾರ್ಯಕರ್ತ ಸಂತೋಷ ಚೌಧರಿಗೆ ಇದೀಗ ಮತ್ತೆ ಆನ್‌ಲೈನ್ ಖದೀಮರ ಕಾಟ ಶುರುವಾಗಿದೆ. ಮತ್ತೆ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಕಾಲ್‌ ರಿಸೀವ್‌ ಮಾಡಿ ಮಾತನಾಡಿರುವ ಸಂತೋಷ ಚೌಧರಿ ಹಿಂದೆ ನೀವು ಹೀಗೆಯೇ ಕರೆ ಮಾಡಿದ್ದೀರಿ, ಆಗ ನಾನು ಮಾತನಾಡಿದ್ದು, ಇಡೀ ದೇಶವೇ ನೋಡಿದೆ. ಮತ್ತೆ ಮತ್ತೆ ನನಗೆ ಏಕೆ ಕರೆ ಮಾಡುತ್ತೀರಿ ಎಂದು ನಡೆದ ಘಟನೆಯನ್ನು ನೆನಪಿಸಿದ್ದಾರೆ. ಅತ್ತಕಡೆಯಿಂದ ಕುಪಿತಗೊಂಡ ಡಿಜಿಟಲ್ ಅರೆಸ್ಟ್ ದಂಧೆಕೋರರು ದೇಶದ ಪ್ರಧಾನಿ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರಿಗೂ ವಾಚಾಮಗೋಚರವಾಗಿ ಬೈಯ್ದಾಡಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ನಾಲ್ಕು ತಿಂಗಳ ಹಿಂದೆ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದ ವಿಜಯಪುರದ ಸಾಮಾಜಿಕ ಕಾರ್ಯಕರ್ತ ಸಂತೋಷ ಚೌಧರಿಗೆ ಇದೀಗ ಮತ್ತೆ ಆನ್‌ಲೈನ್ ಖದೀಮರ ಕಾಟ ಶುರುವಾಗಿದೆ. ಮತ್ತೆ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಕಾಲ್‌ ರಿಸೀವ್‌ ಮಾಡಿ ಮಾತನಾಡಿರುವ ಸಂತೋಷ ಚೌಧರಿ ಹಿಂದೆ ನೀವು ಹೀಗೆಯೇ ಕರೆ ಮಾಡಿದ್ದೀರಿ, ಆಗ ನಾನು ಮಾತನಾಡಿದ್ದು, ಇಡೀ ದೇಶವೇ ನೋಡಿದೆ. ಮತ್ತೆ ಮತ್ತೆ ನನಗೆ ಏಕೆ ಕರೆ ಮಾಡುತ್ತೀರಿ ಎಂದು ನಡೆದ ಘಟನೆಯನ್ನು ನೆನಪಿಸಿದ್ದಾರೆ. ಅತ್ತಕಡೆಯಿಂದ ಕುಪಿತಗೊಂಡ ಡಿಜಿಟಲ್ ಅರೆಸ್ಟ್ ದಂಧೆಕೋರರು ದೇಶದ ಪ್ರಧಾನಿ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರಿಗೂ ವಾಚಾಮಗೋಚರವಾಗಿ ಬೈಯ್ದಾಡಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಮಾಡಿದವರೇ ಮತ್ತೆ ಜ.5ರಂದು ಮಧ್ಯಾಹ್ನ 1.40ಕ್ಕೆ ಕರೆ ಬಂದಿದೆ. ಅನಾಮಧೇಯ ಮೊಬೈಲ್ ನಂ: +912143352848 ಇದರಿಂದ ಪ್ರೈಸ್ ಕಾಲ್ ಬಂದಿದ್ದು ಅದನ್ನು ಸ್ವೀಕರಿಸಿದಾಗ ಸಂತೋಷಗೆ ಮತ್ತೆ ಶಾಕ್ ಕಾದಿತ್ತು. ಯಾಕೆಂದರೆ ಅತ್ತಕಡೆಯಿಂದ ಕರೆ ಮಾಡಿದವರು ನಾವು ಐವಿಆರ್ ಕಾಲ್ ಇದು, ಅದರಲ್ಲಿ ಇಂಪಾರ್ಟಟೆಂಟ್ ನೋಟಿಸ್ ಇದ್ದು, ಕ್ರೈಂ ಡಿಪಾರ್ಟಮೆಂಟ್‌ನಿಂದ ಮಾತನಾಡುತ್ತಿದ್ದೇವೆ. ನೀವು ನಿಯಮಿತ ಡಾರ್ಕವೆಟ್ ಉಪಯೋಗ ಮಾಡಿದ್ದು, ನಿಮ್ಮ ಮೇಲೆ ಲೀಗಲ್ ಆಕ್ಷನ್ ತೆಗೆದುಕೊಳ್ಳುವುದಾಗಿ ಹೇಳಿ ಭಯಬೀಳಿಸಿದ್ದಾರೆ.

ಕಾಲ್‌ ಮಾಡಿ ಬೆದರಿಕೆ:

ನಾವು ಹೈದ್ರಾಬಾದ್ ಕ್ರೈಂ ಡಿಪಾರ್ಟಮೆಂಟ್‌ನ ಸ್ಮಿತಾ ಪಟೇಲ್ ಎಂದು ಪರಿಚಯಿಸಿಕೊಂಡು ಡಾರ್ಕ್‌ವೆಟ್‌ನಲ್ಲಿ ಕ್ರಿಮಿನಲ್ ಆಕ್ಟಿವಿಟಿ ಮಾಡಿದ್ದೀರಿ, ಹಾಗಾಗಿ ನಿಮ್ಮ ಹೆಸರಿನಲಿ ಹೈದ್ರಾಬಾದ್‌ನಲ್ಲಿ, ಒಂದು ಎಫ್.ಐ.ಆರ್‌ ರಿಜಿಸ್ಟರ ಆಗಿದೆ, ಅದರ ಫೈಲ್ ನಂ:2312-2024CYB ಎಂದು ಹೇಳಿದ್ದಾಳೆ. ಆಗ ಸಂತೋಷ ನಾನು ಈ ರೀತಿ ಯಾವುದೇ ಚಟುವಟಿಕೆ ಮಾಡಿಲ್ಲ ಅಂದಾಗ ನೀವು ಡಾರ್ಕ್‌ವೆಬ್‌ನಲ್ಲಿ ಡ್ರಗ್ಸ್, ಸೇಲಿಂಗ್, ವೆಫೆನ್ ಸೇಲಿಂಗ್, ಹ್ಯೂಮನ್ ಟ್ರಾಫಿಕಿಂಗ್ ಮಾಡುತ್ತಿದ್ದೀರಿ ಎಂದು ಹೇಳಿ ಹೆದರಿಸಿದ್ದಾರೆ.

ವಿಡಿಯೋ ಕಾಲ್‌ ಮಾಡಿ ಡ್ರಾಮಾ:

ಬಳಿಕ ಹೈದ್ರಾಬಾದ್‌ ಪೊಲೀಸ್ ಹೆಡ್ ಕ್ವಾರ್ಟರ್ ಇನ್ಸ್‌ಪೆಕ್ಟರ್ ಮನೋಜಕುಮಾರ ಎಂದು ಹೇಳಿಕೊಂಡ ವ್ಯಕ್ತಿ ನಾವು ಸೈಬರ್ ಕ್ರೈಂ ಡಿಪಾರ್ಟ್‌ಮೆಂಟ್‌ನವರು ನಿಮಗೆ 2 ಗಂಟೆ ಸಮಯ ನೀಡಿದ್ದಾರೆ. ಹಾಗಾಗಿ ವಾಟ್ಸಪ್ ವಿಡಿಯೋ ಕಾಲ್ ಮೂಲಕ +919951034551 ಕರೆ ಮಾಡಿದ್ದಾರೆ. ಅದರಲ್ಲಿ ತೆಲಂಗಾಣ ಸೈಟ್ ಪೊಲೀಸ್ ಎಂಬ ಲೋಗೊ ಡಿಪಿ ಹಾಕಿದ್ದು ಕಾಣಿಸಿದೆ. ಅಷ್ಟರಲ್ಲೇ ಓರ್ವ ವ್ಯಕ್ತಿ ಪೊಲೀಸ್ ಯುನಿಫಾರ್ಮ್ ಮೇಲೆ ವಿಡಿಯೋದಲ್ಲಿ ಮಾತನಾಡಿದ್ದಾರೆ.

ನಾಲ್ಕು ತಿಂಗಳ ಹಿಂದೆ ಬೆದರಿಕೆ ಕರೆ:

ಈ ಹಿಂದೆ 2024, ಸೆಪ್ಟೆಂಬರ್ 16ರಂದು ಮುಂಬಯಿ ಪೊಲೀಸ್ ಅಂತ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದೀರಿ. ಆಗ ಆ ವಿಡಿಯೋವನ್ನು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಕ್ಟೋಬರ್ 27ರಂದು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಹೇಳಿದ್ದಾನೆ. ಬಳಿಕವೇ ನಿನಗೆ ಮತ್ತು ನಿಮ್ಮ ಪ್ರಧಾನ ಮಂತ್ರಿಗೆ ಗುಂಡು ಹೊಡೆದು ಕೊಲ್ಲುತ್ತೇವೆ ಎಂದು ಆತ ಬೆದರಿಕೆ ಹಾಕಿದ್ದಾರೆ. ಸಂತೋಷನಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಅವಾಚ್ಯವಾಗಿ ಬೈದಿದ್ದಾರೆ.

ತಾವು ಹಿಜ್ಬುಲ್ಲಾ ಟೆರರಿಸ್ಟ್ ಸಂಘಟನೆಯವರಾಗಿದ್ದು, ಲೆಬನಾನ್‌ನಲ್ಲಿದ್ದೇವೆ. ನಮ್ಮ ಹತ್ತಿರ ತುಂಬ ಶಸ್ತ್ರಾಸ್ತ್ರಗಳಿವೆ ಎಂದು ಹೇಳಿದ್ದಾರೆ. ಅಲ್ಲದೆ ನಿಮ್ಮ ಪ್ರಧಾನ ಮಂತ್ರಿ ಮೋದಿಯವರಿಗೆ ಮತ್ತು ನಿಮ್ಮ ಮುಖ್ಯಮಂತ್ರಿಗೆ ಮತ್ತು ಯೋಗಿ ಆದಿತ್ಯನಾಥರಿಗೆ ಗುಂಡು ಹೊಡೆಯುತ್ತೇವೆ. ಬಾಂಬ್ ಹಾಕಿ ಸಂಪೂರ್ಣ ಇಂಡಿಯಾವನ್ನು ಉಡಾಯಿಸುತ್ತೇವೆ ಎಂದು ಧಮಕಿ ಹಾಕಿದ್ದಾರೆ.

ಮತ್ತೊಂದು ದೂರು:

ಕಳೆದ ಸೆಪ್ಟೆಂಬರ್‌ನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ್ದ ವೇಳೆ ನಗರದ ಸಿಇಎನ್ ಠಾಣೆಯಲ್ಲಿ ಸಂತೋಷ ಚೌಧರಿ ದೂರು ದಾಖಲಿಸಿದ್ದರು. ಅದು ಇನ್ನೂ ತನಿಖಾ ಹಂತದಲ್ಲಿರುವಾಗಲೇ ಇದೀಗ ಮತ್ತೊಂದು ದೂರು ದಾಖಲಾಗಿದೆ. ಇದೀಗ ಜ.6ರಂದು ಸಿಇಎನ್ ಕ್ರೈಂ ಠಾಣೆಯಲ್ಲಿ 0002-2025 ಸಂಖ್ಯೆಯಲ್ಲಿ ದೂರು ದಾಖಲಿಸಲಾಗಿದೆ.

--------------

ಕೋಟ್:

ಅಮಾಯಕರನ್ನು ಡಿಜಿಟಲ್ ಅರೆಸ್ಟ್ ಮಾಡಿ ಲಕ್ಷಾಂತರ ರೂಪಾಯಿ ಹಣ ಕೀಳುವ ದಂಧೆಕೋರರು ಇರಬಹುದು ಎಂದು ಅಂದುಕೊಂಡಿದ್ದೆ. ಆದರೆ ಅವರು ಹಿಜ್ಬುಲ್ಲಾ ಟೆರರಿಸ್ಟ್ ಸಂಘಟನೆಯವರು. ಲೆಬನಾನ್‌ನಲ್ಲಿ ಇದ್ದೇವೆ ಎಂದಿದ್ದಾರೆ. ಅಲ್ಲದೆ, ದೇಶದ ಪ್ರಧಾನಿ, ಮುಖ್ಯಮಂತ್ರಿಯ ಮೇಲೆ ದಾಳಿ ಮಾಡುತ್ತೇವೆ ಎಂದು ಹೆದರಿಸಿದ್ದಾರೆ. ಹಾಗಾಗಿ ಈ ಕುರಿತು ಉನ್ನತ ಮಟ್ಟದಲ್ಲಿ ತನಿಖೆಯ ಅಗತ್ಯವಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

- ಸಂತೋಷ ಚೌಧರಿ ಪಾಟೀಲ, ದೂರುದಾರ.