There has been no misuse of funds in the Kagodu felicitation event.
-ಸೋಮಶೇಖರ್ ಲಾವಿಗೆರೆ ಸ್ಪಷ್ಟನೆ । ರತ್ನಾಕರ ಹೊನಗೋಡು ದುರ್ಬಳಕೆ ಆರೋಪ ಹುರುಳಿಲ್ಲದ್ದು
ಕನ್ನಡಪ್ರಭ ವಾರ್ತೆ ಆನಂದಪುರಕಾಗೋಡು ತಿಮ್ಮಪ್ಪನವರಿಗೆ ನೀಡಿದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಕೋಟ್ಯಂತರ ಹಣ ದುರ್ಬಳಕೆಯಾಗಿದೆ ಎಂದು ರತ್ನಾಕರ ಹೊನಗೋಡು ಆರೋಪಿಸುತ್ತಿರುವುದು ಸರಿ ಇಲ್ಲ ಎಂದು ಕಾಗೋಡು ತಿಮ್ಮಪ್ಪ ನಾಗರಿಕ ಸನ್ಮಾನ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸೋಮಶೇಖರ್ ಲಾವಿಗೆರೆ ವಾಗ್ದಾಳಿ ನಡೆಸಿದ್ದಾರೆ.
ಅವರು ಕಡ್ಲೆ ಹಂಕ್ಲು ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಗೋಡು ತಿಮ್ಮಪ್ಪನವರಿಗೆ ಆನಂದಪುರದಲ್ಲಿ ನಡೆದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಕೋಟ್ಯಂತರ ಹಣ ದುರ್ಬಳಕೆಯಾಗಿದೆ ಎಂದು ರತ್ನಾಕರ ಹೊನಗೋಡು ಪದೇಪದೇ ಆರೋಪಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಒಟ್ಟು ₹5,81,000 ಸಂಗ್ರಹಕ್ಕೆ ರಶೀದಿ ಹಾಕಲಾಗಿತ್ತು. ಆದರೆ, ರಸೀದಿ ಪಡೆದುಕೊಂಡಿದ್ದ ಕೆಲವರು ಹಣ ಪಾವತಿಸಲು ಸಾಧ್ಯವಾಗದ ಕಾರಣ ₹1,24,000 ಸಂಗ್ರಹವಾಗಿರಲಿಲ್ಲ. ಅಂತಿಮವಾಗಿ 4,57,000 ರು. ಮಾತ್ರ ಸಂಗ್ರಹವಾಗಿತ್ತು.ಕಾರ್ಯಕ್ರಮಕ್ಕೆ ಒಟ್ಟು ₹5,58,000 ವೆಚ್ಚವಾಗಿದ್ದು, ಸಂಗ್ರಹವಾದ ಹಣಕ್ಕಿಂತ ಹೆಚ್ಚುವರಿಯಾಗಿ ಒಂದು ಲಕ್ಷ ಅಧಿಕ ಹಣವನ್ನು ನಮ್ಮ ಸ್ವಂತ ಖರ್ಚಿನಿಂದ ಹಾಗೂ ಕಾರ್ಯಕರ್ತರ ಸಹಕಾರದಿಂದ ಭರಿಸಲಾಗಿದೆ ಎಂದರು.
ಕಾಗೋಡು ತಿಮ್ಮಪ್ಪನವರು ನಾಗರಿಕ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸುವ ಸಂದರ್ಭದಲ್ಲಿ ರತ್ನಾಕರ ಹೊನಗೋಡು ಅವರು ಕಾರ್ಯಕ್ರಮಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಕಾಗೋಡು ತಿಮ್ಮಪ್ಪನವರ ಮಗಳ ಮುಖಾಂತರ ಕಾರ್ಯಕ್ರಮದ ಮೊದಲೇ ಕಾಗೋಡು ತಿಮ್ಮಪ್ಪನವರನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದರು. ಅಲ್ಲದೆ ಹಲವರಿಗೆ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಹೇಳಿದ್ದಾರೆ ಎಂದು ಸೋಮಶೇಖರ್ ಆರೋಪಿಸಿದರು.ನಾವು ನಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಕಾರ್ಯಕ್ರಮ ನಡೆಸಿದ್ದೇವೆ. ಇದರಲ್ಲಿ ಒಂದು ರುಪಾಯಿ ದುರುಪಯೋಗಪಡಿಸಿಕೊಂಡಿಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿರುವವರಿಗೆ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ನಾಗರಿಕ ಸನ್ಮಾನ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಟಾಕಪ್ಪ ಕಣ್ಣೂರು ಮಾತನಾಡಿ, ನಮ್ಮ ಕೈಯಿಂದಲೇ ಹಣ ಹಾಕಿ ಕಷ್ಟಪಟ್ಟು ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇಂತಹ ಉತ್ತಮ ಕಾರ್ಯಕ್ರಮವನ್ನು ಕೆಟ್ಟದಾಗಿ ಬಿಂಬಿಸುವುದು ಸರಿಯಲ್ಲ. ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲರೂ ಶ್ರಮಿಸಿದ್ದು, ಅದರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಖಂಡಿಸಿದರು.ಪ್ರಧಾನ ಕಾರ್ಯದರ್ಶಿ ಉಮೇಶ್ ಮಾತನಾಡಿ, ಯಾವುದೇ ಆರೋಪ ಮಾಡುವ ಮೊದಲು ಅದರ ಸಾಧಕ-ಬಾಧಕ ಹಾಗೂ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಮಾತನಾಡಬೇಕು. ನಾಗರಿಕ ಸನ್ಮಾನ ಕಾರ್ಯಕ್ರಮದ ಖರ್ಚು-ವೆಚ್ಚದ ಸಂಪೂರ್ಣ ವಿವರಗಳನ್ನು ಯಾರು ಬೇಕಾದರೂ ಬಂದು ಕೇಳಿದರೆ ನೀಡಲು ಸಿದ್ಧರಿದ್ದೇವೆ. ಕಾಗೋಡು ತಿಮ್ಮಪ್ಪ ನಾಗರಿಕ ಸನ್ಮಾನ ವಿಚಾರದಲ್ಲಿ ಅನಗತ್ಯವಾಗಿ ರಾಜಕಾರಣ ಮಾಡುವುದು ಸರಿಯಿಲ್ಲ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಚೇತನ್ ರಾಜ್ ಕಣ್ಣೂರು, ರಮಾನಂದ ಸಾಗರ್, ಲಿಂಗರಾಜ್, ಆನಂದ ಹರಟೆ, ಗಜೇಂದ್ರ ಯಾದವ್, ಕಲೀಮ್ ಮುಲ್ಲಾ ಖಾನ್, ಬಸವರಾಜ್, ರೆಹಮತ್ತುಲ್ಲ, ಶಶಿ ಗೌಡ ಇದ್ದರು.ಫೋಟೋ: 4 ಎ, ಎನ್, ಪಿ 1
ಆನಂದಪುರದಲ್ಲಿ ಕಾಗೋಡು ತಿಮ್ಮಪ್ಪ ನಾಗರಿಕ ಸನ್ಮಾನ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಟಾಕಪ್ಪ ಕಣ್ಣೂರ್, ಅಧ್ಯಕ್ಷ ಸೋಮಶೇಖರ್ ಲಾವಿಗೆರಿ ಕಾರ್ಯದರ್ಶಿ ಉಮೇಶ್, ಖಜಾಂಚಿ ರಮಾನಂದ್ ಸಾಗರ್ ಇದ್ದರು.