ಕನ್ನಡಪ್ರಭ ವಾರ್ತೆ ವಿಜಯಪುರ ಅತಿವೃಷ್ಠಿ, ಅನಾವೃಷ್ಠಿಗಳ ಮಧ್ಯೆಯೂ ಸಹ ಜಿಲ್ಲೆಯ ಜನತೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದಲೇ ಆಚರಿಸುತ್ತಿದ್ಧಾರೆ. ನಿತ್ಯ ಬೆಳಗ್ಗೆ ಹಾಗೂ ಸಂಜೆ ಗೃಹಿಣಿಯರೆಲ್ಲ ಮನೆಗಳ ಮುಂದೆ ಸಾಲುಸಾಲು ದೀಪಗಳ ಅಲಂಕಾರ ಹಾಗೂ ಅಂಗಡಿಗಳ ಮೇಲೆಲ್ಲ ಕಲರ್‌ಫುಲ್ ಬೆಳಕಿನ ಚಿತ್ತಾರದ ಲೈಟಿಂಗ್‌ಗಳ ಮೂಲಕ ಅಲಂಕರಿಸಿ ಹಬ್ಬದ ಆಚರಣೆಗೆ ಕಳೆ ನೀಡುತ್ತಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಅತಿವೃಷ್ಠಿ, ಅನಾವೃಷ್ಠಿಗಳ ಮಧ್ಯೆಯೂ ಸಹ ಜಿಲ್ಲೆಯ ಜನತೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದಲೇ ಆಚರಿಸುತ್ತಿದ್ಧಾರೆ. ನಿತ್ಯ ಬೆಳಗ್ಗೆ ಹಾಗೂ ಸಂಜೆ ಗೃಹಿಣಿಯರೆಲ್ಲ ಮನೆಗಳ ಮುಂದೆ ಸಾಲುಸಾಲು ದೀಪಗಳ ಅಲಂಕಾರ ಹಾಗೂ ಅಂಗಡಿಗಳ ಮೇಲೆಲ್ಲ ಕಲರ್‌ಫುಲ್ ಬೆಳಕಿನ ಚಿತ್ತಾರದ ಲೈಟಿಂಗ್‌ಗಳ ಮೂಲಕ ಅಲಂಕರಿಸಿ ಹಬ್ಬದ ಆಚರಣೆಗೆ ಕಳೆ ನೀಡುತ್ತಿದ್ದಾರೆ.

ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಅದರಂತೆ, ನಗರದಲ್ಲೂ ವರ್ಷದ ದೊಡ್ಡ ಹಬ್ಬವಾದ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಬ್ಬದ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆದಿವೆ. ಕಳೆದ ಮೂರು ದಿನಗಳಿಂದ ಹೂ, ಹಣ್ಣು, ಆಕಾಶ ಬುಟ್ಟಿ, ವಿಶೇಷ ದೀಪಾಲಂಕಾರಿಕ ವಸ್ತುಗಳನ್ನು, ಎಲೆಕ್ಟ್ರಾನಿಕ್‌ ವಿದ್ಯುದ್ದೀಪಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಮಂಗಳವಾರ ಅಮವಾಸ್ಯೆ ಹಿನ್ನಲೆಯಲ್ಲಿ ಸಂಜೆ ಮಾರುಕಟ್ಟೆಗಳಲ್ಲಿ ಅಂಗಡಿಗಳಲ್ಲಿ ಲಕ್ಷ್ಮೀದೇವಿಗೆ ಪೂಜೆ ಪುನಸ್ಕಾರಗಳು ನಡೆದವು.

ಆಕಾಶಬುಟ್ಟಿ ಖರೀದಿ ಜೋರು

ನಗರದ ಲಾಲ್‌ಬಹದ್ದೂರ್‌ ಶಾಸ್ತ್ರೀ ಮಾರುಕಟ್ಟೆ, ಎಸ್‌ಎಸ್‌ ರಸ್ತೆ, ಸರಾಫ್ ಬಜಾರ್‌ ಏರಿಯಾ ಸೇರಿದಂತೆ ವಿವಿಧೆಡೆ ಆಕಾಶಬುಟ್ಟಿ, ಮಾಳಾ ಸೇರಿದಂತೆ ಅಲಂಕಾರಿಕ ಲೈಟಿಂಗ್ಸ್ ವಸ್ತುಗಳು ಹಾಗೂ ವಿವಿಧ ಬೆಳಕು ಚೆಲ್ಲುವ ವಿಶೇಷ ಬಲ್ಬ್‌ಗಳ ಖರೀದಿ ಜೋರಾಗಿತ್ತು. ಅದರಲ್ಲೂ ₹ 300 ರಿಂದ ಒಂದು ಸಾವಿರ ಬೆಲೆಗೆ ಆಕಾಶ ಬುಟ್ಟಿಗಳು ಮಾರಾಟವಾಗುತ್ತಿದೆ. ಮನೆಗಳ ಮುಂದೆ, ಅಂಗಡಿಗಳು ಸೇರಿದಂತೆ ಎಲ್ಲೆಡೆ ಬೆಳಕು ಚೆಲ್ಲಲು ಬೇಕಾಗಿರುವ ದೀಪಗಳು (ಹಣತೆಗಳು) ₹ 50 ರಿಂದ 200 ಕ್ಕೆ ಒಂದು ಡಜನ್‌ ನಂತೆ ಮಾರಾಟವಾಗುತ್ತಿವೆ.

ದೀಪಾವಳಿ ಮಾರುಕಟ್ಟೆಯಲ್ಲಿ ಅಲಂಕಾರಿಕ ದೀಪಗಳೀಗೆ ಎಷ್ಟು ಬೇಡಿಕೆಯಿದೆಯೋ ಅಷ್ಟೆ ಬೇಡಿಕೆ ತರಹೇವಾರು ಹೂವುಗಳಿಗೂ ಇದೆ. ಯಾಕಂದ್ರೆ ವರ್ಷಪೂರ್ತಿ ವ್ಯಾಪಾರ ವಹಿವಾಟುಗಳನ್ನು ಮಾಡುವವರು ತಮ್ಮ ತಮ್ಮ ಅಂಗಡಿಗಳಿಗೆ ಹಾಗೂ ವಾಹನಗಳಿಗೆ ಹೂವುಗಳಿಂದಲೇ ಅಲಂಕಾರ ಮಾಡುವುದರಿಂದ ಹೂವಿಗೆ ಇನ್ನಿಲ್ಲದ ಬೇಡಿಕೆ. ಚಂಡು ಹೂ, ಸೇವಂತಿ ಹೂ, ಗುಲಾಬಿ ಹೂ, ಸುಗಂಧರಾಜ ಹೂ ಸೇರಿದಂತೆ ವಿವಿಧ ಬಗೆಯ ಹೂವುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇದರಲ್ಲಿ ₹ 100 ರಿಂದ 200 ಕ್ಕೆ ಪ್ರತಿ ಕೇಜಿಗೆ ಹೂ ಮಾರಾಟವಾಗುತ್ತಿದೆ.ಹಸಿರು ಪಟಾಕಿಗೆ ಭಾರೀ ಬೇಡಿಕೆ

ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನೇ ಮಾರಾಟ ಮಾಡಬೇಕು ಹಾಗೂ ಜನರು ಸಹ ಅವುಗಳನ್ನೇ ಖರೀದಿಸಬೇಕು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಅವಘಡ ಸಂಭವಿಸಬಾರರು ಎಂದು ಪಟಾಕಿ ಅಂಗಡಿಗಳಿಗೆ ನಗರದ ಡಾ.ಅಂಬೇಡ್ಕರ ಕ್ರೀಡಾಂಗಣದ ಹೊರಭಾಗದಲ್ಲಿರುವ ಖಾಲಿ ಜಾಗೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಲ್ಲಿರುವ ಹತ್ತಾರು ಅಂಗಡಿಗಳಲ್ಲಿ ಗ್ರೀನ್‌ ಪಟಾಕಿಗಳದ್ದೇ ಸದ್ದು. ನಿತ್ಯ ನಗರದಲ್ಲಿ ರಾತ್ರಿ 10ಗಂಟೆವರೆಗೂ ಎಲ್ಲೆಂದರಲ್ಲಿ ಅಂಗಡಿಗಳ ಮುಂದೆ ಪಟಾಕಿ ಮಾರಾಟ, ಬೆಳಕಿನ ಚಿತ್ತಾರಗಳೇ ಕಂಡುಬರುತ್ತಿವೆ. ಇದರೊಟ್ಟಿಗೆ ಜೋಡಿ ಬಾಳೆ ಗಿಡಗಳು ₹ 100 ರಿಂದ 200 ವರೆಗೆ ಮಾರಾಟವಾದರೆ, ಜೋಡಿ ಕಬ್ಬುಗಳಿಗೆ ₹ 50ರಿಂದ 100ರವರೆಗೆ ಮಾರಾಟ ಮಾಡಲಾಗುತ್ತಿದೆ. ಹಣ್ಣು ಹಂಪಲಿನ ದರ ಗಗನಕ್ಕೇರಿದ್ದು, ಯಾವುದೇ ಹಣ್ಣು ಖರೀದಿಸಿದರೂ ಕೇಜಿಗೆ ₹ 100 ಮೇಲೆಯೇ ಇರುವುದು ಕಂಡು ಬಂದಿತು.