ಕಾಂಗ್ರೆಸ್ ಗೆದ್ದಾಗ ಸಂಭ್ರಮಿಸಲು ಇಲ್ಲಿ ಜನರೇ ಇಲ್ಲ

| Published : Apr 17 2024, 01:15 AM IST

ಸಾರಾಂಶ

ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಘೋಷಿಸಲಾಗಿದೆ. ಕಾಂಗ್ರೆಸ್ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುವುದೇ ಗೊತ್ತಿಲ್ಲ. ಒಂದು ವೇಳೆ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಎಂದು ಅವರ ಹೆಸರು ಹೇಳಿದರೆ ಬರುಷ್ಟು ಸೀಟ್ ಬರಲ್ಲ ಎಂಬುವುದು ಕಾಂಗ್ರೆಸ್ನವರಿಗೆ ಗೊತ್ತಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಪಾಕಿಸ್ತಾನದಲ್ಲಿ ಹುಡುಕಬೇಕಾಗುತ್ತದೆ ಎಂದು ಬಿಜೆಪಿಯ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎಂದು ಘೋಷಿಸಲಾಗಿದೆ. ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುವುದೇ ಗೊತ್ತಿಲ್ಲ. ಒಂದು ವೇಳೆ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಎಂದು ಅವರ ಹೆಸರು ಹೇಳಿದರೆ ಬರುಷ್ಟು ಸೀಟ್ ಬರಲ್ಲ ಎಂಬುವುದು ಕಾಂಗ್ರೆಸ್‌ನವರಿಗೆ ಗೊತ್ತಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಪಾಕಿಸ್ತಾನದಲ್ಲಿ ಹುಡುಕಬೇಕಾಗುತ್ತದೆ ಎಂದು ಬಿಜೆಪಿಯ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು.

ನಗರದ ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ನವರು ಕೇವಲ ಅಲ್ಪಸಂಖ್ಯಾತರ ಪರವಾಗಿ ವರ್ತಿಸುತ್ತಾರೆ. ಭಾರತದಲ್ಲಿ ಹಿಂದೂ ಮೆಜಾರಿಟಿ ಇರುವುದರಿಂದ ಅವರು ಪಾಕಿಸ್ತಾನಕ್ಕೆ ಹೋಗಿ ನೆಲೆ ಕಂಡುಕೊಳ್ಳುವ ಕಾಲ ಬರಲಿದೆ ಎಂದರು.

ಕಾಂಗ್ರೆಸ್ ಗೆದ್ದಾಗ ಸಂಭ್ರಮಿಸಲು ಇಲ್ಲಿ ಜನರೇ ಇಲ್ಲವಾದ್ದರಿಂದ, ಅವರು ಗೆದ್ದಾಗಲೆಲ್ಲಾ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಗೆಲ್ಲುವುದಿಲ್ಲ ಎಂದು ಗೊತ್ತಾಗಿ ತಮ್ಮ ಕ್ಷೇತ್ರ ಬಿಟ್ಟು ಕೇರಳಕ್ಕೆ ಹೋಗಿರುವ ರಾಹುಲ್‌ ಗಾಂಧಿ ಅವರು ಪಾಕಿಸ್ತಾನದಲ್ಲಿ‌ ನೆಲೆ ಹುಡುಕಿಕೊಳ್ಳಬಹುದು ಎಂದು ಸಲಹೆ ನೀಡಿದರು.

ತುಮಕೂರಿನಲ್ಲಿ ನಡೆದ ಬಿಜೆಪಿ ಜೆಡಿಎಸ್ ಸಮಾವೇಶದಲ್ಲಿ ಮಹಿಳೆಯರ ಆಕ್ರೋಶ ವಿಚಾರವಾಗಿ ಮಾತನಾಡಿದ ಅವರು, ಇದು ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ. ಮೈಸೂರಿನಲ್ಲಿ ದೇವೇಗೌಡರು ಗರ್ಜಿಸಿದ ಬಳಿಕ ಕಾಂಗ್ರೆಸ್‌ನವರು ಮಹಿಳಾ ಕಾರ್ಯಕರ್ತೆಯರನ್ನು‌ ಮುಂದೆ ಬಿಟ್ಟಿದ್ದಾರೆ ಎಂದರು. ಕಂಗನಾ ರಾಣಾವತ್, ಮೋದಿ ತಾಯಿ ಅವರ ಬಗ್ಗೆ ಮಾತಾಡಿದ್ದನ್ನು ನೋಡಿದರೆ ಕಾಂಗ್ರೆಸ್‌ಗೆ ಮಹಿಳೆಯರ ಬಗ್ಗೆ ಇರುವ ಗೌರವ ಗೊತ್ತಾಗುತ್ತದೆ ಎಂದರು.

---------

ಬಾಕ್ಸ್‌....

ಮೋದಿ ಪಿಎಂ ಮಾಡಲು ಈಶ್ವರಪ್ಪ ಪ್ರಯತ್ನ ಮಾಡಬೇಕು

ಬಂಡಾಯ ಶಮನ ಮಾಡಲು, ನಾಮಪತ್ರಗಳನ್ನು ವಾಪಸ್ ತೆಗೆದುಕೊಳ್ಳಲು ಸಮಯವಿದೆ. ಈಗಾಗಲೇ ಬಹುತೇಕ ಕಡೆ ಅಸಮಾಧಾನಗಳನ್ನು ಹೋಗಲಾಡಿಸಲಾಗಿದೆ. ಈಶ್ವರಪ್ಪನವರ ಬಂಡಾಯವನ್ನು ರಾಜ್ಯಾಧ್ಯಕ್ಷರು ಶಮನಗೊಳಿಸುತ್ತಾರೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು. ಯಡಿಯೂರಪ್ಪನವರ ಜೊತೆ ಸೇರಿ ನಾಲ್ಕು ದಶಕಗಳ ಕಾಲ ಈಶ್ವರಪ್ಪ ಪಕ್ಷ ಕಟ್ಟಿದ್ದಾರೆ. ವ್ಯಕ್ತಿ ಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ. ಹೀಗಾಗಿ ಮೋದಿ ಅವರನ್ನು ಪ್ರಧಾನಿ ಮಾಡಲು ಈಶ್ವರಪ್ಪನವರು ಪ್ರಯತ್ನ ಮಾಡಬೇಕು. ಈಶ್ವರಪ್ಪನವರನ್ನು ಉಚ್ಚಾಟನೆ ಮಾಡಲಾಗುತ್ತದೆ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ಹಿರಿಯರೇ ಇದಕ್ಕೆ ಉತ್ತರ ಕೊಡಬೇಕು ಎಂದರು.