ಕುಂಬಳಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ತೀರಿ?! ಬಿಜೆಪಿ ಮುಖಂಡ ಜಿ.ಮಂಜುನಾಯ್ಕ

| Published : Dec 29 2024, 01:20 AM IST / Updated: Dec 29 2024, 05:01 AM IST

ಸಾರಾಂಶ

ಒಳ ಒಪ್ಪಂದ ಮಾಡಿಕೊಂಡ ಬಿಜೆಪಿ ನಾಯಕರ ಹೆಸರು ಬಹಿರಂಗಪಡಿಸಲು ಯಶವಂತರಾವ್ ಜಾಧವ್ ಪ್ರಶ್ನಿಸಿದರೆ, ಅದಕ್ಕೆ ಕುಂಬಳ ಕಾಯಿ ಕಳ್ಳ ಅಂದ್ರೆ ಕೆಲವರು ಹೆಗಲು ಮುಟ್ಟಿ ನೋಡಿಕೊಳ್ಳುವುದು ಏಕೆ ಎಂದು ಬಿಜೆಪಿ ಮುಖಂಡ, ವಕೀಲ ಜಿ.ಮಂಜುನಾಯ್ಕ ಪ್ರಶ್ನಿಸಿದ್ದಾರೆ.

ದಾವಣಗೆರೆ: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಜಿಲ್ಲಾ ಮಂತ್ರಿಗಳ ವಿರುದ್ಧ ಪತ್ರ ಬರೆದಿದ್ದ ಚನ್ನಗಿರಿ ಶಾಸಕರಿಗೆ ನಿಮ್ಮ ಮಂತ್ರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಬಿಜೆಪಿ ನಾಯಕರ ಹೆಸರು ಬಹಿರಂಗಪಡಿಸಲು ಯಶವಂತರಾವ್ ಜಾಧವ್ ಪ್ರಶ್ನಿಸಿದರೆ, ಅದಕ್ಕೆ ಕುಂಬಳ ಕಾಯಿ ಕಳ್ಳ ಅಂದ್ರೆ ಕೆಲವರು ಹೆಗಲು ಮುಟ್ಟಿ ನೋಡಿಕೊಳ್ಳುವುದು ಏಕೆ ಎಂದು ಬಿಜೆಪಿ ಮುಖಂಡ, ವಕೀಲ ಜಿ.ಮಂಜುನಾಯ್ಕ ಪ್ರಶ್ನಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಮಂತ್ರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಬಿಜೆಪಿ ನಾಯಕರ ಹೆಸರು ಬಹಿರಂಗಪಡಿಸಲು ಚನ್ನಗಿರಿ ಶಾಸಕರಿಗೆ ಯಶವಂತರಾವ್ ಒತ್ತಾಯಿಸಿದ್ದರು. ಅದಕ್ಕೆ ಬಿಜೆಪಿಯಲ್ಲೇ ಇರುವ ಕೆಲವರು ಯಾಕೆ ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡರು ಎಂಬುದೇ ಅರ್ಥವಾಗುತ್ತಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಬದಲಿಸುವಂತೆ ಶಾಸಕ ಶಿವಗಂಗಾ ಬಸವರಾಜ ತಮ್ಮ ಪಕ್ಷದ ಹೈಕಮಾಂಡ್‌, ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದರು. ಹಾಗಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಆಗಬಾರದೆಂದು, ಕಾಂಗ್ರೆಸ್ ಸಚಿವರ ಜೊತೆ ಒಳ ಒಪ್ಪಂದ ಮಾಡಿಕೊಂಡ ಬಿಜೆಪಿ ಮುಖಂಡರ ಹೆಸರು ಬಹಿರಂಗಪಡಿಸಲು ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದ್ದು ಕೆಲವರಿಗೆ ಯಾಕೆ ಹೆಗಲು ಮುಟ್ಟಿಕೊಂಡು ನೋಡುವಂತೆ ಮಾಡಿದೆ ಎಂಬುದೇ ಅರ್ಥವಾಗುತ್ತಿಲ್ಲ. ವಿಧಾನಸಭೆ ಚುನಾವಣೆಗಳಲ್ಲಿ ಸತತವಾಗಿ ಸೋತರೂ ಯಶವಂತರಾವ್ ಆಸ್ತಿ ಹೆಚ್ಚಾಗಿದೆಯೆಂಬರ್ಥದಲ್ಲಿ ಕೆಲವರು ಮಾತನಾಡಿದ್ದು ಸರಿಯಲ್ಲ ಎಂದರು.

ಯಶ‍ವಂತರಾವ್ ತಮ್ಮ ರಾಜಕೀಯ ಜೀವನದಲ್ಲೇ ಕಾಂಗ್ರೆಸ್ ನಾಯಕರ ಮನೆ ಬಾಗಿಲಿಗೆ ಕಾಲಿಟ್ಟವರಲ್ಲ. ಯಾವುದೇ ಲೇಔಟ್ ಅಪ್ರೂವಲ್‌ಗೆ, ಸಂಬಂಧಿಕರ ಹೆಸರಿಗೆ ಕಳಪೆ ಕಾಮಗಾರಿ ಮಾಡಿ, ಸರ್ಕಾರದಿಂದ ಬಿಲ್ ಮಾಡಿಸಿಕೊಳ್ಳಲು ಕಾಂಗ್ರೆಸ್ ಸಚಿವರು, ಶಾಸಕರ ಮನೆ ಬಳಿ ಹೋದವರೂ ಅಲ್ಲ. ಇದೇ ಕಾಂಗ್ರೆಸ್ಸಿನ ನಾಯಕರ ಮನೆಗೆ ಲೇಔಟ್‌ ಅಪ್ರೂವ್ ಮಾಡಿಸಲು ಹೋಗಿ, ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಬಂದ ಮಹಾನ್ ನಾಯಕನಾರು ? ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿದ್ದು ಯಾರೆಂಬುದು ಇಡೀ ಜಿಲ್ಲೆಗೆ ಗೊತ್ತಿದೆ ಎಂದರು.

ಮೇಯರ್ ಚುನಾವಣೆ ವೇಳೆ 5 ಮತ ಕಡಿಮೆ ಇದ್ದ ಕಾರಣ ಆಗಿನ ಜಿಲ್ಲಾಧ್ಯಕ್ಷರ ಅನುಮತಿ ಮೇರೆಗೆ ಯಶವಂತರಾವ್‌ ತಮ್ಮ ಮಗ, ಪಾಲಿಕೆ ಸದಸ್ಯ ರಾಕೇಶ್ ಜಾಧವ್‌ಗೆ ವಿದೇಶಕ್ಕೆ ಕಳಿಸಿದ್ದರು. ಈಚೆಗೆ ಮಾಜಿ ಸಚಿವ ರೇಣುಕಾಚಾರ್ಯ ಇಲ್ಲಿನ ಖಾಸಗಿ ಹೊಟೆಲ್‌ನಲ್ಲಿ ಮಾಜಿ ಶಾಸಕರ ಸಭೆ ಕರೆದು, ಶಕ್ತಿ ಪ್ರದರ್ಶಿಸಿಲ್ಲ. ಹಿಂದೆ ಬಿ.ಎಸ್.ಯಡಿಯೂರಪ್ಪಗೆ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈದ್ರಾಬಾದ್‌ ರೆಸಾರ್ಟ್‌ಗೆ ಹೋದಾಗ ಯಡಿಯೂರಪ್ಪ ಕುಟುಂಬದ ವಿರುದ್ಧ ಮಾತನಾಡಿದಾಗ, ಕೆಜೆಪಿಗೆ ಹೋಗಿದ್ದಾಗ, ರಾಜ್ಯದಲ್ಲಿ ಬಿಜೆಪಿಯನ್ನು ಹಾಳು ಮಾಡುವುದರಲ್ಲೂ ರೇಣುಕಾಚಾರ್ಯ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ ಎಂದು ಲೇವಡಿ ಮಾಡಿದರು.

ಸಫಾಯಿ ಕರ್ಮಚಾರಿಗಳ ಸಂಘದ ಬಿ.ಪುಲಾಯ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ, ದುರುಗೇಶ, ಸಂತೋಷಕುಮಾರ, ಟಿಂಕರ್ ಮಂಜಣ್ಣ, ತರಕಾರಿ ಶಿವು ಮತ್ತಿತರರಿದ್ದರು.