ಭಾರತದ ಪರಾಕ್ರಮವನ್ನು ವಿಶ್ವದ ಬೇರೆ ಬೇರೆ ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಹೇಳಿಕೊಡಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ನಮ್ಮ ಪರಂಪರೆಯನ್ನೇ ಹತ್ತಿಕ್ಕುವ ಹುನ್ನಾರಗಳು ನಡೆಯುತ್ತಿವೆ ಎಂದು ಗದಗ-ವಿಜಯಪುರ ರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.

ಬಳ್ಳಾರಿ: ಭಾರತೀಯ ಶಿಕ್ಷಣ ಪದ್ಧತಿ ಇಡೀ ವಿಶ್ವದಲ್ಲಿ ಅತ್ಯಂತ ಕೆಟ್ಟದಾಗಿದೆ. ಭಾರತೀಯರ ಭವ್ಯತೆ, ಇತಿಹಾಸ, ಶೌರ್ಯಗಳನ್ನು ಭಾರತೀಯರು ಓದುತ್ತಿರುವ ಇತಿಹಾಸ ಪಠ್ಯದಲ್ಲಿ ಬೋಧಿಸುತ್ತಿಲ್ಲ. ಬದಲಿಗೆ; ಭಾರತೀಯರನ್ನು ಕುಗ್ಗಿಸುವ ದಿಸೆಯಲ್ಲಿ ಪಠ್ಯ ರಚಿಸಲಾಗಿದೆ ಎಂದು ಗದಗ-ವಿಜಯಪುರ ರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಪರಂಪರೆ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಭಾರತೀಯರ ಭವ್ಯ ಪರಂಪರೆಯನ್ನು ವಿದೇಶಿಯರು ಅಧ್ಯಯನ ಮಾಡುತ್ತಿದ್ದಾರೆ. ಭಾರತೀಯರ ಜೀವನಶೈಲಿಯನ್ನು ವಿದೇಶಿಯರು ರೂಢಿಸಿಕೊಳ್ಳುತ್ತಿದ್ದಾರೆ. ಭಾರತದ ಪರಾಕ್ರಮವನ್ನು ವಿಶ್ವದ ಬೇರೆ ಬೇರೆ ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಹೇಳಿಕೊಡಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ನಮ್ಮ ಪರಂಪರೆಯನ್ನೇ ಹತ್ತಿಕ್ಕುವ ಹುನ್ನಾರಗಳು ನಡೆಯುತ್ತಿವೆ. ಮಕ್ಕಳಿಗೆ ಬೋಧಿಸುವ ಶಿಕ್ಷಣ ಅವರನ್ನು ದೇಶಭಕ್ತರನ್ನಾಗಿಸುವ ಬದಲು ಬರೀ ಜೀವನಕ್ಕೊಂದು ಉದ್ಯೋಗ ಹುಡುಕಿಕೊಳ್ಳುವಷ್ಟೇ ಶಕ್ತರನ್ನಾಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯರಲ್ಲಿ ಬುದ್ದಿಶಕ್ತಿ ಹೆಚ್ಚಿದೆ. ಆದರೆ ಅವರಿಗೆ ಸೂಕ್ತ ತರಬೇತಿ ಸಿಗುತ್ತಿಲ್ಲ. ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ಬುದ್ಧಿವಂತ ಎನಿಸಿಕೊಂಡವರು ಭಾರತೀಯರೇ ಆಗಿರುತ್ತಾರೆ. ವಿದೇಶಿ ವಿವಿಗಳಲ್ಲಿ ಭಾರತ ಮೂಲದ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ. ಆದರೆ, ಭಾರತದಲ್ಲಿ ಅವರಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ವಿಜ್ಞಾನ ಕ್ಷೇತ್ರದಲ್ಲಿ ಇನ್ನು ಸಾಕಷ್ಟು ಸಂಶೋಧನೆಗಳು ಆಗಬೇಕಿದೆ. ನಮ್ಮ ದೇಶದ ಪ್ರತಿಭೆಗಳಿಗೆ ಸೂಕ್ತ ವೇದಿಕೆ, ತರಬೇತಿ ದೊರೆಯಬೇಕಿದೆ ಎಂದರು.

ಭಾರತ ಇತಿಹಾಸ, ಪರಂಪರೆ, ಭಾರತೀಯ ಸಾಮರ್ಥ್ಯ ಅರಿವಾಗಬೇಕು ಎಂದಾದರೆ ಸ್ವಾಮಿ ವಿವೇಕಾನಂದರನ್ನು ಓದಬೇಕು ಎಂದು ಸಲಹೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ವೀರಭದ್ರಗೌಡ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ಬಸವರಾಜ ಹರನಹಳ್ಳಿ, ಹಿರಿಯ ಪತ್ರಕರ್ತರಾದ ವೆಂಕೋಬಿ ಸಂಗನಕಲ್ಲು, ಮೋಕಾ ಮಲ್ಲಯ್ಯ, ತಿಮ್ಮಪ್ಪ ಚೌದರಿ, ಮಾರುತಿ ಸುಣಗಾರ, ರವಿಕುಮಾರ್, ನರಸನಗೌಡ, ಗುರುಶಾಂತ್, ಸಿದ್ದು, ಅಮರೇಶ, ವಿವೇಕ ಮಂಟಪದ ಕೆ. ರಾಜಶೇಖರ್, ಸಿದ್ಧರಾಮೇಶ್ವರಗೌಡ ಕರೂರು, ಪುರುಷೋತ್ತಮ ದಮ್ಮೂರು, ಪ್ರಭುದೇವ ಕಪ್ಪಗಲ್ಲು, ಚಂದ್ರಶೇಖರಗೌಡ ಮಸೀದಿಪುರ ಇದ್ದರು.