ಸಾರಾಂಶ
ವಾಲ್ಮೀಕಿಯವರು ರಚಿಸಿದ ಶ್ರೀರಾಮಾಯಣ ಗ್ರಂಥವು ಜನರಲ್ಲಿ ದಯೆ, ಅನುಕಂಪ. ಕರುಣೆ, ಪ್ರೀತಿ ಮುಂತಾದುವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಮೀರಿಸುವ ಯಾವುದೇ ಗ್ರಂಥಗಳು ಈ ಜಗತ್ತಿನಲ್ಲಿ ಇಲ್ಲ ಎಂದು ಜಾನಪದ ವಿದ್ವಾಂಸ ಪ್ರೊ.ಪಿ.ಕೆ.ರಾಜಶೇಖರ್ ಅಭಿಪ್ರಾಯಪಟ್ಟರು.ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪ್ರಧಾನ ಭಾಷಣ ಮಾಡಿ, ಭಾರತವು ಪ್ರಾಚೀನ ಸಂಸ್ಕೃತಿಯ, ವೇದ, ಉಪನಿಷತ್ತುಗಳನ್ನು ಒಳಗೊಂಡ ಧಾರ್ಮಿಕ ಕೇಂದ್ರ. ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಭಾರತೀಯ ಸಂಸ್ಕೃತಿಯ ಪ್ರತೀಕಗಳಾಗಿವೆ ಎಂದರು.
ಇಲ್ಲಿನ ಜನರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ಈ ಗ್ರಂಥಗಳಿಂದ ಅಣ್ಣ- ತಮ್ಮಂದಿರು ಹಾಗೂ ತಂದೆ- ತಾಯಿಗಳು ಸಹಬಾಳ್ವೆಯ ಜೀವನ ಸಾಗಿಸಲು ಅನುಕೂಲವಾಗುವ ಮಾನವೀಯ ಮೌಲ್ಯಗಳನ್ನು ಒಳಗೊಂಡ ಗ್ರಂಥವಾಗಿವೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ವಾಲ್ಮೀಕಿಯವರು ರಚಿಸಿದ ಶ್ರೀರಾಮಾಯಣ ಗ್ರಂಥವು ಜನರಲ್ಲಿ ದಯೆ, ಅನುಕಂಪ. ಕರುಣೆ, ಪ್ರೀತಿ ಮುಂತಾದುವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ತಹಸೀಲ್ದಾರ್ ಲೆ.ಜನರಲ್ ಡಾ.ಎಸ್.ಯು. ಅಶೋಕ್, ತಾಪಂ ಇಒ ಸುಷ್ಮ, ಜಿಲ್ಲಾ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ನರಸನಾಯಕ, ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಮುಖಂಡ ಅಗ್ರಹಾರಬಾಚಹಳ್ಳಿ ಜಗದೀಶ್, ಬಿಇಒ ಬಿ.ಚಂದ್ರಶೇಖರ್, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಜಿಪಂ ಮಾಜಿ ಸದಸ್ಯ ರಾಮದಾಸ್, ಬಿಸಿಎಂ ವೆಂಕಟೇಶ್, ಶಿವಪ್ಪ, ಪೊಲೀಸ್ ನಿರೀಕ್ಷಕಿ ಸುಮಾರಾಣಿ, ಸಿಡಿಪಿಒ ಅರುಣ್ ಕುಮಾರ್, ಟಿಎಚ್ಒ ಡಾ,ಅಜಿತ್, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಹಾಗೂ ವಿದ್ಯುತ್ ಗುತ್ತಿಗೆದಾರ ಸಿದ್ದೇಶ್ ಹಲವರು ಇದ್ದರು.