ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಹೊನ್ನವಳ್ಳಿ ಹೋಬಳಿ ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗತಿಹಳ್ಳಿ ಗ್ರಾಮದ ರಸ್ತೆ ಮಧ್ಯೆಯೇ ನೀರಿಲ್ಲದೆ, ಬತ್ತಿ ಹೋಗಿರುವ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಲೇ ಇಂತಹ ಕೊಳವೆ ಬಾವಿಗಳನ್ನು ಮುಚ್ಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ನಾಗತೀಹಳ್ಳಿ ಗ್ರಾಮದ ಪ್ರಮುಖ ಸಿಮೆಂಟ್‌ರಸ್ತೆ ಮಧ್ಯೆ ಒಂದು ಬೋರ್‌ವೆಲ್ ಇದ್ದು ಇದರಲ್ಲಿ ನೀರಿಲ್ಲದ ಕಾರಣ ಗ್ರಾಮ ಪಂಚಾಯಿತಿಯವರು ಹಲವಾರು ವರ್ಷಗಳಿಂದಲೇ ಮುಚ್ಚದೆ ಹಾಗೆ ಬಿಟ್ಟಿದ್ದಾರೆ. ಇತ್ತೀಚೆಗೆ ಈ ಕೊಳವೆ ಬಾವಿ ಸೇರಿಸಿಕೊಂಡು ಸಿಮೆಂಟ್ ರಸ್ತೆ ಮಾಡಲಾಗಿದೆ. ಈ ರಸ್ತೆ ಎರಡೂ ಕಡೆಗಳಲ್ಲಿ ವಾಸದ ಮನೆಗಳಿದ್ದು ಮಕ್ಕಳು ಯಾವಾಗಲೂ ಇದೇ ರಸ್ತೆಯ ಮೇಲೆ ಆಟವಾಡುತ್ತಿರುತ್ತಾರೆ. ನೂರಾರು ವಾಹನಗಳು ಸಹ ಓಡಾಡುತ್ತಿರುತ್ತವೆ. ಈ ಬಗ್ಗೆ ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿದಿದ್ದರೂ ಸರ್ಕಾರಿ ಆದೇಶವನ್ನು ಕಾಲ ಕಸ ಮಾಡಿಕೊಂಡು ಕೊಳವೆ ಬಾವಿ ಮುಚ್ಚದೆ ನಿರ್ಲಕ್ಷ್ಯ ವಹಿಸಿದ್ದು ಸಂಬಂದಿಸಿದ ಮೇಲಧಿಕಾರಿಗಳು ಗ್ರಾಮ ಪಂಚಾಯಿತಿ ಅಧಿಕಾರಿಯ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕಲ್ಲದೆ, ಕೂಡಲೆ ಕೊಳವೆ ಬಾವಿ ಮುಚ್ಚುವ ಕೆಲಸ ಮಾಡಬೇಕಿದೆ. ನೀರಿಲ್ಲದೆ ಬತ್ತಿಹೋಗಿರುವ ಕೊಳವೆ ಬಾವಿಗಳನ್ನು ಹಾಗೆಯೇ ಬಿಡುವುದರಿಂದ ಮಕ್ಕಳು ಬಿದ್ದು ಅನಾಹುತವಾಗಲಿದೆ. ಇಂತಹ ಘಟನೆಗಳು ಬೇರೆ ಕಡೆಗಳಲ್ಲಿ ನೋಡಿರುತ್ತೇವೆ. ಇಂತಹ ಕೊಳವೆ ಬಾವಿಗಳನ್ನು ಸ್ಥಳೀಯ ಸಂಬಂಧಪಟ್ಟ ಅಧಿಕಾರಿಗಳು ಮುಚ್ಚುವಂತೆ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿದೆ. ಆದರೂ ತಾಲೂಕಿನ ನಗರ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಓಡಾಡುವ ರಸ್ತೆ, ದಾರಿಗಳಲ್ಲಿಯೇ ನೀರಿಲ್ಲದ ಕೊಳವೆ ಬಾವಿಗಳು ಬಾಯ್ತೆರೆದುಕೊಂಡಿರುತ್ತವೆ. ಇನ್ನೂ ಕೆಲವು ಕಡೆಗಳಲ್ಲಿ ನೆಪ ಮಾತ್ರಕ್ಕೆ ಬೋರ್‌ವೆಲ್‌ನ ಕೇಸಿಂಗ್ ಮೇಲೆ ಕಲ್ಲಿಟ್ಟು ಸುಮ್ಮನಾಗುತ್ತಿದ್ದಾರೆ. ಮಳೆ ಬಂದರೆ ಮಳೆ ನೀರು ಕೊರೆದು ಅನಾಹುತವಾಗಲಿದೆ. ಈ ಬಗ್ಗೆ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾಗಿರುವ ಉಪವಿಭಾಗಾಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ತಾಲೂಕಿನಲ್ಲಿ ಎಲ್ಲೆಲ್ಲಿ ಇಂತಹ ಕೊಳವೆ ಬಾವಿಗಳಿರುತ್ತವೆಯೋ ತಕ್ಷಣ ಮುಚ್ಚುವಂತೆ ಸಂಬಂದಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಆದೇಶ ನೀಡಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಕ್ಕಳ ಜೀವ ಬಲಿಯಾಗುವುದಕ್ಕೂ ಮುಂಚೆ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.