ಹಾಸನ: ತಾತನ ಸೋಲಿಸಿದ ತಾತ, ಮೊಮ್ಮಗನಿಂದಲೇ ಮೊಮ್ಮಗ ಪರಾಭವ

| Published : Jun 05 2024, 12:30 AM IST / Updated: Jun 05 2024, 01:35 PM IST

ಹಾಸನ: ತಾತನ ಸೋಲಿಸಿದ ತಾತ, ಮೊಮ್ಮಗನಿಂದಲೇ ಮೊಮ್ಮಗ ಪರಾಭವ
Share this Article
  • FB
  • TW
  • Linkdin
  • Email

ಸಾರಾಂಶ

  ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್‌ ಪಟೇಲ್‌ ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣರನ್ನು ಸೋಲಿಸಿದ್ದಾರೆ.

 ಹಾಸನ :  ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಂಸದರೂ ಆಗಿದ್ದ ದಿವಂಗತ ಜಿ.ಪುಟ್ಟಸ್ವಾಮಿಗೌಡರಿಬ್ಬರೂ ಒಂದು ಕಾಲದ ಜಿಗರಿ ದೋಸ್ತ್‌ಗಳು. ಆದರೆ ರಾಜಕೀಯ ಎನ್ನುವುದು ಇಬ್ಬರನ್ನೂ ಪರಮ ಶತ್ರುಗಳನ್ನಾಗಿ ಮಾಡಿತು. ಅದೇ ಶತೃತ್ವ ಇವರಿಬ್ಬರು ಒಬ್ಬರೆದು ಮತ್ತೊಬ್ಬರು ಚುನಾವಣೆಯಲ್ಲಿ ಸೋಲುವಂತಾಯಿತು. ಹಾಗೆಯೇ ಗೆಲುವನ್ನೂ ಕಂಡರು. ಇದೀಗ ಮೊಮ್ಮಕ್ಕಳ ಕಾಲ. 2019ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಪ್ರಜ್ವಲ್‌ ಇದೀಗ ಅದೇ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್‌ ಎದುರು ಸೋತು ಮಂಡಿಯೂರಿದ್ದಾರೆ. ಇಷ್ಟೆಲ್ಲಾ ಆಗಿರುವುದು 25 ವರ್ಷಗಳಲ್ಲಿ. 1999ರಲ್ಲಿ ಪುಟ್ಟಸ್ವಾಮಿಗೌಡ ಸಂಸದರಾದರು. ಅವರೆದುರು ದೇವೇಗೌಡರು ಸೋಲು ಕಂಡರು. ಕಾಂಗ್ರೆಸ್‌ ಪಾಲಿಗೆ ಅದೇ ಕಡೆ ಜಯ. ಮುಂದಿನ ಯಾವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಜಿಲ್ಲೆಯೊಳಗೆ ಗೆಲ್ಲಲು ಆಗಲೇ ಇಲ್ಲ. ದೇವೇಗೌಡರೇ ಏಕಮೇವ ಚಕ್ರಾಧಿಪತಿಯಾಗಿ ಗೆಲ್ಲುತ್ತ ಬಂದರು. ಈ ಮಧ್ಯೆ ದಿವಂಗತ ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಅವರು ಕೂಡ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ದೇವೇಗೌಡರೆದುರು ಸೋಲುಂಡರು. 

2019ಕ್ಕೆ ಮೊಮ್ಮಗ ಎಂಟ್ರಿ: 2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನೊಳಗೆ ಭಾರಿ ಬದಲಾವಣೆ ಆಯಿತು. ‘2014 ರ ಚುನಾವಣೆಯಲ್ಲೇ ಇದು ನನ್ನ ಕಡೆ ಚುನಾವಣೆ’ ಎಂದು ಜನರ ಮುಂದೆ ಹೇಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ದೇವೇಗೌಡರು 2019ರಲ್ಲಿ ತಮ್ಮ ಪುತ್ರ ಎಚ್‌.ಡಿ.ರೇವಣ್ಣ ಅವರ ಮಗ ಪ್ರಜ್ವಲ್‌ರನ್ನು ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಿಸಿದರು.

 ದೇವೇಗೌಡರ ಮೇಲಿನ ಅಭಿಮಾನಕ್ಕೋ ಅಥವಾ ಅವರು ಹೇಳಿದರು ಎನ್ನುವ ಕಾರಣಕ್ಕೋ ಪ್ರಜ್ವಲ್‌ ಅವರನ್ನು ಜಿಲ್ಲೆಯ ಜನರು ಗೆಲ್ಲಿಸಿದರು. ಆದರೆ, ಮೊಮ್ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ವಲಸೆ ಹೋಗಿ ಸ್ಪರ್ಧಿಸಿದ ದೇವೇಗೌಡರು ಸೋಲನುಭವಿಸಬೇಕಾಯಿತು.ಆ ವೇಳೆಗಾಗಲೇ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್‌ ಎಂ.ಪಟೇಲ್‌ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿ ತಮ್ಮ ಒಳ್ಳೆಯ ಗುಣದಿಂದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. 

ಹಾಗಾಗಿ ಅವರು 2022ರ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಎಚ್.ಡಿ.ರೇವಣ್ಣ ಎದುರು ಸ್ಪರ್ಧಿಸಿ ಸುಮಾರು 2 ಸಾವಿರ ಮತಗಳ ಸಮೀಪದ ಅಂತರದಲ್ಲಿ ಸೋತರು. ಈ ಮಟ್ಟದ ಪ್ರತಿಸ್ಪರ್ಧೆ ಹಾಗೂ ಕನಿಷ್ಠ ಅಂತರದಲ್ಲಿ ಗೆದ್ದ ಎಚ್‌.ಡಿ.ರೇವಣ್ಣ ಅವರೇ ದಂಗಾಗಿ ಹೋಗಿದ್ದರು. ತಮ್ಮ ತಾಯಿಯ ಎರಡು ಬಾರಿಯ ಸೋಲು ಹಾಗೂ ತಮ್ಮ ಈ ಸೋಲಿನಿಂದ ಶ್ರೇಯಸ್‌ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲರಾಗಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಜನರು ಶ್ರೇಯಸ್‌ರನ್ನು ಕೈಬಿಡಲಿಲ್ಲ. ಜತೆಗೆ ಜೆಡಿಎಸ್‌ನೊಳಗೇ ನಡೆದ ಬುಡಮೇಲು ಕೃತ್ಯಗಳು ಆ ಪಕ್ಷಕ್ಕೂ ಮತ್ತು ಪೆನ್‌ಡ್ರೈವ್‌ ಪ್ರಕರಣ ಪ್ರಜ್ವಲ್‌ಗೂ, ಮಹಿಳೆಯ ಅಪಹರಣ ಕೇಸಿನಲ್ಲಿ ಎಚ್‌.ಡಿ.ರೇವಣ್ಣ ಮತ್ತು ಜೈಲು ಸೇರುವಂತಾಯಿತು, ಅದೇ ಕೇಸಿನಲ್ಲಿ ಭವಾನಿ ಅವರು ತಲೆಮರೆಸಿಕೊಳ್ಳುವಂತಾಯಿತು. ಇದೆಲ್ಲವೂ ಜಿಲ್ಲೆಯ ಮತದಾರರ ಮೇಲೆ ಪ್ರಭಾವ ಬೀರಿದ್ದು, ರಾಜಕೀಯ ಬದಲಾವಣೆಗೆ ನಾಂದಿ ಹಾಡಿದೆ.

25 ವರ್ಷಗಳ ನಂತರ ಜಿಲ್ಲೆಯೊಳಗೆ ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಇರುವ ಕಾರಣಗಳಲ್ಲಿ ಜಿಲ್ಲೆಯ ಕಾಂಗ್ರೆಸ್‌ ನಾಯಕರು ಬಿನ್ನಾಭಿಪ್ರಾಯ ಬದಿಗಿಟ್ಟು ಒಂದಾಗಿ ಕೆಲಸ ಮಾಡಿದ್ದೂ ಕೂಡ ಒಂದು.ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವ ಎಲ್ಲಾ ಅವಕಾಶಗಳಿದ್ದಾಗ್ಯೂ ಸೋತರು. ಕಾರಣ ಜಿಲ್ಲೆಯೊಳಗಿನ ಕಾಂಗ್ರೆಸ್‌ ಮುಖಂಡರಲ್ಲೇ ಇದ್ದ ಗುಂಪುಗಾರಿಕೆ. ಇದೇ ಕಾರಣಕ್ಕಾಗಿ ಚುನಾವಣೆ ಬಂದಾಗಲೆಲ್ಲಾ ಟಿಕೆಟ್‌ ಹಂಚಿಕೆ ವಿಚಾರದಿಂದಲೇ ಕಿತ್ತಾಟ ಶುರುವಾಗುತ್ತಿತ್ತು.

 ಎದುರಾಳಿ ಗುಂಪಿನವರಿಗೆ ಟಿಕೆಟ್‌ ಸಿಕ್ಕ ನಂತರದಲ್ಲಿ ಜಿಲ್ಲೆಗೆ ಬರುತ್ತಿದ್ದ ರಾಜ್ಯ ಮುಖಂಡರು ಒಗ್ಗಟ್ಟಿನ ಮಂತ್ರ ಹೇಳಿ ಹೋಗುತ್ತಿದ್ದರು. ಆದರೆ, ಇಲ್ಲಿದ್ದ ನಾಯಕರು ಮಾಡುತ್ತಿದ್ದುದ್ದು ಮಾತ್ರ ಅದೇ ತೆರೆಮರೆ ತಂತ್ರಗಾರಿಕೆ. ಈ ಬಾರಿ ಜೆಡಿಎಸ್‌ ಬಿಜೆಪಿಯೊಂದಿಗೆ ಮಾಡಿಕೊಂಡ ಹೊಂದಾಣಿಕೆಯೇ ಕಾಂಗ್ರೆಸ್‌ಗೆ ವರವಾಯಿತು. ಏಕೆಂದರೆ ಈ ಹಿಂದೆಲ್ಲಾ ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದರು. ಬಣ ರಾಜಕಾರಣದ ಪರಿಣಾಮ ಕೆಲ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ನೊಂದಿಗೆ ಕೈಜೋಡಿಸುತ್ತಿದ್ದರು. ಅದೇ ಬಿಜೆಪಿ ಜತೆ ಹೋಗುತ್ತಿರಲಿಲ್ಲ. ಕಾರಣ ಬಿಜೆಪಿ, ಕಾಂಗ್ರೆಸ್‌ ಎರಡೂ ರಾಷ್ಟ್ರೀಯ ಪಕ್ಷಗಳು. ಹೊಂದಾಣಿಕೆ ಮಾಡಿಕೊಂಡ ಉದಾಹರಣೆಗಳಿಲ್ಲ.

ಆಲೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮಆಲೂರು: ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾರಿ ಬಹುಮತದ ಅಂತರದಿಂದ ವಿಜಯಶಾಲಿಯಾಗಿ ಲೋಕಸಭೆಗೆ ಆಯ್ಕೆಗೊಂಡಿದ್ದರಿಂದ ಹರ್ಷಿತರಾದ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಶ್ರೇಯಸ್ ಪಟೇಲ್ ವಿಜಯಶಾಲಿಯಾದರು ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರಗೊಂಡ ತಕ್ಷಣವೇ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು, ಶ್ರೇಯಸ್ ಪಟೇಲ್ ಪರ ಜಯಘೋಷಗಳನ್ನು ಕೂಗಿ ಸಿಹಿ ಹಂಚಿ ಸಂಭ್ರಮಿಸಿದರು.

ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಂತಕೃಷ್ಣ, ‘ಹಲವು ದಶಕಗಳ ಕಾಂಗ್ರೆಸ್ ಕಾರ್ಯಕರ್ತರ ಹೋರಾಟದ ಫಲವಾಗಿ ಇಂದು ನಮ್ಮ ಪಕ್ಷದ ಅಭ್ಯರ್ಥಿಗೆ ಜಯ ದೊರೆತಿದ್ದು, ಇದಕ್ಕೆ ನಮ್ಮ ಸರ್ಕಾರದ ಜನಪರ ಕಾರ್ಯಗಳು, ನಮ್ಮ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯ ಡಿ.ಕೆ. ಶಿವಕುಮಾರ್ ಹಾಗೂ ಉಸ್ತುವಾರಿ ಸಚಿವರ ಮಾರ್ಗದರ್ಶನ, ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಅವಿರತ ಶ್ರಮ ಮತ್ತು ನಮ್ಮ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಸರಳ ಹಾಗೂ ಸಜ್ಜನಿಕೆಯ ಗುಣಗಳೇ ಕಾರಣವಾಗಿದೆ’ ಎಂದು ಹೇಳಿದರು.

ತಾಲೂಕು ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿ, ಮುಖಂಡರಾದ ರಂಗೇಗೌಡ, ಟೀಕರಾಜು, ಶಿವಣ್ಣ,ಕಬೀರ್, ಅಹ್ಮದ್, ಸರ್ವರ್, ಹರೀಶ್, ರಾಜಶೇಖರ್, ಲೋಕೇಶ್, ಮಣಿ ಇತರರು ಇದ್ದರು.