ಜಗತ್ತಿನಲ್ಲಿರುವುದು ಐದೇ ದೇವರುಗಳು: ಗಣಪತಿಭಟ್ಟ ಜೋಷಿ

| Published : Dec 16 2023, 02:00 AM IST

ಸಾರಾಂಶ

ನರೇಗಲ್ಲದ ದ್ಯಾಮಮ್ಮ ದೇವಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆದಿರುವ ಶ್ರೀಗ್ರಾಮ ದೇವತಾ ದೇವಸ್ಥಾನದ ಕಳಸಾರೋಹಣದ ಸಭೆಯನ್ನುದ್ದೇಶಿಸಿ ಸೂಡಿಯ ನಿವೃತ್ತ ಪ್ರಾಚಾರ್ಯ ಗಣಪತಿಭಟ್ಟ ಜೋಷಿ ಮಾತನಾಡಿದರು. ಜಗತ್ತಿನಲ್ಲಿ ಇರುವುದು ಐದೇ ದೇವರುಗಳು. ಅವುಗಳನ್ನೇ ವಿವಿಧ ಹೆಸರುಗಳಿಂದ ಕರೆದು ನಾವುಗಳು ಪೂಜೆ ಮಾಡುತ್ತಿದ್ದೇವೆ. ಶಂಕರ, ನಾರಾಯಣ, ರವಿ, ಗಣಪತಿ ಮತ್ತು ದೇವಿ ಎಂಬ ಐದು ದೇವರುಗಳು ವಿವಿಧ ನಾಮಗಳಿಂದ ಪೂಜಿಸಲ್ಪಡುತ್ತೀವೆ ಎಂದರು.

ನರೇಗಲ್ಲ: ಜಗತ್ತಿನಲ್ಲಿ ಇರುವುದು ಐದೇ ದೇವರುಗಳು. ಅವುಗಳನ್ನೇ ವಿವಿಧ ಹೆಸರುಗಳಿಂದ ಕರೆದು ನಾವುಗಳು ಪೂಜೆ ಮಾಡುತ್ತಿದ್ದೇವೆ. ಶಂಕರ, ನಾರಾಯಣ, ರವಿ, ಗಣಪತಿ ಮತ್ತು ದೇವಿ ಎಂಬ ಐದು ದೇವರುಗಳು ವಿವಿಧ ನಾಮಗಳಿಂದ ಪೂಜಿಸಲ್ಪಡುತ್ತೀವೆ ಎಂದು ಸೂಡಿಯ ನಿವೃತ್ತ ಪ್ರಾಚಾರ್ಯ ಗಣಪತಿಭಟ್ಟ ಜೋಷಿ ಹೇಳಿದರು.

ಸ್ಥಳೀಯ ದ್ಯಾಮಮ್ಮ ದೇವಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆದಿರುವ ಶ್ರೀಗ್ರಾಮ ದೇವತಾ ದೇವಸ್ಥಾನದ ಕಳಸಾರೋಹಣದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಈಶ್ವರ ಸರ್ವಾಂತರ್ಯಾಮಿ. ಒಬ್ಬನೇ ಈಶ್ವರ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಟ್ಟು ಪೂಜೆಗೊಳ್ಳುತ್ತಿದ್ದಾನೆ. ನಮ್ಮ ಮನಸ್ಸಿನ ಶಾಂತಿ ನೆಮ್ಮದಿಗಳನ್ನು ಹಾಳು ಮಾಡಿಕೊಳ್ಳದೆ ಇರಲು ನಮಗೆ ಪೂಜೆ, ಪುನಸ್ಕಾರ, ಹೋಮ, ಹವನ, ಜಾತ್ರೆಗಳು ಸಹಾಯ ಮಾಡುತ್ತವೆ. ಇವುಗಳ ಆಚರಣೆಯಿಂದ ನಮ್ಮೆಲ್ಲರ ಮನಸ್ಸಿಗೆ ಸಮಾಧಾನ ಸಿಗುವುದರ ಜೊತೆಗೆ ನಾವೆಲ್ಲ ಒಂದು ಎಂಬ ಭಾವನೆ ಎಲ್ಲರಲ್ಲಿಯೂ ಮೂಡುತ್ತದೆ ಎಂದರು.

ಮಾನವರಲ್ಲಿ ಎರಡು ಬಗೆಗಳಿವೆ. ಉತ್ತಮ ಮನುಷ್ಯ ಮತ್ತು ಕೆಟ್ಟ ಮನುಷ್ಯ ಎಂದು. ಯಾರಿಗೆ ಸದಾಕಾಲ ಒಳ್ಳೆಯದನ್ನು ಬಯಸುತ್ತ, ಸಮಾಜದೊಂದಿಗೆ ಬೆರೆತು ತನ್ನ ಇರುವಿಕೆಯನ್ನು ವ್ಯಕ್ತಪಡಿಸುತ್ತಾನೆಯೋ ಆತ ಉತ್ತಮ ಮಾನವ. ಯಾವನು ಇನ್ನೊಬ್ಬರಿಗೆ ಸದಾಕಾಲ ಪೀಡೆ ಮತ್ತು ಕಂಟಕ ನೀಡುತ್ತಾನೆಯೋ ಅವನು ಕೆಟ್ಟ ಮನುಷ್ಯ. ಇಂತಹ ಜಾತ್ರೆ, ಉತ್ಸವ ಆಚರಣೆಗಳ ಮೂಲಕ ನಾವೆಲ್ಲರೂ ಉತ್ತಮ ಮಾನವರಾಗಲು ಪ್ರಯತ್ನಿಸಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಆರ್.ಕೆ. ಗಚ್ಚಿನಮಠ ಮಾತನಾಡಿ, ನಾವೆಲ್ಲರೂ ಒಮ್ಮನದಿಂದ, ಒಂದೇ ಭಾವನೆಯಿಂದ ಈ ಜಾತ್ರೆ, ಉತ್ಸವಗಳನ್ನು ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಅಂತಹ ವಾತಾವರಣ ನಮ್ಮ ನರೇಗಲ್ಲದಲ್ಲಿರುವುದು ನಮ್ಮ ಸೌಭಾಗ್ಯ. ಇಂದು ಗಣಪತಿಭಟ್ಟರು ಹೇಳಿದ ಶ್ರೀ ದೇವಿ ಮಹಾತ್ಮೆಯು ನಮ್ಮೆಲ್ಲರ ಕಣ್ಣು ತೆರೆಸಿದೆ ಎಂದರು.

ಈ ವೇಳೆ ನಿವೃತ್ತ ಪ್ರಾ, ಹಾಸ್ಯ ಕಲಾವಿದೆ ಕವಿತಾ ಕಾಶಪ್ಪನವರ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಬಿ.ಬಿ. ಕುರಿ ನಿರೂಪಿಸಿದರು. ಎಸ್.ಎ.ವಿ.ವಿ.ಪಿ ಸಮಿತಿಯ ಕಿವುಡ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ವಚನ ನೃತ್ಯ ಅಮೋಘವಾಗಿತ್ತು. ಆನಂದ ಕೊಟಗಿ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಅರುಣ.ಬಿ.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಂ.ಕೆ.ಬೇವಿನಕಟ್ಟಿ ವಂದಿಸಿದರು.