ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಪೌರಾಣಿಕ ನಾಟಕಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿದ್ದು, ಸೀನರಿ, ಹಿನ್ನೆಲೆ ಸಂಗೀತ, ಲೈಟಿಂಗ್ ಎಲ್ಲರದಲ್ಲಿಯೂ ಆಧುನಿಕತೆಯನ್ನು ಕಾಣಬಹುದಾಗಿದೆ. ಇವುಗಳಿಂದ ನಾಟಕಗಳು ನೋಡುಗರ ಮನಸೂರೆಗೊಳ್ಳಲು ಸಹಕಾರಿಯಾಗಿವೆ ಎಂದು ಮಾಜಿ ಶಾಸಕ ಮಸಾಲೆ ಜಯರಾಂ ಅಭಿಪ್ರಾಯಪಟ್ಟಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಉದಯರವಿ ರಂಗಭೂಮಿ ಕಲಾಬಳಗ, ಬೆಳಗುಂಬ ಅವರು ಉದಯರವಿ ಡ್ರಾಮಾ ಸಿನರಿಯ ದಶಮಾನೋತ್ಸವದ ಅಂಗವಾಗಿ ಇದೇ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಪೌರಾಣಿಕ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲವನ್ನು ಕದಿಯಬಹುದು.ಆದರೆ ಮನುಷ್ಯ ರೂಢಿಸಿಕೊಂಡಿರುವ ಕಲೆ ಮತ್ತು ಕಲಿತ ವಿದ್ಯೆ ಎರಡನ್ನು ಯಾರು ಕದಿಯಲು ಸಾಧ್ಯವಿಲ್ಲ. ಕಲಾವಿದನಿಗೆ ಎಲ್ಲಕಡೆಯೂ ಬೆಲೆ ಇದೆ ಎಂದರು.ತುಮಕೂರು ಜಿಲ್ಲೆ ಕಲಾವಿದರ ತವರೂರು, ಗುಬ್ಬಿ ವೀರಣ್ಣ ನವರು ನರಸಿಂಹರಾಜು, ಡಾ.ರಾಜಕುಮಾರ್, ಕೆ.ಹಿರಣ್ಣಯ್ಯ, ಮಾಸ್ಟರ್ ಹಿರಣ್ಣಯ್ಯ ನಂತಹ ಅನೇಕ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಮೂಲಕ ಸ್ಯಾಂಡಲ್‌ವುಡ್ ಉತ್ತುಂಗಕ್ಕೆರಲು ಕಾರಣ ರಾಗಿದ್ದಾರೆ. ನಾವು ಶಾಸಕರಾಗಿದ್ದ ಸಂದರ್ಭದಲ್ಲಿ ನಾನು, ವಾಸಣ್ಣ, ಉಮಾಶ್ರಿ ಸೇರಿದಂತೆ ಆಸಕ್ತರೆಲ್ಲಾ ಸೇರಿ ಪೌರಾಣಿಕ ನಾಟಕವನ್ನು ಪ್ರದರ್ಶನಕ್ಕೆ ಸಿದ್ದತೆ ಮಾಡಿದ್ದೇವು.ಆದರೆ ಮಳೆಯಿಂದ ಎಲ್ಲವೂ ಹಾಳಾಯಿತು. ಅಂದಿನಿಂದ ಬಣ್ಣ ಹಚ್ಚಬೇಕೆಂದರೂ ಇದುವರೆಗೂ ಸಾಧ್ಯವಾಗಿಲ್ಲ.ಇಂದಿಗೂ ಪಾತ್ರವೊಂದಕ್ಕೆ ಬಣ್ಣ ಹಚ್ಚಬೇಕೆಂಬ ಆಸೆಯಿದೆ ಎಂದು ನುಡಿದರು.ಪೌರಾಣಿಕ ನಾಟಕಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆ. ಹಾಗಾಗಿ ಎಲ್ಲೆಡೆ ಇಂದಿಗೂ ಮೆಚ್ಚುಗೆ ಇದೆ. ಪೌರಾಣಿಕ ನಾಟಕಗಳಿಗೆ, ಅದರ ಕಲಾವಿದರ ಅಭಿಮಾನಿಗಳಿದ್ದಾರೆ. ನಾಟಕವನ್ನು ಜನರು ನಮ್ಮ ನಡುವೆಯೇ ನಡೆಯುತ್ತಿದೆ ಎಂಬಂತೆ ಭಾವಿಸುತ್ತಾರೆ. ಇಂತಹ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಉದಯರವಿ ರಂಗಭೂಮಿ ಕಲಾವಿದರ ಬಳಗ ಕೆಲಸ ಮಾಡುತ್ತಿದೆ. ಎಲ್ಲರಿಗೂ ಶುಭವಾಗಲಿ,ಕಲಾಸಕ್ತರಿಗೆ ಒಳ್ಳೆಯ ರಸದೌತಣ ನೀಡಲಿ ಎಂದು ಶುಭ ಹಾರೈಸಿದರು.ಕಲಾವಿದರಾದ ಬಿಡದಿ ರಾಜಣ್ಣ ಮಾತನಾಡಿ, ತುಮಕೂರು ನಾಟಕಗಳ ತವರೂರು, ಪ್ರತಿ ಶನಿವಾರ, ಭಾನುವಾರ, ಕಿಕ್ಕಿರದ ಪ್ರೇಕ್ಷಕರ ನಡುವೆ ಪೌರಾಣಿಕ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಈ ಭಾಗದಲ್ಲಿ ಹೆಚ್ಚಾಗಿ ಕುರುಕ್ಷೇತ್ರ ನಾಟಕಗಳು ಪ್ರದರ್ಶನ ಗೊಂಡರೆ, ಮೈಸೂರು, ಚಾಮರಾಜನಗರ ಭಾಗಗಳಲ್ಲಿ ರಾಮಾಯಣ ನಾಟಕಗಳು ಹೆಚ್ಚಾಗಿ ಕಾಣಬಹುದು.ಈ ಭಾಗದಲ್ಲಿ ಕಲಾವಿದರಷ್ಟೇ, ಕಲಾಪೋಷಕರು ಇರುವುದರಿಂದ ನಾಟಕಗಳಿಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತಿದೆ ಎಂದರು.ಉದಯರವಿ ರಂಗಭೂಮಿ ಕಲಾಬಳಗ, ಬೆಳಗುಂಬದ ಅಧ್ಯಕ್ಷರು ಹಾಗೂ ನಾಟಕೋತ್ಸವದ ಆಯೋಜಕ ಉದಯಕುಮಾರ್ ಮಾತನಾಡಿದರು. ಜಿಲ್ಲಾ ರಂಗಭೂಮಿ ವೈ.ಎನ್.ಶಿವಣ್ಣ,ಮರಳೂರು ರಾಮಣ್ಣ,ತೋಟದ ಸಾಲು ರಾಜಣ್ಣ, ಜಿಲ್ಲೆಯ ಎಲ್ಲಾ ಕಲಾವಿದರು ಪಾಲ್ಗೊಂಡಿದ್ದರು.