ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪಾಳೆಗಾರ ಮತ್ತು ಪಶುಪಾಲಕ ಬುಡಕಟ್ಟುಗಳು ಸಾಂಸ್ಕೃತಿಕ ಸಂಘರ್ಷಗಳನ್ನು ಬದಿಗೊತ್ತಿ ಸಾಮರಸ್ಯದಿಂದ ಬದುಕುವ ಅಗತ್ಯವಿದೆ ಎಂದು ಕವಿ ಹಾಗೂ ವಿಮರ್ಶಕ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.

ನಗರದ ತಾಲೂಕು ಪಂಚಾಯಿತಿ ಸಂಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿ, ಸಂಶೋಧಕ ಜಿ.ವಿ ಆನಂದಮೂರ್ತಿ ಅವರ ‘ಕರಿಮಲೆಯಿಂದ ಕೊಂಕಿ ಜರಮಲೆವರೆಗೆ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಭಾರತೀಯ ಮೂಲ ಸಮುದಾಯಗಳಾದ ಪಶುಪಾಲಕ, ಅಲೆಮಾರಿ, ದಲಿತರ ಕುರಿತು ಡಿ.ಡಿ ಕೋಸಂಬಿಯವರು ಬರೆದಿರುವ ಬರಹಗಳು ದಮನಿತರ ಬದುಕಿನ ಚಾರಿತ್ರಿಕ ದಾಖಲೆ ಮಾಡುತ್ತವೆ ಎಂದು ತಿಳಿಸಿದರು.

ಕಾಡುಗೊಲ್ಲ ಮತ್ತು ಮ್ಯಾಸಬೇಡ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅನನ್ಯತೆ ಅತ್ಯಂತ ಮಹತ್ವವಾದುದು. ಕಾಡುಗೊಲ್ಲರ ಸಾಂಸ್ಕೃತಿಕ ಆಚರಣೆಗಳು ಅವರು ಇತರೆ ಸಮುದಾಯಗಳ ಜೊತೆಗೆ ಎಂತಹ ಒಡನಾಟ ಹೊಂದಿದ್ದಾರೆ. ಅವರ ಜೀವನಕ್ರಮ, ದೈವಗಳ ವಿಶಿಷ್ಟತೆ, ಇಂತಹ ಅನೇಕ ಆಸಕ್ತಿಕರ ಸಂಗತಿಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ವಿವರಿಸಿದರು.

ಚಿತ್ರದುರ್ಗ, ಬಳ್ಳಾರಿ, ತುಮಕೂರು ಭಾಗಗಳಲ್ಲಿ ಸಾಂದ್ರಗೊಂಡಿರುವ ಈ ಸಮುದಾಯಗಳ ಪಶುಪಾಲನೆ, ಆಚಾರ, ವಿಚಾರಗಳ ತಲಸ್ಪರ್ಶಿ ಅಧ್ಯಯನಗಳನ್ನು ಮುಂದಿನ ಪೀಳಿಗೆಯೂ ಮಾಡಬೇಕಿದೆ. ಇಂತಹ ಪುಸ್ತಕಗಳು ಮುಂದಿನ ಅಧ್ಯಯನಕಾರರಿಗೆ ಆಕರಗಳಾಗಲಿವೆ. ಕರಿಮಲೆ ಎನ್ನುವುದು ಸಂಡೂರಿನ ಬೆಟ್ಟವೇ? ತೆಲುಗಿನ ನಲ್ಲಮಲೈ ಎಂದು ಕರೆಯುವ ಶ್ರೀಶೈಲ ಬೆಟ್ಟವೇ? ಎನ್ನುವ ಕುರಿತು ಮತ್ತಷ್ಟು ಸಂಶೋಧನೆಗಳು ನಡೆಯಬೇಕಿದೆ . ಸಂಶೋಧಕನು ಐತಿಹ್ಯಗಳನ್ನು ಬುಡಕಟ್ಟುಗಳ ದೈವಾರಾಧನೆಗಳನ್ನು ಕುರಿತು ಅಧ್ಯಯನ ಮಾಡುವಾಗ ತನಿಖಾಧಿಕಾರಿ ಆಗಬೇಕಿಲ್ಲ. ಪಡೆದಿರುವ, ಕಂಡಿರುವ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸುವ ಕೆಲಸ ಆಗಬೇಕಿದೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರಘುಮೂರ್ತಿ, ಕಾಡುಗೊಲ್ಲ ಸಮುದಾಯವನ್ನು ಕಳೆದ 13 ವರ್ಷಗಳಿಂದ ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ.

ಈ ಸಮುದಾಯ ಜಾನಪದ, ಸೋಬಾನೆ, ಕೋಲಾಟ ಇಂತಹ ಸಾಂಸ್ಕೃತಿಕ ಶ್ರೀಮಂತಿಯನ್ನು ಅನಾದಿಕಾಲದಿಂದಲೂ ಪೋಷಿಸುತ್ತಾ ಬಂದಿರುವುದನ್ನು ಕಾಣಬಹುದಾಗಿದೆ. ಕಾಡುಗೊಲ್ಲ ಮತ್ತು ನಾಯಕ ಸಮುದಾಯಗಳಲ್ಲಿ ಈಗಲೂ ಅನೇಕ ಆಚರಣೆಗಳು ಸಾಮ್ಯತೆ ಹೊಂದಿರುವುದನ್ನು ನೋಡಬಹುದು. ಇದಕ್ಕೆ ನಿದರ್ಶನವೆಂಬಂತೆ ಕಾಡುಗೊಲ್ಲರ ಗುಬ್ಬದ ದೈವಗಳು ಎರಡೂ ಸಮುದಾಯಗಳಲ್ಲೂ ಇವೆ ಎಂದು ವಿವರಿಸಿದರು.

ಜಾನಪದ ಆಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಪುಸ್ತಕ ಕುರಿತು ಮಾತನಾಡಿ, ಇಡೀ ಪುಸ್ತಕದಲ್ಲಿ ಕರಿಮಲೆಯಿಂದ ಅಂದರೆ ಮೊಳಕಾಲ್ಮೂರು ಪ್ರದೇಶದಿಂದ ಶುರು ಮಾಡಿ ಕೂಡ್ಲಿಗಿ, ಸಂಡೂರುವರೆಗಿನ ಪಯಣ ಬಗೆಗಿನ ಇವರ ಲೇಖನಗಳು ಅನೇಕ ಮಾಹಿತಿಗಳನ್ನು ಒಳಗೊಂಡಿದೆ. ಲೇಖಕರು ಕಾಡುಗೊಲ್ಲ ಸಮುದಾಯವನ್ನು ಪ್ರತಿನಿಧಿಸದೇ ಹೋದರೂ, ಈ ಸಮುದಾಯದ ಬಗೆಗಿನ ಅವರ ಕಾಳಜಿ ಮೆಚ್ಚುವಂತದ್ದು ಎಂದು ನುಡಿದರು.

ಪ್ರಾಂಶುಪಾಲ ಹೊನ್ನಗಾನಹಳ್ಳಿ ಕರಿಯಣ್ಣ, ಲೇಖಕ ಡಾ.ಜಿ.ವಿ‌.ಆನಂದಮೂರ್ತಿ ಮಾತನಾಡಿದರು. ಆಯೋಜಕ ನಿಸರ್ಗ ಗೋವಿಂದರಾಜು, ಕತೆಗಾರ ತಿಪ್ಪಣ್ಣ ಮರಿಕುಂಟೆ, ಪಿ.ತಿಪ್ಪೇಸ್ವಾಮಿ, ಡಾ.ಸಿ.ಶಿವಲಿಂಗಪ್ಪ, ಎಂ.ಜಿ‌ ರಂಗಸ್ವಾಮಿ, ಗದ್ದಿಗೆ ತಿಪ್ಪೇಸ್ವಾಮಿ, ಡಾ.ದೊಡ್ಡ ಮಲ್ಲಯ್ಯ, ತಾಲೂಕು ಪಂಚಾಯಿತಿ ಇಒ ಶಶಿಧರ್, ಸಮುದಾಯದ ಮುಖಂಡ ರಾಜಪ್ಪ, ನಿವೃತ್ತ ಪ್ರಾಂಶುಪಾಲ ಕರಿಯಪ್ಪ, ಪಿಡಿಓ ರಾಮಚಂದ್ರಪ್ಪ, ಗಂಗಾಧರ್, ನಾಗೇಶ್ ಐನ್ ಸ್ಟೈನ್, ಇದ್ದರು. ಹುಣ್ಣಿಮೆ ಪ್ರಕಾಶನದ ಡಾ. ಎನ್. ಆರ್. ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ನವೀನ್ ನಿರೂಪಿಸಿ ವಂದಿಸಿದರು.