ಸಂವಿಧಾನದಲ್ಲಿ ನೈಜ, ನೈತಿಕ ತತ್ವಗಳಿವೆ: ನಾಡೋಜ ಗೊರೂಚ

| Published : Aug 06 2024, 12:38 AM IST

ಸಂವಿಧಾನದಲ್ಲಿ ನೈಜ, ನೈತಿಕ ತತ್ವಗಳಿವೆ: ನಾಡೋಜ ಗೊರೂಚ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿಯಲ್ಲಿ ತಾಲೂಕು ವೀರಶೈವ ಸಮಾಜದ ವತಿಯಿಂದ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಗಣ್ಯರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭವ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ನಮ್ಮ ದೇಶದ ಸಂವಿಧಾನದಲ್ಲಿ ಕೇವಲ ಔಪಚಾರಿಕ ತತ್ವಗಳಲ್ಲದೆ, ನೈಜ, ನೈತಿಕ ತತ್ವಗಳು ಇವೆ. ಇದನ್ನು ಮನಗಂಡು ದೇಶದ ಪ್ರತಿಯೊಬ್ಬರೂ ಕರ್ತವ್ಯ ಬದ್ಧರಾಗಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರರಾದ, ನಾಡೋಜ ಗೊ.ರು.ಚನ್ನಬಸಪ್ಪ ಹೇಳಿದರು.

ಅವರು ತಾಲೂಕು ವೀರಶೈವ ಸಮಾಜದ ವತಿಯಿಂದ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಮತ್ತು ಅಭಿನಂದನಾ ಸಮಾರಂಭವದಲ್ಲಿ ಭಾಗವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ದೇಶ ಭಕ್ತಿ, ನಮ್ಮ ರಾಷ್ಟ್ರ ಎಂಬ ಭಾವನೆ ಎಲ್ಲರಲ್ಲೂ ಇನ್ನೂ ಕಂಡು ಬರದಿರುವುದು ದೇಶದ ದುರಂತದ ಸಂಗತಿ. ದೇಶ ಒಂದು ಎಂಬ ಭಾವನೆ ತೊಲಗಿ ಪ್ರಾದೇಶಿಕ ಭಾವನೆ ಉಲ್ಬಣಗೊಳ್ಳುತ್ತಿರುವುದು, ಅಲ್ಪಸಂಖ್ಯಾತ, ಬಹು ಸಂಖ್ಯಾತರ ನಡುವೆ ಕಂದಕ ಹೆಚ್ಚುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದ್ದು, ಇದು ದೇಶದ ಸಮಗ್ರತೆ, ಐಕ್ಯತೆ, ಅಖಂಡತೆ, ಭದ್ರತೆಗೆ ಮಾರಕವಾಗುತ್ತಿದೆ ಎಂದು ಎಚ್ಚರಿಸಿದರು.

ಇದೆಲ್ಲದರ ಪರಿಣಾಮ ಪ್ರಸ್ತುತ ಪ್ರಜೆಗಳು ಹಾಗು ಜನಪ್ರತಿನಿಧಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಶಾಸನ ಸಭೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ಗಮನಹರಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಬೇಕು. ತಮ್ಮ ತಮ್ಮಲ್ಲಿರುವ ದ್ವೇಷ, ಸೇಡು, ಆಸೂಯೆ, ಸಂಶಯಗಳನ್ನು ಪರಸ್ಪರರಿಂದ ಹೋಗಲಾಡಿಸಿಕೊಳ್ಳಬೇಕು. ಸಂವಿಧಾನದ ಆಶಯಗಳು ಇನ್ನೂ ಸರಿಯಾಗಿ ಅನುಷ್ಠಾನವಾಗಿಲ್ಲ. ಅದರ ಉದ್ದೇಶಕ್ಕೆ ಧಕ್ಕೆ ಬಂದಿದೆ. ಇದಕ್ಕೆ ಕಾರಣರಾರು ಎಂಬುದರ ಬಗ್ಗೆ ಗಮನವನ್ನು ಕೇಂದ್ರಿಕರಿಸಬೇಕಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ವೀರಶೈವ ಲಿಂಗಾಯಿತ ಸಮಾಜದ ಕಾಯಕ ಮತ್ತು ದಾಸೋಹ ಕಲ್ಪನೆಯನ್ನು ಹಿಂದಿನ ಕಾಲದಿಂದಲೂ ಸಮಾಜದ ಗಣ್ಯರು, ನಾಯಕರು, ಮಠಾಧೀಶರು ನಿಸ್ವಾರ್ಥತೆಯಿಂದ ಮಾಡುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ಕೊಟ್ಟಿದ್ದಾರೆ. ಇದನ್ನು ಸ್ಮರಿಸಿ ಈ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಮಹತ್ತರವಾದ ಜವಾಬ್ದಾರಿ ಇಂದಿನ ತಲೆಮಾರಿನವರ ಮೇಲೆ ಇದೆ ಎಂದರು.

ಶಾಸಕ ಬಿ.ಕೆ.ಸಂಗಮೇಶ್ವರ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಗರದ ಅವಳಿ ಕಾರ್ಖಾನೆಗಳ ಆಧುನೀಕರಣಕ್ಕೆ ಅಗತ್ಯ ಬಂಡವಾಳ ಹೂಡಿ ಅಭಿವೃದ್ಧಿ ಪಡಿಸಬೇಕು. ಇದಕ್ಕೆ ರಾಜ್ಯ ಸರ್ಕಾರದ ಜೊತೆ ಕೇಂದ್ರ ಸರ್ಕಾರ ಸಹ ಕೈಜೋಡಿಸಬೇಕು. ಆ ಮೂಲಕ ಹಿಂದಿನ ವೈಭವ ಮರುಕಳುಹಿಸುವಂತೆ ಮಾಡಬೇಕೆಂದು ಮನವಿ ಮಾಡಿದರು.

ಹೊನ್ನಾಳಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಪ್ರಸ್ತಾವಿಕ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಬಲ್ಕೀಶ್ ಬಾನು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ನೂತನ ಅಧ್ಯಕ್ಷ ಕೆ.ಎಸ್.ವಿಜಯ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹನಮಂತು, ಸಮಾಜದ ಹಿರಿಯರಾದ ಹೆಬ್ಬಂಡಿ ಶಿವರುದ್ರಪ್ಪರವರುಗಳನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ರುದ್ರೇಗೌಡರವರ ಸೇವೆಯನ್ನು ಸ್ಮರಿಸಿ ಅವರಿಗೆ ಅಭಿನಂದನೆ ಸಲ್ಲಿ ಸುವ ಮೂಲಕ ಗೌರವಿಸಲಾಯಿತು. ದೇಶದ ವಿವಿಧೆಡೆ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟ ಕುಟುಂಬದವರಿಗೆ ಮೌನಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೀರಶೈವ ಸಮಾಜದ ಅಧ್ಯಕ್ಷ ಕೆ.ಹೆಚ್ ತೀರ್ಥಯ್ಯ ಸಮಾರಂಭಧ ಅಧ್ಯಕ್ಷತೆ ವಹಿಸಿದ್ದರು. ಭುವನ ನಾಗನಂದ, ಕುಸುಮ ತೀರ್ಥಯ್ಯ, ನಾಗರತ್ನ ಮಲ್ಲಿಕಾರ್ಜುನ್ ಪ್ರಾರ್ಥಸಿದರು. ಬಸವರಾಜ ನೆಲ್ಲಿಸರ ಅತಿಥಿಗಳ ಪರಿಚಯ ನಡೆಸಿಕೊಟ್ಟರು. ನಿವೃತ್ತ ಪ್ರಾಂಶುಪಾಲ ಪ್ರೂ. ಎಚ್. ಭುವನೇಶ್ವರ್ ನಿರೂಪಿಸಿ, ಎಂ.ಇ.ಜಗದೀಶ್ ವಂದಿಸಿದರು.