ವಿದ್ಯಾರ್ಥಿಗಳ ಕಲಿಕೆಗೆ ಆಧುನಿಕ ಮಾಧ್ಯಮಗಳಲ್ಲಿ ಸಾಕಷ್ಟು ಅವಕಾಶಗಳಿವೆ-ಸಿ. ಗೋಪಾಲ

| Published : Jun 12 2024, 12:33 AM IST

ವಿದ್ಯಾರ್ಥಿಗಳ ಕಲಿಕೆಗೆ ಆಧುನಿಕ ಮಾಧ್ಯಮಗಳಲ್ಲಿ ಸಾಕಷ್ಟು ಅವಕಾಶಗಳಿವೆ-ಸಿ. ಗೋಪಾಲ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಕಲಿಕೆಗೆ ಪೂರಕ ಮಾಹಿತಿಗಾಗಿ ಆಧುನಿಕ ಮಾಧ್ಯಮಗಳಲ್ಲಿ ಸಾಕಷ್ಟು ಅವಕಾಶಗಳಿವೆ. ತರಗತಿಗಳಿಗೆ ನಿರಂತರವಾಗಿ ಪಾಲ್ಗೊಂಡು, ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ವಿದ್ವಾಂಸರ ಹಾಗೂ ಇಲ್ಲಿನ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಉನ್ನತ ವ್ಯಾಸಂಗದಲ್ಲಿ ತೊಡಗಿಕೊಳ್ಳಿ ಎಂದು ಹಾವೇರಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ ಹೇಳಿದರು.

ಶಿಗ್ಗಾಂವಿ: ವಿದ್ಯಾರ್ಥಿಗಳ ಕಲಿಕೆಗೆ ಪೂರಕ ಮಾಹಿತಿಗಾಗಿ ಆಧುನಿಕ ಮಾಧ್ಯಮಗಳಲ್ಲಿ ಸಾಕಷ್ಟು ಅವಕಾಶಗಳಿವೆ. ತರಗತಿಗಳಿಗೆ ನಿರಂತರವಾಗಿ ಪಾಲ್ಗೊಂಡು, ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ವಿದ್ವಾಂಸರ ಹಾಗೂ ಇಲ್ಲಿನ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಉನ್ನತ ವ್ಯಾಸಂಗದಲ್ಲಿ ತೊಡಗಿಕೊಳ್ಳಿ ಎಂದು ಹಾವೇರಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ ಹೇಳಿದರು.

ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಎಂ.ಎ. ಅರ್ಥಶಾಸ್ತ್ರ ಹಾಗೂ ಸಮಾಜಶಾಸ್ತ್ರ ಅಧ್ಯಯನ ವಿಭಾಗದಿಂದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಆಯೋಜಿಸಲಾದ ೨೦೨೩-೨೪ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ವಹಿಸಿ ಮಾತನಾಡಿ, ಸಮಸ್ಯೆ ಮತ್ತು ಸವಾಲುಗಳ ನಡುವೆ ಸಾಧಿಸುವ ಛಲ ಇರಬೇಕು ಅಂದಾಗ ಮಾತ್ರ ಸಮಾಜದಲ್ಲಿ ಸಾಧಕರಾಗಿ ಹೊರ ಹೊಮ್ಮಲು ಸಾಧ್ಯವಾಗಲಿದೆ. ಸಮಾಜದಿಂದ ಹಾಗೂ ಅಧ್ಯಾಪಕರಿಂದ ಪಾಠವನ್ನು ಕಲಿಯುತ್ತೇವೆ ಎಂದರು. ತಿಳಿ ಹೇಳಿ ದಾರಿ ತೋರುವ ಗುರು ಇರಬೇಕು, ಆ ಹಿನ್ನೆಲೆಯಲ್ಲಿ ಶಿಶುವಿನಹಾಳ ಶರೀಫರು ಹಾಗೂ ಗುರು ಗೋವಿಂದಭಟ್ಟರು ನೆನಪಿಗೆ ಬರುತ್ತಾರೆ. ಗುರು ಶಿಷ್ಯರ ಬಾಂಧವ್ಯ ಹೀಗಿರಬೇಕು, ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು ಎಂದರು.

ಕುಲಸಚಿವರಾದ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ವಿಭಿನ್ನ ಹಾಗೂ ವಿಶೇಷವಾದ ವಾತಾವರಣದಲ್ಲಿ ಜಾನಪದಕ್ಕೆ ಇರುವ ಜಗತ್ತಿನ ಏಕೈಕ ವಿಶ್ವವಿದ್ಯಾಲಯ ಇದಾಗಿದ್ದು, ನುರಿತ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಖುಷಿ ವಿಚಾರ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಸ್ತಿ. ಕಲಿಕೆಯಿಂದ ಸ್ವಾವಲಂಬನೆ ಬದುಕನ್ನು ಕಟ್ಟಿಕೊಂಡು ಜಾನಪದ ವಿಶ್ವವಿದ್ಯಾಲಯದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯವಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದಿದೆ ಎಂದರು.

ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ಎಂ. ಸಾಲಿ ಅವರು ಮಾತನಾಡಿ, ಜೀವನದಲ್ಲಿ ಸಮಸ್ಯೆಗಳು, ತೊಂದರೆಗಳು ಎಲ್ಲರಿಗೂ ಇದ್ದದ್ದೇ. ಆದರೆ ಅದನ್ನು ಮೆಟ್ಟಿ ಬದುಕುವ ಕಲೆಯನ್ನು ನಮ್ಮಲ್ಲಿ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಧಿಸುವ ಹಂಬಲ ಇರಬೇಕು, ವಿದ್ಯಾರ್ಥಿಗಳ ಜೀವನ ಬಂಗಾರದಂತದ್ದು, ತಮ್ಮ ಶಕ್ತಿ ಹಾಗೂ ಸಮಯ ವ್ಯರ್ಥ ಮಾಡದೆ ಬಳಸಿಕೊಳ್ಳಿ ಎಂದರು.

ಸಮಾಜಶಾಸ್ತ್ರ ವಿಭಾಗದ ಸಂಯೋಜನಾಧಿಕಾರಿಗಳು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ವೆಂಕನಗೌಡ ಪಾಟೀಲ, ಸಹಾಯಕ ಸಂಶೋಧನಾಧಿಕಾರಿ ಡಾ. ಮಲ್ಲಿಕಾರ್ಜುನ ಮಾನ್ಪಡೆ, ಅರ್ಥಶಾಸ್ತ್ರ ವಿಭಾಗದ ಸಂಯೋಜನಾಧಿಕಾರಿಗಳು ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಅರುಣಬಾಬು ಅಂಗಡಿ, ಸಹಾಯಕ ಪ್ರಾಧ್ಯಾಪಕ ಡಾ. ಉತ್ತಮ್ ಕೆ.ಹೆಚ್. ಮಾತನಾಡಿದರು. ವಿದ್ಯಾರ್ಥಿಗಳು ಸ್ವಾಗತ ಸ್ವೀಕರಿಸಿ, ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿದ್ಯಾರ್ಥಿಗಳಾದ ಜ್ಯೋತಿ ಹೊನ್ನಪ್ಪನವರ ಸ್ವಾಗತಿಸಿದರು. ರಮೇಶ ಹಾಗೂ ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ಪವಿತ್ರಾ ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.