ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಾಧಿಸಬಲ್ಲವನಿಗೆ ಜಗತ್ತಿನಲ್ಲಿ ಅಡೆತಡೆಗಳೇ ಇಲ್ಲ. ವಿಫಲತೆ ಜೀವನದಲ್ಲಿ ಇದ್ದದ್ದೇ ಅದನ್ನು ಮೆಟ್ಟಿ ನಿಲ್ಲಬೇಕು. ಅಂದಾಗ ಮಾತ್ರ ನಮಗೆ ಗೆಲುವು ಸಾಧ್ಯ ಎಂದು ಕೊಪ್ಪಳದ ಪ.ಪೂ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ನುಡಿದರು.ಪಟ್ಟಣದ ಕೆಎಲ್ಇ ಕಾಲೇಜು ಎದುರಿನ ಬಯಲು ಮೈದಾನದಲ್ಲಿ ನಡೆಯುತ್ತಿರುವ 3ನೇ ದಿನದ ಅಧ್ಯಾತ್ಮ ಪ್ರವಚನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಣ್ಣು ಇಲ್ಲದ ವ್ಯಕ್ತಿ ಮೌಂಟ್ಎವರೆಸ್ಟ್ ಏರಿದ, ಇದು ಸಾಧನೆ. ಎಲ್ಲರೂ ಬಯಸುವುದು ಸಫಲರಾಗಲು ಮಾತ್ರ. ವಿಫಲತೆ ಯಾರಿಗೂ ಬೇಡ. ಮನುಷ್ಯನ ಜೀವನದಲ್ಲ ವಿಫಲತೆ ಬರುತ್ತದೆ. ಏಕೆ ಮನುಷ್ಯ 3 ಕಾರಣಗಳಿಂದ ಸೋಲನುಭವಿಸುತ್ತಾನೆ?. ಏನು ಗೊತ್ತಿಲ್ಲದೆ, ವಿಶ್ವಾಸವಿಲ್ಲದೆ, ನಿರ್ಣಯವಿಲ್ಲದೆ. ಹೀಗಾಗಿ ಈ ಮೂರನ್ನು ತಿಳಿಯದಿರುವವರು ಮಾತ್ರ ಸೋಲು ಅನುಭವಿಸುತ್ತಾರೆ. ಈ ಮೂರು ತಿಳಿದವರು ಸಫಲರಾಗುತ್ತಾರೆ. ದೇವರು ಮನುಷ್ಯನಿಗೆ ಎಲ್ಲ ವಿಶೇಷ ಸೌಲಭ್ಯಗಳನ್ನು ನೀಡಿದ್ದಾನೆ. ಇದು ನಿನಗೆ ತಿಳಿದಿದ್ದರೆ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಎಲ್ಲವನ್ನು ಕಲಿತೆ ಬದುಕಲು ಸಾಧ್ಯವಿಲ್ಲ, ಒಂದಿಷ್ಟು ಶ್ರದ್ಧೆ ಮತ್ತು ನಂಬಿಕೆ ಬೇಕಾಗುತ್ತದೆ. ನೀರಿನ ಆಳಕ್ಕಿಳಿದು ಈಜು ಕಲಿಯುತ್ತೇನೆ ಎಂಬ ಶ್ರದ್ಧೆ ಬೇಕು ಎಂದು ವಿವರಿಸಿದರು.ಮನುಷ್ಯನಿಗೆ ಮೊದಲು ತನ್ನ ಮೇಲೆ ತನಗೆ ಭರವಸೆ ಇರಬೇಕು. ಯಾರನ್ನೂ ನಂಬದೆ ಜನ್ಮಕೊಟ್ಟ ಭಗವಂತನನ್ನು ನಂಬಿ ನಡೆದರೇ ಸನ್ಮಾರ್ಗದಲ್ಲಿ ಬದುಕಲು ಸಾಧ್ಯ. ಜೀವನದಲ್ಲಿ ಸೋಲು, ಗೆಲವು ಇರುತ್ತವೆ. ಮನುಷ್ಯ ಈ ವಿಫಲತೆಗಳನ್ನು ಮೀರಿ ಬದುಕುವ ಕಲೆ ಕಲಿಯಬೇಕು. ಒಳ್ಳೆಯ ಗುಣಗಳನ್ನು ಸಂಗ್ರಹ ಮಾಡಬೇಕು. ದೇಹ ಭಗವಂತ ನೀಡಿದ ಖಜಾನೆ ಇದ್ದ ಹಾಗೆ. ಅಲ್ಲಿ ಅಜ್ಞಾನ, ಅಶ್ರದ್ಧೆ, ಸಂಶಯ ಇಡುವುದಕ್ಕಿಂತ, ಜೀವನದ ಬಗ್ಗೆ ಅರಿವು, ಪ್ರಜ್ಞೆ, ನಿರ್ಣಯ ಇಂತಹ ಶ್ರೇಷ್ಠ ಗುಣಗಳಿದ್ದರೇ ಸಾಕು ಆ ಬದುಕು ಬಂಗಾರವಾಗುತ್ತದೆ ಎಂದರು.ಭಗವಂತ ಆನೆ ನಿರ್ಮಾಣ ಮಾಡಿ ಶಕ್ತಿ ಕೊಟ್ಟ. ಆದರೆ, ಯುಕ್ತಿ ಕೊಡಲಿಲ್ಲ. ಜಿಂಕೆಗೆ ಓಡುವ ಶಕ್ತಿ ಕೊಟ್ಟ, ಕೋಗಿಲೆಗೆ ಹಾಡುವ ಶಕ್ತಿ ಕೊಟ್ಟ, ಗಿಳಿಗೆ ಬಣ್ಣ ಕೊಟ್ಟ ಆದರೆ, ಪಂಜರದಲ್ಲಿಟ್ಟ. ಆದರೆ, ಶಕ್ತಿ, ಯುಕ್ತಿ, ಓಡುವ, ಹಾಡುವ, ಮಾತನಾಡುವ ಶಕ್ತಿಯನ್ನು ಮನುಷ್ಯನಿಗೆ ಮಾತ್ರ ಕೊಟ್ಟು ವಿಶೇಷ ಜ್ಞಾನ ನೀಡಿದ. ಆದ್ದರಿಂದಲೇ ಮನುಷ್ಯ ವಿಶೇಷ ಕಾಣಿಕೆಯಾಗಿದ್ದಾನೆ ಎಂದು ಕೆಲವು ದೃಷ್ಟಾಂತಗಳನ್ನು ನೀಡಿದ ವಿವರಿಸಿದರು.ಪಟ್ಟಣದಲ್ಲಿ 3ನೇ ದಿನದ ಸದ್ಭಾವನಾ ಪಾದಯಾತ್ರೆಯೂ ಬಸವನಗರ ಮಹಾದ್ವಾರ, ಸಿ.ಆರ್.ಕುಳ್ಳೊಳ್ಳಿ ಸರ್ಕಲ್, ಬಂಡಿಗಣಿ ಮಠದ ರಸ್ತೆ ಮೂಲಕ ಸಿಕೆ ಚಿಂಚಲಿ ಶಾಲೆಯ ಹತ್ತಿರ ಸಮಾಪ್ತಿಗೊಂಡಿತು. ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸೇರಿದಂತೆ ಅನೇಕ ಪೂಜ್ಯರು ಭಾಗವಹಿಸಿದ್ದರು. ಅಮಲಝರಿಯ ಜ್ಞಾನಮಯಾನಂದ ಸ್ವಾಮೀಜಿ ಮಾತನಾಡಿದರು. ಬೆಳಗಿನ ಸದ್ಭಾವನ ಪಾದಯಾತ್ರೆ ಮತ್ತು ಸಂಜೆಯ ಅಧ್ಯಾತ್ಮ ಪ್ರವಚನದಲ್ಲಿ ಭಜನೆ ಮೇಳ ಮತ್ತು ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಸದ್ಭಕ್ತರು ಭಾಗಿಯಾಗಿದ್ದರು.ಭಗವಂತನು ನೀಡಿರುವ ಈ ಬದುಕಿನಲ್ಲಿ ಶ್ರದ್ಧೆ ಮತ್ತು ನಂಬಿಕೆ ಬಹುಮುಖ್ಯ ಪಾತ್ರವಹಿಸುತ್ತವೆ. ಮನುಷ್ಯ ತನ್ನ ಮೇಲೆ ತನಗೆ ಶ್ರದ್ಧೆ ಇರಬೇಕು. ನಾಲ್ಕಾರು ಜನರ ಮೂಢನಂಬಿಕೆಯ ಮಾತುಗಳಿಗೆ ಕಿವಿಗೊಡಬಾರದು. ಕೊಟ್ಟು ಮಾರು ಹೋಗಬಾರದು. ಈ ಸೃಷ್ಟಿ ನಮಗೆ ಕಣ್ಣಿಗೆ ಕಾಣುವ ಪ್ರಪಂಚ. ಸೃಷ್ಟಿಕರ್ತ ಬಯಲಿಗೆ ಬಣ್ಣವನ್ನು ತುಂಬಿದ್ದಾನೆ. ಪಂಚಭೂತಗಳನ್ನು ನಿರ್ಮಾಣ ಮಾಡಿದ್ದಾನೆ. ಮನುಷ್ಯ ಇದನ್ನು ತಿಳಿದುಕೊಳ್ಳಬೇಕು. ನಂತರ ಈ ಸೃಷ್ಟಿಯಲ್ಲಿ ತಾನೂ ಒಂದು ಜೀವಿ ಎಂದು ಬದುಕಿ ಸಂತಸಪಡಬೇಕು. ಇದು ಸೃಷ್ಟಿಯ ವಿಶೇಷ ಕಾಣಿಕೆಯಾಗಿದ್ದು, ಅದನ್ನು ಕಣ್ಣಿಂದ ಕಂಡು ಹೃದಯಕ್ಕೆ ತುಂಬಿಕೊಳ್ಳಬೇಕು.
-ಅಭಿನವ ಗವಿಸಿದ್ಧೇಶ್ವರ ಶ್ರೀಗಳು, ಕೊಪ್ಪಳದ ಗವಿಸಿದ್ಧೇಶ್ವರ ಮಠ.;Resize=(128,128))
;Resize=(128,128))
;Resize=(128,128))
;Resize=(128,128))