ಕೊರಟಗೆರೆಯಲ್ಲೂ ಮೀರ್‌ ಸಾಧಕರಿದ್ದಾರೆ

| Published : Mar 04 2025, 12:33 AM IST

ಸಾರಾಂಶ

ತೆರವು ಮಾಡಿದ ಸ್ಥಳದಲ್ಲೇ ಕೊರಟಗೆರೆಯ ಅಧಿಕಾರಿ ವರ್ಗ ಮತ್ತೇ ಅಲ್ಲೇ ಕನ್ನಡ ಧ್ವಜಸ್ತಂಭ ಪ್ರತಿಷ್ಠಾಪನೆ ಮಾಡ್ಬೇಕು. ಇಲ್ಲವಾದ್ರೇ ನೀವು ಹೋದ ಕಡೆಯೆಲ್ಲ ನಾಡದ್ರೋಹಿ ಎಂಬ ಪಟ್ಟಕಟ್ಟಿ ಹೋರಾಟ ಮಾಡುತ್ತಾರೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತೆರವು ಮಾಡಿದ ಸ್ಥಳದಲ್ಲೇ ಕೊರಟಗೆರೆಯ ಅಧಿಕಾರಿ ವರ್ಗ ಮತ್ತೇ ಅಲ್ಲೇ ಕನ್ನಡ ಧ್ವಜಸ್ತಂಭ ಪ್ರತಿಷ್ಠಾಪನೆ ಮಾಡ್ಬೇಕು. ಇಲ್ಲವಾದ್ರೇ ನೀವು ಹೋದ ಕಡೆಯೆಲ್ಲ ನಾಡದ್ರೋಹಿ ಎಂಬ ಪಟ್ಟಕಟ್ಟಿ ಹೋರಾಟ ಮಾಡುತ್ತಾರೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಬೃಹತ್ ಕನ್ನಡ ಧ್ವಜ ಸ್ತಂಭ ತೆರವು ಖಂಡಿಸಿ ಸರಕಾರಿ ಬಸ್ ನಿಲ್ದಾಣದಿಂದ ಪಪಂ ಕಚೇರಿಯವರೆಗೆ ಕರವೇ ನಡೆಸಿದ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸರಳಸಜ್ಜನ ರಾಜಕಾರಣಿ ಗೃಹಸಚಿವ ಡಾ.ಜಿ.ಪರಮೇಶ್ವರ ಸ್ವಕ್ಷೇತ್ರದಲ್ಲೇ ರಾತ್ರೋರಾತ್ರಿ ಕನ್ನಡ ಧ್ವಜಸ್ತಂಭದ ತೆರವು ನಡೆದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಡಾ.ಜಿ.ಪರಮೇಶ್ವರ ಜೊತೆ ನಾನೇ ಖುದ್ದಾಗಿ ಮಾತನಾಡ್ತೀನಿ. ಕನ್ನಡ ಧ್ವಜಸ್ತಂಭದ ತೆರವು ಕೆಲಸವನ್ನು ಕನ್ನಡಿಗ ಅಧಿಕಾರಿಗಳೇ ಮಾಡಿದ್ರೆ ನಾವು ಯಾರ ವಿರುದ್ದ ಹೋರಾಟ ಮಾಡ್ಬೇಕು. ಹೆತ್ತತಾಯಿಯ ಕರುಳನ್ನು ಕುಯ್ಯುವ ಕೆಲಸವನ್ನು ಅಧಿಕಾರಿ ವರ್ಗ ಮಾಡಿದೆ ಎಂದು ಆರೋಪ ಮಾಡಿದರು. ಸಂಗೋಳ್ಳಿ ರಾಯಣ್ಣನ ಬ್ರಿಟಿಷರಿಗೆ ಹಿಡಿದುಕೊಟ್ಟ ಮೀರ್ ಸಾಧಕರ ಸಂತತಿ ಇನ್ನೂ ಕೊರಟಗೆರೆಯಲ್ಲೇ ಉಳಿದಿದೆ ಅನ್ನೋದಿಕ್ಕೆ ಕನ್ನಡಧ್ವಜದ ತೆರವಿನ ಘಟನೆಯೇ ಪ್ರಮುಖ ಸಾಕ್ಷಿ. ನಾವು ತಮಿಳುನಾಡು, ಕೇರಳ, ಮಹಾರಾಷ್ಟ್ರದ ವಿರುದ್ದ ಹೋರಾಟ ಮಾಡಬೇಕಾ ಅಥವಾ ನಮ್ಮ ಅಧಿಕಾರಿಗಳ ವಿರುದ್ಧ ಮಾಡಬೇಕಾ?. ಹೆತ್ತ ತಾಯಿಗೆ ದ್ರೋಹ ಮಾಡೋದು ಒಂದೇ ನಾಡಧ್ವಜವನ್ನು ಕಿತ್ತು ಹಾಕೋದು ಒಂದೇ . ಪಾಕಿಸ್ತಾನ ಗಡಿಯಲ್ಲಿ ರಾಷ್ಟ್ರ ಧ್ವಜ ತೆಗೆಸಿದ ರೀತಿ ನಮ್ಮ ಕೊರಟಗೆರೆಯಲ್ಲಿ ಕನ್ನಡಧ್ವಜ ತೆಗೆಸಿ ಖುಷಿ ಪಡುತ್ತಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು.ನನ್ನಿಬ್ಬರು ಮಕ್ಕಳು ಹುಟ್ಟುವಾಗ್ಲೂ ನನಗೆ ಜೈಲಿಗೆ ಹಾಕಿದ್ರು. ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ದೇವೇಗೌಡರ ಕಾಲದಲ್ಲೂ ಜೈಲಿಗೆ ಹೋಗಿದ್ದೆ. ಕನ್ನಡ ನೆಲ-ಭಾಷೆಗಾಗಿ ಇನ್ನೂ 100 ಸಲ ಜೈಲಿಗೆ ಹೋಗಲು ನಾನು ಸದಾಸಿದ್ದ. ಕೋರ್ಟ್ ಮತ್ತು ಜೈಲಿಗೆ ಹೋಗಲು ಹೆದರುವವನಲ್ಲ ನಾನು. ಕನ್ನಡಾಂಬೆಯ ರಕ್ಷಣೆ ಮಾಡಲು ಹೋದ ನನಗೆ ೧೬ ಪ್ರಕರಣ ಹಾಕಿ ೧೮ ದಿನ ಜೈಲಲ್ಲಿ ಹಾಕಿದ್ರು. ಕನ್ನಡ ನೆಲ ಮತ್ತು ಭಾಷೆಗೆ ಕುತ್ತು ಬಂದರೆ ಯಾರು ಸಹಿಸಿಕೊಳ್ಳಬಾರದು ಎಂದರು.

ಪ್ರತಿಭಟನೆಯಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ, ಉಪಾಧ್ಯಕ್ಷ ವೀರಭದ್ರಪ್ಪ, ನಟರಾಜ್.ಕೆ.ಎನ್. ಬೆಂಗಳೂರು ನಗರಧ್ಯಕ್ಷ ಧರ್ಮರಾಜ್, ಉಪಾಧ್ಯಕ್ಷ ಪುಟ್ಟೇಗೌಡ, ಕಾರ್ಯದರ್ಶಿ ಮಲ್ಲಿಕಾರ್ಜುನ್, ಜಿಲ್ಲಾಧ್ಯಕ್ಷ ರಂಗಸ್ವಾಮಿ, ಮಹಿಳಾ ಅಧ್ಯಕ್ಷೆ ಸುನಿತಾಮೂರ್ತಿ, ಮಧುಗಿರಿ ಶಿವಕುಮಾರ್, ಶಿರಾ ಕಿಶೋರ್, ಕುಣಿಗಲ್ ಮಂಜುನಾಥ್, ಚಿಕ್ಕನಾಯಕನಹಳ್ಳಿ ಪ್ರಕಾಶ್, ಕೊರಟಗೆರೆ ನಗರಾಧ್ಯಕ್ಷ ಸೈಪುಲ್ಲಾ ಸೇರಿದಂತೆ ನೂರಾರು ಜನ ಕರವೇ ಕಾರ್ಯಕರ್ತರು ಇದ್ದರು.