ಸಾರಾಂಶ
ಮಕ್ಕಳಲ್ಲಿ ಕಲ್ಪನಾಶಕ್ತಿ ಹೆಚ್ಚಿಸುವ ಅಗತ್ಯವಿದ್ದು, ಶಬ್ದಸಂಗ್ರಹ ಪದ ಜೋಡಣೆಗಳ ಕಲಿಕೆ ನಡೆಯಬೇಕು.
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲೂಕಾ ಘಟಕ, ಭಾರತ ಜ್ಞಾನ ವಿಜ್ಞಾನ ಸಮಿತಿ ಇವುಗಳ ಸಹಯೋಗದಲ್ಲಿ ಮಕ್ಕಳ ಸಾಹಿತ್ಯ ಚಿಂತನ ಮಂಥನ ಎಂಬ ವಿಚಾರ ಸಂಕಿರಣ ಪಟ್ಟಣದ ಶಿವಪುರ ಬಡಾವಣೆಯಲ್ಲಿರುವ ಸಾಹಿತ್ಯ ಭವನದಲ್ಲಿ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಪಪೂ ಕಾಲೇಜು ಪ್ರಾಚಾರ್ಯ ಡಿ. ಸೋಮನಾಥ ಮಾತನಾಡಿ, ಜಿಲ್ಲೆಯಾದ್ಯಂತ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಇನ್ನಷ್ಟು ಆಳವಾಗಿ ಮಕ್ಕಳ ಸಾಹಿತ್ಯವನ್ನು ಅಧ್ಯಯನ ಮಾಡಲು ಈ ವಿಚಾರ ಸಂಕಿರಣ ಪೂರಕವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ತಿಂಗಳು ಸುವರ್ಣ ಕರ್ನಾಟಕ ಆಚರಣೆ ಅಂಗವಾಗಿ ಆಚರಿಸುತ್ತಿರುವ ನಾಲ್ಕನೇ ಕಾರ್ಯಕ್ರಮ ಇದಾಗಿದೆ ಎಂದರು.
ಮಕ್ಕಳ ಕಾವ್ಯ ರಚನೆ ಎಂಬ ವಿಷಯ ಕುರಿತು ಮಾತನಾಡಿದ ಹಿರಿಯ ಸಾಹಿತಿ ಜಿ.ಎಂ. ಓಂಕಾರಣ್ಣನವರು, ಮಕ್ಕಳಲ್ಲಿ ಕಲ್ಪನಾಶಕ್ತಿ ಹೆಚ್ಚಿಸುವ ಅಗತ್ಯವಿದ್ದು, ಶಬ್ದಸಂಗ್ರಹ ಪದ ಜೋಡಣೆಗಳ ಕಲಿಕೆ ನಡೆಯಬೇಕು, ಅವರಿಗೆ ನಿಲಕುವ ವಸ್ತು ಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದರು.ಮಕ್ಕಳ ನಾಟಕ ಸಾಹಿತ್ಯ ಕುರಿತು ಕಲಾವಿದ ಜಮೀರ ರಿತ್ತಿ ವಿಚಾರ ಮಂಡಿಸಿ, ಶಾಲಾ ವಾರ್ಷಿಕೋತ್ಸವಗಳಲ್ಲಿ ನಾಟಕಗಳು ಮಾಯವಾಗುತ್ತಿವೆ. ನೃತ್ಯಗಳೇ ಪ್ರಧಾನವಾಗಿ ರಾರಾಜಿಸುವ ಈ ದಿನಗಳಲ್ಲಿ ಮಕ್ಕಳ ನಾಟಕಗಳಿಗೆ ಒತ್ತು ನೀಡಬೇಕೆಂದರು.
ಮಕ್ಕಳ ಸಾಹಿತ್ಯದ ಇಂದಿನ ಅಗತ್ಯತೆ ಕುರಿತು ಹಿರಿಯ ಲೇಖಕ ಜೀವರಾಜ ಛತ್ರದ ಮಾತನಾಡಿ, ಅವಿಭಕ್ತ ಕುಟುಂಬ ಗಳು ನಾಶವಾದ ಮೇಲೆ ಮಕ್ಕಳ ಸಾಹಿತ್ಯ ಕುಂಠಿತವಾಗಿದೆ. ಕುವೆಂಪು, ಬೇಂದ್ರೆ, ರಾಜರತ್ನಂ ಅವರ ಸುವರ್ಣಕಾಲ ಮತ್ತೆ ಬರಬೇಕು ಎಂದರು.ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಕಾಲ ಕಾಲಕ್ಕೆ ಮಕ್ಕಳ ಸಾಹಿತ್ಯ ಕುರಿತು ಗೋಷ್ಠಿಗಳು ಎಲ್ಲೆಡೆ ನಡೆಯಬೇಕು, ಅಂತಹ ಪ್ರಯತ್ನಗಳನ್ನು ಜಿಲ್ಲಾ ಘಟಕದಿಂದ ಮಾಡಲಾಗುತ್ತಿದೆ ಎಂದರು.
ಡಾ. ಪ್ರೇಮಾನಂದ ಲಕ್ಕಣ್ಣನವರ, ಭಾರತ ಜ್ಞಾನವಿಜ್ಞಾನ ಸಮಿತಿ ರೇಣುಕಾ ಗುಡಿಮನಿ, ಜಿಲ್ಲಾ ಕಾರ್ಯದರ್ಶಿ ಬಿ.ಪಿ. ಶಿಡೇನೂರ ವೇದಿಕೆಯಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಬಿ.ಎಂ. ಜಗಾಪೂರ ಸ್ವಾಗತಿಸಿ, ಸತೀಶ ಬಾಗಣ್ಣನವರ ವಂದಿಸಿದರು.