ಸಾರಾಂಶ
ಆನೆಕಾಲು ರೋಗ ತಡೆಗೆ ಡಿ.ಈ.ಸಿ ಮಾತ್ರೆ ನುಂಗುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಸಾರ್ವಜನಿರಿಗೆ ಮನವರಿಕೆ ಮಾಡಿ, ಜಾಗೃತಿ ಮೂಡಿಸುವ ಕಾರ್ಯವನ್ನು ಸಂಬಂಧಿಸಿದ ಇಲಾಖೆಗಳು ಯಶಸ್ವಿಯಾಗಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚಿಸಿದರು.
ವಿಜಯಪುರ : ಆನೆಕಾಲು ರೋಗ ತಡೆಗೆ ಡಿ.ಈ.ಸಿ ಮಾತ್ರೆ ನುಂಗುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಸಾರ್ವಜನಿರಿಗೆ ಮನವರಿಕೆ ಮಾಡಿ, ಜಾಗೃತಿ ಮೂಡಿಸುವ ಕಾರ್ಯವನ್ನು ಸಂಬಂಧಿಸಿದ ಇಲಾಖೆಗಳು ಯಶಸ್ವಿಯಾಗಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಿಂದಗಿ ಹಾಗೂ ಮುದ್ದೇಬಿಹಾಳ ತಾಲೂಕಿನಲ್ಲಿ ಸಾಮೂಹಿಕ ಆನೆಕಾಲು ರೋಗದ ಔಷಧ ನುಂಗಿಸುವ ಕಾರ್ಯಕ್ರಮದ ಕುರಿತು ಆರೋಗ್ಯ ಇಲಾಖೆಯ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಆನೇಕಾಲು ರೋಗ, ವೃಷಣಬಾವು ರೋಗಗಳ ಲಕ್ಷಣಗಳ, ಹರುಡಿವಿಕೆ, ತಡೆಗಟ್ಟುವಿಕೆ ಮತ್ತು ಮುಂಜಾಗ್ರತೆ ಕ್ರಮವಾಗಿ ಮಾತ್ರೆಗಳನ್ನು ಸೇವಿಸುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಒಬ್ಬ ನೋಡಲ್ ಅಧಿಕಾರಿಯನ್ನು ಗುರುತಿಸಿ, ಅಧಿಕಾರಿಯು ತಮ್ಮ ಅಧೀನ ಕಚೇರಿಗಳಿಗೆ ಅವಶ್ಯಕ ಅಗತ್ಯತೆಗಳನ್ನು ಪೂರೈಸುವಂತೆ ನಿರ್ದೇಶನಗಳನ್ನು ನಿಡಬೇಕು. ಆರೋಗ್ಯ ಇಲಾಖೆಯು ಪ್ರಾ.ಆ. ಕೇಂದ್ರ, ತಾಲೂಕು ಮಟ್ಟದಲ್ಲಿ ಕೈಗೊಳ್ಳುವ ಪೂರ್ವಭಾವಿ ಮತ್ತು ಎಂಡಿಎ ಸಮಯದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸ್ಥಳೀಯ ಅಗತ್ಯತೆಗಳನ್ನು ಪೂರೈಸಬೇಕು ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಆಯಾ ಗ್ರಾಮದ ಔಷಧಿ ನುಂಗಿಸುವ ತಂಡದ ಸಕ್ರಿಯ ಸದಸ್ಯರನ್ನು ಗುರುತಿಸಿ ಅಂಗನವಾಡಿ ಶಾಲೆಯಲ್ಲಿ ಎಲ್ಲ ಅರ್ಹ ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸಲು ತಾಲೂಕಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೆ.ಡಿ.ಗುಂಡಬಾವಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಜಾನ್ ಕಟವಟಿ, ಡಿಎಲ್‌ಒ ಅರ್ಚನ ಕುಲಕರ್ಣಿ, ಡಿಟಿಒ ಎಂ.ಬಿ.ಬಿರಾದಾರ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಕವಿತಾ ದೊಡ್ಡಮನಿ, ಸತೀಶ ತಿವಾರಿ, ಎ.ಎ.ಮಾಯಗಿ, ಕೃಷ್ಣಕುಮಾರ ಜಾಧವ ಉಪಸ್ಥಿತರಿದ್ದರು.