ಕೇಂದ್ರದಿಂದ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ: ಮಂಗಳೂರು ವಿಜಯ್

| Published : Feb 19 2024, 01:34 AM IST

ಕೇಂದ್ರದಿಂದ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ: ಮಂಗಳೂರು ವಿಜಯ್
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ದೇಶದ ಪ್ರಧಾನಿ ಕೆಲಸ ದೇವಸ್ಥಾನ ಕಟ್ಟುವುದಾಗಲಿ, ಉದ್ಘಾಟಿಸುವುದಾಗಲಿ ಅಲ್ಲ. ಆದರೆ, ನಮ್ಮ ದೇಶದ ಪ್ರಧಾನಿ ದೇವಸ್ಥಾನ ನಿರ್ಮಿಸುವ ಕಾಯಕಕ್ಕೆ ಮಹತ್ವ ನೀಡುತ್ತಾರೆ, ರಾಮದೇಗುಲ ಉದ್ಘಾಟನೆಯ ದಿನ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ನೀಡುತ್ತಾರೆ. ಇದು ಸರಿಯೇ ಎಂದು ಯಾರೊಬ್ಬರೂ ಪ್ರಶ್ನಿಸಲಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಮಾಜ ಸುಧಾರಣೆ ನೆಪದಲ್ಲಿ ದೇಶದ ಸಂವಿಧಾನವನ್ನು ಬದಲಾಯಿಸುವ ಹುನ್ನಾರ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ ಎಂದು ಚಿಂತಕ ಮಂಗಳೂರು ವಿಜಯ್ ಎಚ್ಚರಿಸಿದರು.

ಪಟ್ಟಣದ ಗ್ರಾಮಭಾರತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ, ರೈತಸಂಘ ಮತ್ತು ವಿವಿಧ ಸಂಘಟನೆಗಳು ಆಯೋಜಿಸಿದ್ದ ಈ ಕಾಲದ ಕರೆ ಏನು, ವರ್ತಮಾನದಲ್ಲಿ ನಮ್ಮ ಮುಂದಿರುವ ಸವಾಲುಗಳಿಗೆ ಪರಿಹಾರವೇನು? ಮುಕ್ತ ಸಂವಾದದಲ್ಲಿ ಮಾತನಾಡಿ, ಸಂವಿಧಾನ ನಮಗೆ ಸ್ವಾಭಿಮಾನ ತಂದುಕೊಟ್ಟಿದೆ. ಅದನ್ನು ಉಳಿಸಬೇಕಾದುದು ನಮ್ಮೆಲ್ಲರ ಜವಾಬ್ದಾರಿ. ಶೋಷಣೆಗೊಳಗಾದ ಜನ ಗಟ್ಟಿಧ್ವನಿಯಲ್ಲಿ ಈ ಬಗ್ಗೆ ಮಾತನಾಡಬೇಕು ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮನುವಾದಿಗಳಿಗೆ ತಕ್ಕ ಉತ್ತರ ನೀಡಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಶೋಷಿತರ ಧ್ವನಿಗಾಗಲೀ ಅಥವಾ ಅಹಿಂದ ವರ್ಗದ ಪ್ರತಿಭಟನೆಗಾಗಲಿ ಫಲ ದೊರೆಯಲಾರದು. ನಮ್ಮದು ಸಾಯಿಸುವ ಸಂಸ್ಕೃತಿಯಲ್ಲ. ಸಾಯಿಸುವ ಗುಣವಿರುವವರನ್ನು ದೂರಮಾಡುವ ಹೋರಾಟವಾಗಿದೆ ಎಂದರು.

ಶೋಷಿತರು ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಸ್ವಾಭಿಮಾನದ ಬದುಕಿಗಾಗಿ ಕೋಮುಭಾವನೆ ಕೆರಳಿಸುವವರ ವಿರುದ್ಧ ಮತ ಚಲಾಯಿಸುವ ಗಟ್ಟಿ ನಿರ್ಧಾರ ಮಾಡುವ ಅಗತ್ಯವಿದೆ ಎಂದರು.

ಒಂದು ದೇಶದ ಪ್ರಧಾನಿ ಕೆಲಸ ದೇವಸ್ಥಾನ ಕಟ್ಟುವುದಾಗಲಿ, ಉದ್ಘಾಟಿಸುವುದಾಗಲಿ ಅಲ್ಲ. ಆದರೆ, ನಮ್ಮ ದೇಶದ ಪ್ರಧಾನಿ ದೇವಸ್ಥಾನ ನಿರ್ಮಿಸುವ ಕಾಯಕಕ್ಕೆ ಮಹತ್ವ ನೀಡುತ್ತಾರೆ, ರಾಮದೇಗುಲ ಉದ್ಘಾಟನೆಯ ದಿನ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ನೀಡುತ್ತಾರೆ. ಇದು ಸರಿಯೇ? ಎಂದು ಯಾರೊಬ್ಬರೂ ಪ್ರಶ್ನಿಸಲಿಲ್ಲ ಎಂದರು.

ಈಗ ರಾಷ್ಟ್ರದಲ್ಲಿ ಒಂದೇ ಬಾಯಿ ಮಾತನಾಡುತ್ತಿದೆ. ಉಳಿದ ಎಲ್ಲಾ ಬಾಯಿಗಳು ಬಂದ್ ಆಗಿವೆ. ಶೋಷಿತರು ಮೊದಲು ತಮ್ಮ ಹೋರಾಟದ ಪ್ರಕ್ರಿಯೆಯನ್ನೇ ಬದಲಿಸಿಕೊಳ್ಳಬೇಕು. ಕೂಗಾಟ- ಹೋರಾಟಗಳ ಬದಲು ದಾಖಲೆ ಸಮೇತ ಮೊದಲು ಚರ್ಚೆ ಮಾಡಬೇಕು ಎಂದರು.

ದಲಿತ ಮುಖವಾಡ ಧರಿಸಿ ಚಿಂತನೆ ಹೊತ್ತು ಬೆಳೆದವರು ಆನಂತರ ದಿನಗಳಲ್ಲಿ ಸ್ವಾರ್ಥ ಮತ್ತು ಲಾಭಕ್ಕಾಗಿ ಚಳವಳಿ ತ್ಯಜಿಸಿದರು. ಆದ್ದರಿಂದ ಲಾಭ ಪಡೆಯಲು ಬರುವವರಿಗೆ ಮತ್ತೆ ಅವಕಾಶ ಕಲ್ಪಿಸಬೇಡಿ. ಅವರನ್ನು ದೂರವಿಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ದಲಿತ ಮುಖಂಡ ಬಸ್ತಿ ರಂಗಪ್ಪ ಮಾತನಾಡಿದರು. ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ಕೆ.ಎಂ.ವಾಸು, ಹೊಸಹೊಳಲು ಪುಟ್ಟಸ್ವಾಮಿ, ವೆಂಕಟೇಶ್, ಶಿವಕುಮಾರ್, ಮಾಂಬಳ್ಳಿ ಜಯರಾಮು, ಬಂಡಿಹೊಳೆ ರಮೇಶ್, ಕೃಷ್ಣ, ಹೊಸಹೊಳಲು ಶಿವಣ್ಣ, ವೀರಭದ್ರಯ್ಯ, ಮೊಹಮದ್‌ಅಜರುದ್ದೀನ್, ಮುದುಗೆರೆ ಮಹೇಂದ್ರ, ಮಂಜುನಾಥ್ ಸೇರಿದಂತೆ ಹಲವರು ಇದ್ದರು.