ಹೊಟೇಲ್‌ಗಳಲ್ಲಿ ಟಿಪ್ಸ್‌ ಪಾವತಿಗೂ ಬಂತು ಪ್ರತ್ಯೇಕ ಆ್ಯಪ್‌!

| Published : Jun 03 2024, 12:30 AM IST

ಹೊಟೇಲ್‌ಗಳಲ್ಲಿ ಟಿಪ್ಸ್‌ ಪಾವತಿಗೂ ಬಂತು ಪ್ರತ್ಯೇಕ ಆ್ಯಪ್‌!
Share this Article
  • FB
  • TW
  • Linkdin
  • Email

ಸಾರಾಂಶ

ಹೊಟೇಲ್‌ಗಳಲ್ಲಿ ವೇಟರ್‌ಗಳಿಗೆ ಟಿಪ್ಸ್‌ ನೀಡಲು ನೂತನವಾಗಿ ಟಿಐಪಿಪಿ ಟಿಪ್ಸ್‌ಆ್ಯಪ್‌ಅನ್ನು ರೂಪಿಸಲಾಗಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಡಿಜಿಟಲ್‌ ಪಾವತಿಯ ಈ ಯುಗದಲ್ಲಿ ಎಲ್ಲವೂ ನಗದು ರಹಿತ ಮೊಬೈಲ್‌ ಮೂಲಕ ನೇರವಾಗಿ ಪಾವತಿಯಾಗುತ್ತದೆ. ಮಾರುಕಟ್ಟೆ ಸೇರಿ ಎಲ್ಲ ಕಡೆಗಳಲ್ಲೂ ಡಿಜಿಟಲ್‌ ಪಾವತಿಗೆ ಅವಕಾಶವಿದೆ. ಇಂತಹ ಸಂದರ್ಭದಲ್ಲಿ ಹೊಟೇಲ್‌ನಲ್ಲಿ ನಗದು ರಹಿತ ಟಿಪ್ಸ್‌ ಪಾವತಿ ಹೇಗೆ ಎಂಬ ಚಿಂತೆ ಸಹಜ. ಅದಕ್ಕೂ ಈಗ ಪ್ರತ್ಯೇಕ ಆ್ಯಪ್‌ ಬಂದಿದೆ. ಟಿಪ್‌ (ಟಿಐಪಿಪಿ) ಹೆಸರಿನ ಆ್ಯಪ್‌ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡರೆ ಸಾಕು, ಯಾವುದೇ ಹೊಟೇಲ್‌ಗಳಿಗೆ ಹೋದರೂ ಟಿಪ್ಸ್‌ ಪಾವತಿಸುವುದು ಸುಲಭ.

ಟಿಪ್ಸ್‌ ಆ್ಯಪ್‌ಅನ್ನು ಮಂಗಳೂರಿನ ಸೋಹನ್‌ ರೈ ಎಂಬ ಯುವ ಟೆಕ್ಕಿ ಅಭಿವೃದ್ಧಿಪಡಿಸಿದ್ದಾರೆ. ಇದು ಕೇವಲ ಹೊಟೇಲ್‌ನ ವೈಟರ್‌ಗಳಿಗೆ ಮಾತ್ರವಲ್ಲ, ಪೈಂಟರ್ಸ್‌, ಸಲೂನ್‌, ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ತುಂಬಿಸುವವರಿಗೂ ಟಿಪ್ಸ್‌ ನೀಡಲು ಸಹಕಾರಿಯಾಗಿದೆ.

ಟಿಪ್ಸ್ ಆ್ಯಪ್‌ ಬಳಕೆ ಹೇಗೆ?:

ಹೊಟೇಲ್‌ಗಳಲ್ಲಿ ಆಹಾರ ಸೇವನೆ ಬಳಿಕ ಬಿಲ್‌ಅನ್ನು ಡಿಜಿಟಲ್‌ ಪೇ ಮಾಡುತ್ತೇವೆ. ಆಗಲೇ ವೈಟರ್‌ಗೂ ಟಿಪ್ಸ್‌ ನೀಡಬಹುದು. ಅದಕ್ಕೆ ಗ್ರಾಹಕರು ಟಿಪ್‌ ಹೆಸರಿನ ಆ್ಯಪ್‌ನ್ನು ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಬೇಕು. ಹೊಟೇಲ್‌ಗಳಲ್ಲಿ ವೇಟರ್‌ ತನ್ನ ಕ್ಯೂಆರ್‌ ಕೋಡ್‌ ಇರುವ ಫಲಕವನ್ನು ಟಿಶ್ಯೂ ಹೋಲ್ಡರ್‌ ಬಾಕ್ಸ್‌ಗಳಲ್ಲಿ ಬಿಲ್‌ ಜತೆ ಇರಿಸುತ್ತಾರೆ. ಆ ಕ್ಯೂ ಆರ್‌ ಕೋಡ್‌ ವೈಟರ್‌ನ ಬ್ಯಾಂಕ್ ಖಾತೆಗೆ ಲಿಂಕ್‌ ಆಗಿರುತ್ತದೆ. ಹೊಟೇಲ್‌ನ ಬಿಲ್‌ ಪ್ರತ್ಯೇಕವಾಗಿ ಪಾವತಿಸಿದ ಬಳಿಕ ಬೇಕಾದರೆ ವೇಟರ್‌ಗೂ ಟಿಪ್ಸ್‌ ಪಾವತಿಸಬಹುದು. ಅದಕ್ಕೆ ಪ್ರತ್ಯೇಕ ಕ್ಯೂಆರ್‌ ಕೋಡ್‌ಅನ್ನು ಸ್ಕ್ಯಾನ್‌ ಮಾಡುವ ಮೂಲಕ ತನಗೆ ಇಷ್ಟಬಂದ ಮೊತ್ತವನ್ನು ಟಿಪ್ಸ್‌ ರೂಪದಲ್ಲಿ ಡಿಜಿಟಲ್‌ ಪಾವತಿ ಮಾಡಬಹುದು.

ಈ ರೀತಿ ಟಿಪ್ಸ್‌ ಪಾವತಿಸಿದಾಗ ಗ್ರಾಹಕರಿಗೆ ಪಾಯಿಂಟ್ಸ್‌ ಲಭ್ಯವಾದರೆ, ಹೊಟೇಲ್‌ ಮಾಲೀಕರಿಗೆ ಒಳ್ಳೆಯ ರಿವ್ಯೂ ಸಿಗುವಂತೆ ಮಾಡಲಾಗಿದೆ. ಹೀಗಾಗಿ ಇದು ಹೊಟೇಲ್‌ ಮಾಲೀಕರು, ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಉತ್ತಮ ಬಾಂಧವ್ಯ ಸೇತುವಾಗಿ ಈ ಆ್ಯಪ್‌ಅನ್ನು ರೂಪಿಸಲಾಗಿದೆ.

ಟಿಪ್ಸ್‌ ಆ್ಯಪ್‌ಅನ್ನು ಮಂಗಳೂರಿನ ಬಾರ್‌ವೊಂದರಲ್ಲಿ ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತಂದಿದ್ದು, ಅದು ಯಶಸ್ವಿಯಾಗಿದೆ. ಈಗ ಈ ಆ್ಯಪ್‌ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸೋಹನ್‌ ರೈ ಮುಂದಾಗಿದ್ದಾರೆ. ಟಿಪ್ಸ್‌ ಆ್ಯಪ್‌ನಲ್ಲಿ ಏಕಕಾಲಕ್ಕೆ ಹೊಟೇಲ್‌ನಲ್ಲಿ ಇರುವ ಎಲ್ಲ ವೇಟರ್‌ಗಳ ಖಾತೆಯನ್ನು ಕ್ಯೂಆರ್‌ ಕೋಡ್‌ಗೆ ಲಿಂಕ್‌ ಕಲ್ಪಿಸಲು ಉದ್ದೇಶಿಸಲಾಗಿದೆ. ಆಗ ಗ್ರಾಹಕರು ತಮ್ಮ ವೇಟರ್ ಹೆಸರಿನ ಮುಂದೆ ಸ್ಕ್ಯಾನ್‌ ಮಾಡಿ ಟಿಪ್ಸ್‌ ಪಾವತಿಸಬಹುದು.

ಟಿಪ್ಸ್‌ ಆ್ಯಪ್‌ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆ್ಯಪ್‌ನ ಹಕ್ಕನ್ನು ಮಾರಾಟ ಮಾಡುವಂತೆ ವಿದೇಶಗಳಿಂದಲೂ ಬೇಡಿಕೆ ಬಂದಿದೆ. ವೇಟರ್‌ ಮಾತ್ರವಲ್ಲ ಟಿಪ್ಸ್‌ ಪಡೆಯುವ ಇತರೆ ಕೆಲಸಗಾರರಿಗೂ ಇದರಿಂದ ಪ್ರಯೋಜನವಾಗಬೇಕು, ಅವರಿಗೂ ಒಂದಷ್ಟು ಆದಾಯ ಸಿಗಬೇಕು ಎಂಬ ಉದ್ದೇಶದಿಂದ ಈ ಆ್ಯಪ್‌ ರೂಪಿಸಲಾಗಿದೆ.

-ಸೋಹನ್‌ ರೈ, ಮಂಗಳೂರು.