ಮನ್‌ಮುಲ್‌ ಅಧ್ಯಕ್ಷರಾಗಲು ನಿಯಮಗಳೇನಿಲ್ಲ: ಕೆ.ಎಂ.ಉದಯ್‌

| Published : May 17 2025, 01:17 AM IST / Updated: May 17 2025, 01:18 AM IST

ಸಾರಾಂಶ

ಸರ್ಕಾರದಿಂದ ನಾಮನಿರ್ದೇಶನಗೊಂಡು ಶಾಸಕ ಉದಯ್ ಮನ್‌ಮುಲ್ ಅಧ್ಯಕ್ಷರಾಗುತ್ತಾರೆ ಎಂಬ ವದಂತಿಯನ್ನು ಸಾರಾಸಗಟ್ಟಾಗಿ ತಿರಸ್ಕರಿಸಿದ ಅವರು, ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಕ್ಷೇತ್ರದ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬೇಕಿದೆ. ಇದಕ್ಕೇ ಸಮಯ ಸಾಕಾಗುತ್ತಿಲ್ಲ. ಇನ್ನು ಮನ್‌ಮುಲ್‌ ಅಧ್ಯಕ್ಷನಾದರೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬೀಳುತ್ತವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮನ್‌ಮುಲ್‌ ಅಧ್ಯಕ್ಷ ಸ್ಥಾನಕ್ಕೆ ಇಂತಿಷ್ಟು ಬಾರಿ ಗೆದ್ದವರೇ ಅಧ್ಯಕ್ಷರಾಗಬೇಕೆಂಬ ನಿಯಮವೇನಿಲ್ಲ. ಯಾರು ಬೇಕಾದರೂ ಅಧ್ಯಕ್ಷರಾಗುವುದಕ್ಕೆ ಅವಕಾಶವಿದೆ. ಮದ್ದೂರು ತಾಲೂಕಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಶಾಸಕ ಕೆ.ಎಂ.ಉದಯ್ ಪರೋಕ್ಷವಾಗಿ ತಮ್ಮ ಸಂಬಂಧಿ ಎಂ.ಕೆ.ಹರೀಶ್ ಬಾಬು ಪರ ಬ್ಯಾಟಿಂಗ್ ಮಾಡಿದರು.

ತಾಲೂಕಿನ ನಿಡಘಟ್ಟ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಮೇ 20ರಂದು ಮನ್ಮುಲ್ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಮದ್ದೂರು ತಾಲೂಕು ಹೆಚ್ಚು ಹೈನುಗಾರಿಕೆ ಹೊಂದಿರುವ ಪ್ರದೇಶವಾಗಿದೆ. ಹೀಗಾಗಿ ಅಧ್ಯಕ್ಷ ಸ್ಥಾನವನ್ನು ನಮ್ಮ ತಾಲೂಕಿಗೆ ನೀಡಬೇಕು ಎನ್ನುವುದು ನಮ್ಮ ಹಕ್ಕೊತ್ತಾಯವಾಗಿದೆ ಎಂದರು.

ಮನ್‌ಮುಲ್‌ ಚುನಾವಣೆಯಲ್ಲಿ 3 ರಿಂದ 5 ಬಾರಿ ನಿರ್ದೇಶಕರಾಗಿ ಆಯ್ಕೆಯಾದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಯಾವುದೇ ಮಾನದಂಡ ಒಕ್ಕೂಟದಲ್ಲಿ ಇಲ್ಲ. ಅದು ಯಾವ ರೀತಿ ಉಪಯೋಗಕ್ಕೂ ಬರುವುದಿಲ್ಲ. ಅಂತಹ ಪರಿಸ್ಥಿತಿ ಎದುರಾದರೆ ನನ್ನ ಬೆಂಬಲಿತ ಅಭ್ಯರ್ಥಿ ಪರ ಹೋರಾಟಕ್ಕೆ ಸಿದ್ಧವಾಗಿದ್ದೇನೆ ಎಂದು ಸವಾಲು ಹಾಕಿದರು.

ಅಧ್ಯಕ್ಷ ಸ್ಥಾನವನ್ನು ಮದ್ದೂರಿನಿಂದ ನಿರ್ದೇಶಕನಾಗಿ ಆಯ್ಕೆಯಾಗಿರುವ ನನ್ನ ಬೆಂಬಲಿಗನಿಗೇ ನೀಡಬೇಕೆಂದು ಈಗಾಗಲೇ ನಾನು ಪಕ್ಷದ ವರಿಷ್ಠರಲ್ಲಿ ಚರ್ಚೆ ನಡೆಸಿ ಬೇಡಿಕೆ ಇಟ್ಟಿದ್ದೇನೆ. ಅದಿನ್ನೂ ಅಂತಿಮವಾಗಿಲ್ಲ. ಮೇ 20ರಂದು ನಡೆಯುವ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಶಾಸಕರು ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಇವರನ್ನು ಹೊರತುಪಡಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಪಕ್ಷದ ವರಿಷ್ಠರ ಹಸ್ತಕ್ಷೇಪ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರದಿಂದ ನಾಮನಿರ್ದೇಶನಗೊಂಡು ಶಾಸಕ ಉದಯ್ ಮನ್‌ಮುಲ್ ಅಧ್ಯಕ್ಷರಾಗುತ್ತಾರೆ ಎಂಬ ವದಂತಿಯನ್ನು ಸಾರಾಸಗಟ್ಟಾಗಿ ತಿರಸ್ಕರಿಸಿದ ಅವರು, ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಕ್ಷೇತ್ರದ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬೇಕಿದೆ. ಇದಕ್ಕೇ ಸಮಯ ಸಾಕಾಗುತ್ತಿಲ್ಲ. ಇನ್ನು ಮನ್‌ಮುಲ್‌ ಅಧ್ಯಕ್ಷನಾದರೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬೀಳುತ್ತವೆ ಎಂದು ಹೇಳಿದರು.

ಮನ್‌ಮುಲ್‌ ನಿರ್ದೇಶಕ ಎಂ.ಕೆ.ಹರೀಶ್ ಬಾಬು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಇದ್ದರು.