ರಾಜಧಾನಿಯ ವಿವಿಧ ರಸ್ತೆಗಳಲ್ಲಿವೆ ಇನ್ನೂ 3 ಸಾವಿರ ಡೇಂಜರ್‌ ಮರ! ತೆರವು ಮಾಡುವ ಕಾರ್ಯ ಆರಂಭ

| Published : Oct 04 2024, 01:00 AM IST / Updated: Oct 04 2024, 10:27 AM IST

ರಾಜಧಾನಿಯ ವಿವಿಧ ರಸ್ತೆಗಳಲ್ಲಿವೆ ಇನ್ನೂ 3 ಸಾವಿರ ಡೇಂಜರ್‌ ಮರ! ತೆರವು ಮಾಡುವ ಕಾರ್ಯ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿಯ ವಿವಿಧ ರಸ್ತೆಗಳಲ್ಲಿ ಜನರ ಪ್ರಾಣಕ್ಕೆ ಕುತ್ತು ತರಬಲ್ಲ ಮೂರು ಸಾವಿರಕ್ಕೂ ಅಧಿಕ ಅಪಾಯಕಾರಿ ಮರ ಹಾಗೂ ಮರ ರೆಂಬೆ-ಕೊಂಬೆಗಳನ್ನು ಗುರುತಿಸಲಾಗಿದ್ದು, ಇಂತಹ ಮರ, ಕೊಂಬೆಗಳನ್ನು ತೆರವು ಮಾಡುವ ಕಾರ್ಯ ಆರಂಭವಾಗಿದೆ.

ರಾಜು ಕಾಂಬಳೆ

 ಬೆಂಗಳೂರು : ರಾಜಧಾನಿಯ ವಿವಿಧ ರಸ್ತೆಗಳಲ್ಲಿ ಜನರ ಪ್ರಾಣಕ್ಕೆ ಕುತ್ತು ತರಬಲ್ಲ ಮೂರು ಸಾವಿರಕ್ಕೂ ಅಧಿಕ ಅಪಾಯಕಾರಿ ಮರ ಹಾಗೂ ಮರ ರೆಂಬೆ-ಕೊಂಬೆಗಳನ್ನು ಗುರುತಿಸಲಾಗಿದ್ದು, ಇಂತಹ ಮರ, ಕೊಂಬೆಗಳನ್ನು ತೆರವು ಮಾಡುವ ಕಾರ್ಯ ಆರಂಭವಾಗಿದೆ.

ಬೆಂಗಳೂರಿನಲ್ಲಿ ಮರ ಹಾಗೂ ಮರದ ರೆಂಬೆ ಕೊಂಬೆ ಬಿದ್ದು ಪ್ರಾಣ ಹಾನಿ ಸೇರಿದಂತೆ ಸಾಕಷ್ಟು ಆಸ್ತಿ ಪಾಸ್ತಿಗೆ ನಷ್ಟ ಉಂಟಾಗುತ್ತಿರುವ ದೂರುಗಳು ಹೆಚ್ಚಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಅರಣ್ಯ ವಿಭಾಗ ಅಪಾಯಕಾರಿ ಹಾಗೂ ಒಣಗಿರುವ ಮರಗಳ ಸಮೀಕ್ಷೆ ನಡೆಸಿದೆ. ಈ ವೇಳೆ 1,221 ಒಣಗಿರುವ ಮತ್ತು ಅಪಾಯಕಾರಿ ಮರ ಹಾಗೂ 1,951 ರೆಂಬೆ-ಕೊಂಬೆಗಳು ಸೇರಿದಂತೆ ಒಟ್ಟು 3,172 ಮರ ಹಾಗೂ ಮರದ ರೆಂಬೆ-ಕೊಂಬೆಗಳು ಅಪಾಯ ಉಂಟು ಮಾಡುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ.

ಕಳೆದ ಮೇ ತಿಂಗಳಿನಲ್ಲಿ ನಗರ ಪ್ರದಕ್ಷಿಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಸ್ತೆ ಬದಿ ಒಣಗಿದ ಮರ ಇರುವುದನ್ನು ಕಂಡು ಬಿಬಿಎಂಪಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ, ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಸಮೀಕ್ಷೆ ನಡೆಸಿ ಅಪಾಯಕಾರಿ ಮರ ಮತ್ತು ಮರದ ರೆಂಬೆ-ಕೊಂಬೆ ಗುರುತಿಸಿ ಈಗ ತೆರವಿಗೆ ಮುಂದಾಗಿದ್ದಾರೆ.

ಜಂಟಿ ತೆರವು ಕಾರ್ಯಚರಣೆ: ಪಾಲಿಕೆ ಹಾಗೂ ಬೆಸ್ಕಾಂ ಅಧಿಕಾರಿಗಳು ಜಂಟಿಯಾಗಿ ಅಪಾಯಕಾರಿ ಮತ್ತು ಒಣಗಿದ ಮರ, ಮರದ ರೆಂಬೆ-ಕೊಂಬೆಗಳ ತೆರವುಗೊಳಿಸುವ ಅಭಿಯಾನವನ್ನು ಸೆ.20ರಿಂದ ಆರಂಭಿಸಿದ್ದಾರೆ. ಈವರೆಗೆ, 295 ಅಪಾಯಕಾರಿ ಮರ ಹಾಗೂ 332 ರೆಂಬೆ-ಕೊಂಬೆ ತೆರವುಗೊಳಿಸಲಾಗಿದೆ. ಇನ್ನೂ 2,500ಕ್ಕೂ ಅಧಿಕ ಅಪಾಯಕಾರಿ ಮರ ಮತ್ತು ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವುದು ಬಾಕಿ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ಸಾವು, 16 ಮಂದಿಗೆ ಗಾಯ: ಪ್ರಸಕ್ತ ವರ್ಷ ಮರ ಹಾಗೂ ಮರದ ರೆಂಬೆ-ಕೊಂಬೆ ಬಿದ್ದ ಸಂದರ್ಭದಲ್ಲಿ ಇಬ್ಬರು ಆಟೋ ಚಾಲಕರು ಪ್ರಾಣ ಕಳೆದುಕೊಂಡಿದ್ದಾರೆ. 16 ಮಂದಿಗೆ ಎದೆ, ಬೆನ್ನು ಮೂಳೆ, ಕೈ-ಕಾಲಿನ ಮೂಳೆಗಳು ಮುರಿದಿದೆ. ಕೆಲವರಿಗೆ ಶಾಶ್ವತ ದೈಹಿಕ ಅಂಗವೈಕಲ್ಯ ಉಂಟಾಗಿದೆ. ಬಿಬಿಎಂಪಿಯು ಈ ರೀತಿಯ ಪ್ರಾಣ ಹಾನಿ ಹಾಗೂ ಶಾಶ್ವತ ಅಂಗವೈಕಲ್ಯ ಉಂಟಾದವರಿಗೆ ತಲಾ ₹5 ಲಕ್ಷ ಪರಿಹಾರ ನೀಡಿದೆ. ಇನ್ನು ಮೂಳೆ ಮುರಿತ ಸೇರಿದಂತೆ ವಿವಿಧ ಚಿಕಿತ್ಸೆಗೆ ಆಸ್ಪತ್ರೆ ವೆಚ್ಚವನ್ನು ಭರಿಸಿದೆ.

ಇಬ್ಬರು ಮೃತಪಟ್ಟ ಕುಟುಂಬ ಪರಿಹಾರ ನೀಡಲಾಗಿದೆ. 7 ಮಂದಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ಉಳಿದವರೆಗೆ ಚಿಕಿತ್ಸೆ ವೆಚ್ಚವಾಗಿ ₹3.56 ಲಕ್ಷ ನೀಡಲಾಗಿದೆ. ಈವರೆಗೆ ಬಿಬಿಎಂಪಿ ಮರ ಬಿದ್ದು ಹಾನಿ ಪರಿಹಾರ ಮತ್ತು ಚಿಕಿತ್ಸೆಗೆ ₹40 ಲಕ್ಷಕ್ಕೂ ಅಧಿಕ ಹಣ ವೆಚ್ಚ ಮಾಡಲಾಗಿದೆ.

ಮರ ಬೀಳುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಗರದ ಜನತೆ ಹೈರಾಣಾಗಿದ್ದಾರೆ. ಹೀಗಾಗಿ ಪಾಲಿಕೆ ವ್ಯಾಪ್ತಿಯ ಎಲ್ಲ ವಲಯದಲ್ಲಿ ಸಮೀಕ್ಷೆ ನಡೆಸಿ, ಅಪಾಯಕಾರಿ ಮರಗಳನ್ನು ಗುರುತಿಸಿದ್ದು, ತೆರವು ಮಾಡಲಾಗುತ್ತಿದೆ. ಈ ಮೂಲಕ ಮರಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಾಲಿಕೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.

-ಬಿಎಲ್‌ಜಿ ಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ ಅರಣ್ಯ ವಿಭಾಗ.ಒಣಗಿದ, ಅಪಾಯದ ಮರ ಹಾಗೂ ರೆಂಬೆ-ಕೊಂಬೆ ವಿವರ

ವಲಯಮರರೆಂಬೆ-ಕೊಂಬೆ

ದಕ್ಷಿಣ225291

ಆರ್‌ಆರ್‌ ನಗರ168226

ಬೊಮ್ಮನಹಳ್ಳಿ136203

ಪಶ್ಚಿಮ194235

ಮಹದೇವಪುರ113282

ಯಲಹಂಕ122213

ಪೂರ್ವ185354

ದಾಸರಹಳ್ಳಿ78147

ಒಟ್ಟು1,2211,951