ಹನುಮಸಾಗರ ಪಟ್ಟಣದ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಪ್ರತಿದಿನ ನೂರಾರು ಸಾರ್ವಜನಿಕರು ವಿವಿಧ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕಾಗಿ ಜೆಸ್ಕಾಂ ಕಚೇರಿಗೆ ಬರುತ್ತಾರೆ. ಆದರೆ ಕಚೇರಿಯಲ್ಲಿ ಸಮರ್ಪಕವಾಗಿ ಅಧಿಕಾರಿಗಳು ಲಭ್ಯವಿಲ್ಲದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಹನುಮಸಾಗರ: ಪಟ್ಟಣದ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಪ್ರಮುಖ ವಾಣಿಜ್ಯ ಹಾಗೂ ಆಡಳಿತಾತ್ಮಕ ಕೇಂದ್ರವಾಗಿದ್ದು, ಪ್ರತಿದಿನ ನೂರಾರು ಸಾರ್ವಜನಿಕರು ವಿವಿಧ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕಾಗಿ ಜೆಸ್ಕಾಂ ಕಚೇರಿಗೆ ಬರುತ್ತಾರೆ. ಆದರೆ ಕಚೇರಿಯಲ್ಲಿ ಸಮರ್ಪಕವಾಗಿ ಅಧಿಕಾರಿಗಳು ಲಭ್ಯವಿಲ್ಲದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ವ್ಯಾಪ್ತಿಗೆ ಬರುವ ಹನುಮಸಾಗರದಲ್ಲಿ ಪ್ರತಿ ತಿಂಗಳು ಕೋಟ್ಯಂತರ ರುಪಾಯಿ ವಿದ್ಯುತ್ ಬಿಲ್ ವಹಿವಾಟು ನಡೆಯುತ್ತಿದೆ. ಇಂತಹ ಪ್ರಮುಖ ಪಟ್ಟಣದಲ್ಲಿ ಜೆಸ್ಕಾಂ ಅಧಿಕಾರಿಯೊಬ್ಬರು ನಿಯಮಿತವಾಗಿ ಕಚೇರಿಯಲ್ಲಿ ಲಭ್ಯವಿಲ್ಲದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಆ. 15ರಂದು ಜೆಸ್ಕಾಂ ಕಚೇರಿಗೆ ಅಧಿಕಾರಿಗಳು ಭೇಟಿ ನೀಡಿ, ಬಳಿಕ ಮತ್ತೆ ಹನುಮಸಾಗರದತ್ತ ತಿರುಗಿ ನೋಡಿಲ್ಲ. ಸಾರ್ವಜನಿಕರು ವಿದ್ಯುತ್ ಸಂಪರ್ಕ, ಬಿಲ್, ವಿದ್ಯುತ್ ಕಂಬ, ಲೈನ್ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ದೂರು ಹಾಗೂ ಅಹವಾಲು ಸಲ್ಲಿಸಲು ಕಚೇರಿಗೆ ಬಂದರೂ ಅಧಿಕಾರಿಗಳು ಸಿಗದಿರುವುದರಿಂದ ಸಿಬ್ಬಂದಿಯನ್ನೇ ಅವಲಂಬಿಸಬೇಕಾಗಿದೆ.

ಈ ಕುರಿತು ಮಾತನಾಡಿದ ಕೊಪ್ಪಳ ಜಿಲ್ಲಾ ಗುತ್ತಿಗೆದಾರರ ಅಧ್ಯಕ್ಷ ಆಸಿಫ್ ದಲಾಯತ್, ಹನುಮಸಾಗರ ದೊಡ್ಡ ಪಟ್ಟಣವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇಲ್ಲಿನ ಜೆಸ್ಕಾಂ ಕಚೇರಿಗೆ ಬರುತ್ತಾರೆ. ಆದರೆ ಇಲ್ಲಿ ಒಬ್ಬ ಅಧಿಕಾರಿಯೂ ನಿಯಮಿತವಾಗಿ ಲಭ್ಯವಿಲ್ಲದಿರುವುದು ವಿಷಾದನೀಯ. ಈ ಕುರಿತು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಧಿಕಾರಿಯೊಬ್ಬರನ್ನು ಇಲ್ಲಿ ನಿಯೋಜಿಸಬೇಕು ಅಥವಾ ಈಗಿರುವ ಅಧಿಕಾರಿಯನ್ನಾದರೂ ನಿಯಮಿತವಾಗಿ ಹನುಮಸಾಗರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ಜೆಸ್ಕಾಂ ಕಚೇರಿ ಸಿಬ್ಬಂದಿಯೊಬ್ಬರು ಮಾತನಾಡಿ, ಆ. 15ರಂದು ಅಧಿಕಾರಿಗಳು ಬಂದಿದ್ದರು. ಅದಕ್ಕೂ ಮುನ್ನ ಎರಡು ಬಾರಿ ಮಾತ್ರ ಬಂದಿರುವುದನ್ನು ಹೊರತುಪಡಿಸಿದರೆ ಮತ್ತೆ ಕಚೇರಿಗೆ ಭೇಟಿ ನೀಡಿಲ್ಲ. ಸಾರ್ವಜನಿಕರ ಪ್ರಶ್ನೆಗಳಿಗೆ ನಾವು ಉತ್ತರಿಸುವುದಕ್ಕಿಂತ ಸಂಬಂಧಿಸಿದ ಅಧಿಕಾರಿಗಳೇ ನೇರವಾಗಿ ಉತ್ತರ ನೀಡಿದರೆ ಸೂಕ್ತವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಗೈರುಹಾಜರಿಯಿಂದ ಸಾರ್ವಜನಿಕರ ಅಹವಾಲುಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಆದ್ದರಿಂದ ಜೆಸ್ಕಾಂನ ಮೇಲಧಿಕಾರಿಗಳು ಕೂಡಲೇ ಗಮನಹರಿಸಿ ಹನುಮಸಾಗರ ಕೆಇಬಿ ಕಚೇರಿಗೆ ಕಾಯಂ ಅಥವಾ ನಿಯಮಿತವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಯನ್ನು ನಿಯೋಜಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.