ಸಾರಾಂಶ
ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ದಿ.ಡಿ.ದೇವರಾಜ ಅರಸು ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಜನ್ಮದಿನಾಚರಣೆ ಅರ್ಥಪೂರ್ಣವಾಗಿ ಜರುಗಿತು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಭವಿಷ್ಯದ ಆಶಾಕಿರಣಗಳಾದ ಇಂದಿನ ಮಕ್ಕಳಿಗೆ ಮನುಕುಲದ ಹಿತವನ್ನು ಬಯಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳಂತಹ ದಾರ್ಶನಿಕರ ಆಶಯಗಳಿಗೆ ವಿರುದ್ಧವಾಗಿ ಪ್ರಸ್ತುತ ಸಮಾಜದಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಎಳೆಯ ಮನಸ್ಸನ್ನು ಕೆಡಿಸುವ ಯತ್ನ ನಿರಂತರವಾಗಿ ನಡೆಯುತ್ತಿದ್ದ, ಈ ದುಷ್ಟಶಕ್ತಿಗಳ ವಿರುದ್ಧ ಎಚ್ಚರ ವಹಿಸುವ ಅಗತ್ಯವಿದೆ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ ಹೇಳಿದರು.ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳ ವತಿಯಿಂದ ಆಯೋಜಿಸ ಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು, ದಿವಂಗತ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಿ.ದೇವರಾಜ ಅರಸುರವರು ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗಗಳಿಗೆ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಭದ್ರತೆಯನ್ನು ನೀಡಿದ ಧೀಮಂತ ನಾಯಕ. ತಳಸಮುದಾಯದಗಳಿಗೆ ಸಾಮಾಜಿಕ ಬಹಿಷ್ಕಾರದ ಮೂಲಕ ದೇವಸ್ಥಾನ ಪ್ರವೇಶಕ್ಕೂ ನಿರಾಕರಣೆಗೆ ಪ್ರತಿಯಾಗಿ ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಿ ಮನುಕುಲಕ್ಕೆ ಮಾರ್ಗಸೂಚಿಯಾದರು ಎಂದರು.ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ ಮಾತನಾಡಿ, ಡಿ.ದೇವರಾಜ ಅರಸುರವರು ಜೀತ, ಮಲ ಹೊರುವ ಪದ್ಧತಿಯ ಕೆಟ್ಟ ಸಂಪ್ರದಾಯಗಳಿಗೆ ತಿಲಾಂಜಲಿ ನೀಡಿದ ಕ್ರಾಂತಿಕಾರಿ ನಾಯಕ. ಕರ್ನಾಟಕ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉಳುವವನೇ ಹೊಲದೊಡೆಯ ಕಾಯ್ದೆ ಮೂಲಕ ಗೇಣಿದಾರ ರೈತರ ಬದುಕಿಗೇ ಆಸರೆಯಾದವರು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಜಕ್ಕನಗೌಡರ್, ತಾಪಂ ಇಓ ಎಂ.ಶೈಲಾ, ಹಿಂದುಳಿದ ವರ್ಗಗಳ ಅಧಿಕಾರಿ ಎ.ಆರ್.ಸತೀಶ್, ಬಿಇಓ ವೈ.ಗಣೇಶ್, ಉಪನ್ಯಾಸಕ ರವಿ ಕುಮಾರ್, ಎಂ.ರಾಮಚಂದ್ರ, ವಿಶಾಲ್‌ಕುಮಾರ್, ಟಿ.ಮಂಜುನಾಥ್, ಹೊದಲ ಶಿವು, ಕುಸುಮಾ, ಗೀತಾ, ಸುಜಯಾ ಮತ್ತು ನಾಗವೇಣಿ ಇದ್ದರು.