ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬಹು ನಿರೀಕ್ಷಿತ 2025-26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ‌ಮೂಲ ಹಂತದ ಸಮೀಕ್ಷಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಒಟ್ಟಾರೆ 10,365 ಲಿಂಗತ್ವ ಅಲ್ಪಸಂಖ್ಯಾತರು ಗುರುತಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬಹು ನಿರೀಕ್ಷಿತ 2025-26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ‌ಮೂಲ ಹಂತದ ಸಮೀಕ್ಷಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಒಟ್ಟಾರೆ 10,365 ಲಿಂಗತ್ವ ಅಲ್ಪಸಂಖ್ಯಾತರು ಗುರುತಿಸಿಕೊಂಡಿದ್ದಾರೆ.

31 ಜಿಲ್ಲೆಯಲ್ಲಿ 2025ರ ಸೆ.15 ರಿಂದ ಸಮೀಕ್ಷೆ ನಡೆಸಿದ್ದು, 18 ವರ್ಷ ಮೇಲ್ಪಟ್ಟ 10,250 ಹಾಗೂ 18 ವರ್ಷದೊಳಗಿನ 115 ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 1428, ನಂತರದ ಸ್ಥಾನಗಳಲ್ಲಿ ಚಿಕ್ಕಬಳ್ಳಾಪುರ-1252, ಬೆಂಗಳೂರು ನಗರ ಜಿಲ್ಲೆ- 757, ಕೋಲಾರ- 638 ಮತ್ತು ಬೆಳಗಾವಿ ಜಿಲ್ಲೆಯಲ್ಲಿ 618 ಜನರು ಇರುವುದು ತಿಳಿದು ಬಂದಿದೆ.

ವಸತಿ ನಿಲಯಗಳಲ್ಲಿ ಆದ್ಯತೆಯ ಮೇರೆಗೆ ಲಿಂಗತ್ವ‌ ಅಲ್ಪಸಂಖ್ಯಾತರನ್ನು ದಾಖಲಿಸಿಕೊಳ್ಳಲು ಕ್ರಮಕೈಗೊಳ್ಳುವುದು, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿಕೆ, ಲಿಂಗತ್ವ‌ ಅಲ್ಪಸಂಖ್ಯಾತರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್‌ ನೀಡುವುದು, ಆರೋಗ್ಯ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ, ವಸತಿ, ಮೂಲಭೂತ ಸೌಕರ್ಯ, ಕ್ಷೇಮಾಭಿವೃದ್ದಿ ಬೋರ್ಡ್ ಸ್ಥಾಪಿಸುವುದು, ಸರ್ಕಾರಿ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ವಿಸ್ತರಿಸುವುದು ಸೇರಿದಂತೆ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಲಾಗಿದೆ.----

ಬಾಕ್ಸ್...

ಏಕೆ ಈ ಸಮೀಕ್ಷೆ?

ಲಿಂಗತ್ವ ಅಲ್ಪಸಂಖ್ಯಾತರ ಎಲ್ಲಾ ಪ್ರವರ್ಗಗಳು ಎದುರಿಸುವ ಭಯ, ಅವಮಾನ, ಲಿಂಗ ತಾರತಮ್ಯತೆ, ಸಾಮಾಜಿಕ ತಾರತಮ್ಯ, ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿಯಿಂದ ಹೊರತರಲು, ಸಮಾಜದಲ್ಲಿ ನೆಲೆ ಕಲ್ಪಿಸುವುದು ಸೇರಿದಂತೆ ಹಲವು ಉದ್ದೇಶಗಳಿಗಾಗಿ ಸಮೀಕ್ಷೆ ಕೈಗೊಳ್ಳಲಾಗಿತ್ತು.

ಈ ಬಗ್ಗೆ ಹೇಳಿಕೆ ನೀಡಿರುವ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ರಾಜ್ಯದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ, ಪುನರ್ವಸತಿ, ಸರ್ಕಾರದ ಸೌಲಭ್ಯ ಒದಗಿಸುವ ಹಿನ್ನೆಲೆಯಲ್ಲಿ ನಿಖರ ಮಾಹಿತಿ ಸಂಗ್ರಹಿಸಲು ಮೂಲಹಂತದ ಸಮೀಕ್ಷೆ ನಡೆಸಲಾಗಿತ್ತು. ಈಗ ಬಂದಿರುವ ವರದಿಯನ್ನು ಆಧರಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.