ಗ್ರಾಮೀಣ ಭಾಗದಲ್ಲಿ ಕ್ರೀಡೆ ಉತ್ತೇಜಿಸುವ ಅಗತ್ಯತೆ ಇದೆ

| Published : Sep 14 2024, 01:54 AM IST

ಸಾರಾಂಶ

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕ್ರೀಡೆಗೆ ಇನ್ನೂ ಹೆಚ್ಚಿನ ಉತ್ತೇಜನದ ಅವಶ್ಯಕತೆ ಇದೆ. ಗ್ರಾಮೀಣ ಭಾಗದಲ್ಲಿ ಕ್ರೀಡೆಯನ್ನು ಬಲವಾಗಿ ಸಂಘಟಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಇಲಾಖೆ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಾಲೂಕು ಶಿಕ್ಷಣ ಪರಿವೀಕ್ಷಕ ಯು. ಸುನೀಲ್‌ನಾಯ್ಕ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕ್ರೀಡೆಗೆ ಇನ್ನೂ ಹೆಚ್ಚಿನ ಉತ್ತೇಜನದ ಅವಶ್ಯಕತೆ ಇದೆ. ಗ್ರಾಮೀಣ ಭಾಗದಲ್ಲಿ ಕ್ರೀಡೆಯನ್ನು ಬಲವಾಗಿ ಸಂಘಟಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಇಲಾಖೆ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಾಲೂಕು ಶಿಕ್ಷಣ ಪರಿವೀಕ್ಷಕ ಯು. ಸುನೀಲ್‌ನಾಯ್ಕ ತಿಳಿಸಿದರು.

ಅವರು, ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ವಿವಿಧ ಪಂದ್ಯಗಳನ್ನು ವೀಕ್ಷಿಸಿ, ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.

ತಾಲೂಕಿನ ತಳಕು ಹೋಬಳಿಯ ಘಟಪರ್ತಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಬಾಲಕರ ವಿಭಾಗದ ಖೋ-ಖೋ ಪಂದ್ಯದಲ್ಲಿ ದೊಡ್ಡ ಉಳ್ಳಾರ್ತಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ, ಕಾಲುವೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ಹಿರಿಯ ದೈಹಿಕ ಶಿಕ್ಷಕ ಪಾಪಣ್ಣ ಮಾತನಾಡಿ, ಈ ಬಾರಿ ನಡೆದ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಕ್ರೀಡಾ ಸ್ಫೂರ್ತಿಯನ್ನು ನಾವು ವಿದ್ಯಾರ್ಥಿಗಳಿಂದ ಕಂಡಿದ್ದೇವೆ. ಪ್ರತಿಯೊಂದು ಶಾಲೆಯಲ್ಲೂ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಕ್ರೀಡಾಸ್ಫೂರ್ತಿ ಬಗ್ಗೆ ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ಎಲ್ಲರ ಗುರಿ ಗೆಲುವಿನತ್ತ ಮಾತ್ರ ಇತ್ತು. ಯಾವುದೇ ಸಣ್ಣಪುಟ್ಟ ಘಟನೆಗಳಿಗೆ ಅವಕಾಶ ನೀಡದಂತೆ ಶಾಂತಿಯುತವಾಗಿ ಕ್ರೀಡೆಗಳು ಮುಂದುವರೆದಿವೆ ಎಂದರು.

ದೈಹಿಕ ಶಿಕ್ಷಕರಾದ ರಾಜಣ್ಣ, ಮಲ್ಲಿಕಾರ್ಜುನ, ಗುರುಮೂರ್ತಿ, ಸತೀಶ್, ಎಸ್. ಶ್ರೀ ರಾಮನಾಯಕ, ಅನಿಲ್, ಎಸ್‌ಡಿಎಂಸಿ ಅಧ್ಯಕ್ಷ ಪೆದ್ದಣ್ಣ ಮುಂತಾದವರು ಉಪಸ್ಥಿತರಿದ್ದರು.