ಇಂದು ದೇಶದ ಭವಿಷ್ಯವನ್ನು ಪ್ರತಿಭೆ ಮತ್ತು ಜ್ಞಾನದ ಮೂಲಕ ಕಟ್ಟಬೇಕಾಗಿದೆ. ಅನಾದಿ ಕಾಲದಿಂದಲೂ ಭಾರತದ ಜ್ಞಾನ ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ 5ನೇ ವರ್ಷದ ಪತ್ರಕರ್ತರ ಮಕ್ಕಳ 2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಪ್ರತಿಭೆ ಎಂಬುದು ವೃತ್ತಿ, ಐಶ್ವರ್ಯ ಅಥವಾ ಮನೆಯ ಹಿನ್ನೆಲೆಯನ್ನು ನೋಡಿ ಬರುವುದಿಲ್ಲ. ಸಾಧನೆ ಮಾಡುವ ಛಲ, ಪರಿಶ್ರಮ ಮತ್ತು ಕನಸುಗಳೇ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಶೈಕ್ಷಣಿಕ ಸಾಧನೆ ಮಾಡಿದ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ 5ನೇ ವರ್ಷದ ಪತ್ರಕರ್ತರ ಮಕ್ಕಳ- 2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದು ದೇಶದ ಭವಿಷ್ಯವನ್ನು ಪ್ರತಿಭೆ ಮತ್ತು ಜ್ಞಾನದ ಮೂಲಕ ಕಟ್ಟಬೇಕಾಗಿದೆ. ಅನಾದಿ ಕಾಲದಿಂದಲೂ ಭಾರತದ ಜ್ಞಾನ ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ. ಪ್ರಾಚೀನ ಕಾಲದಲ್ಲಿ ನಳಂದಾ ವಿಶ್ವವಿದ್ಯಾಲಯಕ್ಕೆ ಸುಮಾರು 70ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಬಂದು ಶಿಕ್ಷಣ ಪಡೆಯುತ್ತಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.ಇತಿಹಾಸದ ಪುಟ ಸೇರಿರುವ ವರ್ತಮಾನದಲ್ಲಿ ಬದುಕುತ್ತಿರುವ ಅನೇಕ ಜ್ಞಾನಬಲದಲ್ಲಿ ಬದುಕು ಕಟ್ಟಿಕೊಂಡಿರುವವರೆಲ್ಲಾ ಆರ್ಥಿಕವಾಗಿ ಬಡವರಾಗಿದ್ದವರೇ ಆಗಿದ್ದಾರೆ. ಹೀಗಾಗಲು ಅವರು ಕಂಡಿದ್ದ ಕನಸು ಮತ್ತು ಅವರಿಗಿದ್ದ ಅಪರಿಮಿತವಾದ ಜ್ಞಾನದ ಹಸಿವೇ ಅವರನ್ನು ಸಾಧಕರನ್ನಾಗಿ ರೂಪಿಸಿತು. ಇಲ್ಲಿ ಸನ್ಮಾನಗೊಳ್ಳುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ಅಂತಹ ಮಹನೀಯರಿಂದ ಪ್ರೇರಣೆ ಪಡೆದು ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಬಂಡವಾಳಶಾಹಿಗಳ ಪ್ರಭಾವ ಹೆಚ್ಚಾಗುತ್ತಿರುವುದು ಆತಂಕದ ಸಂಗತಿ. ಆದರೂ ಮಾಧ್ಯಮಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಎಂದಿಗೂ ಮರೆಯಬಾರದು. ಈಗಿನ ವೈರಲ್ ಯುಗದಲ್ಲಿ ಪತ್ರಕರ್ತರು ಎಲ್ಲವನ್ನೂ ವೈರಲ್ ಮಾಡುವ ಭರದಲ್ಲಿ ಸಮಾಜಕ್ಕೆ ವೈರಸ್ ಆಗಬೇಡಿ. ಬ್ರೇಕಿಂಗ್ ನ್ಯೂಸ್ ನೀಡುವ ಉತ್ಸಾಹದಲ್ಲಿ ಯಾರೊಬ್ಬರ ಬದುಕು ಬ್ರೇಕ್ ಮಾಡದೆ, ಹಾಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.ಪತ್ರಕರ್ತರ ಮಕ್ಕಳಿಗೆ ಸಮಾಜದ ಆಗುಹೋಗುಗಳನ್ನು ಹತ್ತಿರದಿಂದ ನೋಡುವ ಅವಕಾಶ ದೊರೆಯುತ್ತದೆ. ಇಂತಹ ಅನುಭವ ಎಲ್ಲ ಮಕ್ಕಳಿಗೂ ಸಿಗುವುದಿಲ್ಲ. ಆದ್ದರಿಂದ ನಿಮ್ಮ ದೃಷ್ಟಿಕೋನ ಸಮಾಜಮುಖಿಯಾಗಿರಬೇಕು. ಸಮಾಜದ ನೋವು, ಸಮಸ್ಯೆಗಳು ಮತ್ತು ಆಶೋತ್ತರಗಳನ್ನು ಅರ್ಥಮಾಡಿಕೊಳ್ಳುವ ಗುಣವನ್ನು ಸಮಾಜದ ನಡುವೆ ಬೆಳೆಸಬೇಕು, ನೀವೂ ಬೆಳೆಸಿಕೊಳ್ಳಬೇಕು. ಇಂದು ಕೂಡ ಕೃತಕ ಬುದ್ಧಿಮತ್ತೆ ಜೆನ್ ಜಿ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಮೂಲಕ ಭಾರತದ ಜ್ಞಾನ ಪರಂಪರೆ ವಿಶ್ವ ಭೂಪಟದಲ್ಲಿ ಮತ್ತಷ್ಟು ಪ್ರಕಾಶಿಸುತ್ತಿದೆ ಎಂದು ತಿಳಿಸಿದರು.ಭಾರತದ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಜೀವನವನ್ನು ಆದರ್ಶವಾಗಿ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಂತ್ರಜ್ಞಾನದ ಜೊತೆಗೆ ಅಧ್ಯಯನಶೀಲತೆಯನ್ನೂ ಬೆಳೆಸಿಕೊಳ್ಳಬೇಕು. ಜೀವನದ ಉದ್ದಕ್ಕೂ ವಿದ್ಯಾರ್ಥಿಯಾಗಿ ಕಲಿಯುವ ಮನೋಭಾವ ಇರಬೇಕು ಎಂದು ಹೇಳಿದ ಅವರು ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ, ಐಎಫ್‌ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಸಿಎಂ ಮಾಧ್ಯಮ ಸಲಹೆಗಾರರಾಗಿದ್ದ ಪ್ರಭಾಕರ್, ಜಮೀರ್ ಅಹ್ಮದ್‌ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ, ಜಿಲ್ಲಾಧಿಕಾರಿ ಜಿ.ಪ್ರಭು, ಎಸ್‌ಪಿ ಕುಶಾಲ್ ಚೌಕ್ಸೆ, ಚಿಕ್ಕಬಳ್ಳಾಪುರ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ್, ಖಜಾಂಚಿ ಮುದ್ದುಕೃಷ್ಣ, ಉಪಾಧ್ಯಕ್ಷ ಮುಬಾಷಿರ್ ಅಹ್ಮದ್, ಕಾರ್ಯದರ್ಶಿ ಸಂಜೆ ಸಮಾಚಾರ್ ಆನಂದ್, ಮತ್ತು ಎಲ್ಲಾ ಪದಾಧಿಕಾರಿಗಳು ಇದ್ದರು.ಸಿಕೆಬಿ-3 ನಗರದ ಜಿಲ್ಲಾ ಕನ್ನಡ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ 5ನೇ ವರ್ಷದ ಪತ್ರಕರ್ತರ ಮಕ್ಕಳ- 2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು