ಸಾರಾಂಶ
ಗದಗ:ಜಿಲ್ಲೆಯಲ್ಲಿ ಎಚ್ಐವಿ ಪ್ರಮಾಣ ಇಳಿಮುಖವಾಗಿದ್ದು, ವಿದ್ಯಾರ್ಥಿಗಳು ಎಚ್ಐವಿ ಏಡ್ಸ್ ಬಗ್ಗೆ ಮಾಹಿತಿ ತಿಳಿದುಕೊಂಡು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಹೇಳಿದರು.
ಅವರು ನಗರದ ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯಏಡ್ಸ್ ಪ್ರೀವೇನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಐಎಂಎ ರೋಟರಿ ಸೆಂಟ್ರಲ್, ಲಯನ್ಸ್ ಕ್ಲಬ್, ನೂರಾನಿ ಟ್ರಸ್ಟ್, ಶಿಕ್ಷಣ ಇಲಾಖೆ, ಕ್ರೀಡಾ ಇಲಾಖೆ, ರಕ್ಷಣೆ ಸಂಸ್ಥೆ, ಸೃಷ್ಟಿ ಸಂಕುಲ ಸಂಸ್ಥೆ, ಚೈತನ್ಯ ಸಂಸ್ಥೆ, ನವಚೇತನ ಸಂಸ್ಥೆ, ಜಿಲ್ಲೆಯ ಎನ್.ಎಸ್.ಎಸ್ ಘಟಕಗಳು ಹಾಗೂ ರೆಡ್ ರಿಬ್ಬನ್ ಕ್ಲಬ್‌ಗಳ ಸಂಯುಕ್ತಾಶ್ರಯದಲ್ಲಿ ಎಚ್ಐವಿ, ಏಡ್ಸ್ ತಡೆಗಟ್ಟಲು ತೀವ್ರ ತರವಾದ ಐಇಸಿ ಪ್ರಚಾರಾಂದೋಲನ-2024ರ ಅಂಗವಾಗಿ ರೆಡ್ ರಿಬ್ಬನ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ 5 ಕಿಮೀ ಮ್ಯಾರಾಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.ತೀವ್ರ ತರವಾದ ಐಇಸಿ ಪ್ರಚಾರಾಂದೋಲನದ ಘೋಷವಾಕ್ಯದಂತೆ ಸುಸ್ಥಿರ ಡಿಜಿಟಲ್ ಅಭಿವೃದ್ಧಿಗಾಗಿ ಯುಜನತೆಯ ಮುಂದಾಳತ್ವ ಘೋಷಣೆಯಂತೆ ಯುವಕರು ಸಂಯಮದಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸದೃಢ ಆರೋಗ್ಯ ಹೊಂದಿ ಸಮೃದ್ಧ ಭಾರತ ನಿರ್ಮಾಣ ಮಾಡಲು ಕೈ ಜೋಡಿಸಬೇಕೆಂದು ತಿಳಿಸಿದರು.
ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರೊ. ಎಸ್.ಬಿ. ಮಾಸನಾಯಕ ಮಾತನಾಡಿ, ವಿದ್ಯಾರ್ಥಿಗಳು ಯವ್ವನದಲ್ಲಿ ತಮ್ಮ ಜೀವನ ಜೋಪಾನ ಮಾಡಿಕೊಂಡು ಆರೋಗ್ಯಕರ ನಡುವಳಿಕೆ ರೂಪಿಸಿಕೊಳ್ಳಿ ಎಂದರು.ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಅರುಂಧತಿ ಕುಲಕರ್ಣಿ ಮಾತನಾಡಿ, ಎಚ್ಐವಿ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದು, ಜಿಲ್ಲೆಯ ಯುವ ಸಮುದಾಯ ಜಾಗೃತಿ ಮೂಡಿಸಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರಲು ಶ್ರಮಿಸಬೇಕು. ಮ್ಯಾರಾಥಾನ ನಡೆಸುವ ಉದ್ದೇಶ ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ತಡೆಗಟ್ಟುವುದು, ಎಚ್ಐವಿ ಏಡ್ಸತಡೆ ಕಾಯ್ದೆ- 2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ಸಹಾಯವಾಣಿ 1097 ಎಸ್.ಟಿ.ಐ ಕಾಯಿಲೆಗಳು ಇತ್ಯಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಈ ಸ್ಪರ್ಧೆಯ ಉದ್ದೇಶ ಎಂದು ತಿಳಿಸಿದರು.
ಈ ವೇಳೆ ಐ.ಎಂ.ಎ ಅಧ್ಯಕ್ಷ ಡಾ.ಜಿ.ಎಸ್.ಪಲ್ಲೇದ, ಡಾ. ಆರ್.ಎನ್. ಗೋಡಬೋಲೆ, ದಾನಪ್ಪಗೌಡರ, ನಿತೀಶ ಸಾಲಿ, ನುಮೇರ ನೂರಾನಿ, ಪ್ರೊ. ಎಸ್.ಎಸ್. ಕೊಳ್ಳಿಯವರ, ಮಂಜುನಾಥ ಬಾಗಡೆ, ವಿದ್ಯಾ ಕುಲಕರ್ಣಿ, ರೂಪಸೇನ್ ಚವ್ಹಾಣ, ಗೀತಾ ಕಾಂಬಳೆ, ಪುಷ್ಪಾ ಪಾಟೀಲ, ಸಿದ್ದಪ್ಪ ಲಿಂಗದಾಳ, ಬಸವರಾಜ ಹಿರೇಹಾಳ, ಗುರುರಾಜ ಕೋಟ್ಯಾಳ ಹಾಗೂ ಇತರರು ಇದ್ದರು.ಬಸವರಾಜ ಲಾಳಗಟ್ಟಿ ನಿರೂಪಿಸಿ, ವಂದಿಸಿದರು.
ಮ್ಯಾರಾಥಾನ ಸ್ಪರ್ಧೆಯಲ್ಲಿ ಪುರುಷರಲ್ಲಿ ಪ್ರಥಮ ಸ್ಥಾನವನ್ನು ಈರಪ್ಪ ಲಕ್ಕುಂಡಿ, ದ್ವೀತಿಯ ಸ್ಥಾನವನ್ನು ನಿಂಗಪ್ಪ ಕರಿಗಣ್ಣವರ, ತೃತೀಯ ಸ್ಥಾನವನ್ನು ಸುದೀಪ ಖಾನಾಪೂರ ಪಡೆದುಕೊಂಡರು. ಪರಶುರಾಮ ಹಿರೇಮನಿ, ವಿಜಯ ಬಿಸ್ನಳ್ಳಿ, ವಿಜಯಕುಮಾರ ಹಡಗಳಿ, ಮುತ್ತಪ್ಪ ನಾಯ್ಕರ ಸಮಾಧಾನಕರ ಪ್ರಶಸ್ತಿಗೆ ಭಾಜನರಾದರು.ವಿದ್ಯಾರ್ಥಿನಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಭೂಮಿಕಾ ಪುಠಾಣಿ, ದ್ವಿತೀಯ ಸ್ಥಾನವನ್ನು ಜ್ಯೋತಿ ಕಾಕುರಗೋಡ ಹಾಗೂ ತೃತೀಯ ಸ್ಥಾನವನ್ನು ಶೋಭಾ ತಂಬೂರಿ ಪಡೆದರು. ಕನಕಾ. ಎಸ್.ಜಿ., ವಿಜಯಲಕ್ಷ್ಮೀ ನಲವಡಿ, ಪೂಜಾ ಪೋತದಾರ, ಶಿಲ್ಪಾ ಕೊಂತಿಕಲ್ ಸಮಾಧಾನಕರ ಪ್ರಶಸ್ತಿಗೆ ಭಾಜನರಾದರು.