ಉಪ್ಪಿನಂಗಡಿ ಅಂಚೆ ಕಚೇರಿಯಲ್ಲಿ ಗ್ರಾಹಕ ಸ್ನೇಹಿ ಸೇವೆ ಲಭಿಸುವಂತಾಗಲು ಅಗತ್ಯ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿದೆ.
ಉಲುಕ್ ಉಪ್ಪಿನಂಗಡಿ: ಎಲ್ಲವೂ ಇದ್ದು ಏನೂ ಇಲ್ಲದಂತಿರುವ ಉಪ್ಪಿನಂಗಡಿ ಅಂಚೆ ಕಚೇರಿಯಲ್ಲಿ ಗ್ರಾಹಕ ಸ್ನೇಹಿ ಸೇವೆ ಲಭಿಸುವಂತಾಗಲು ಅಗತ್ಯ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿದೆ.
ಪ್ರಸಕ್ತ ಬಹುಸ್ತರದ ಸೇವಾ ಸೌಲಭ್ಯವನ್ನು ಹೊಂದಿರುವ ಐಪಿಪಿಬಿ ಖಾತೆಯನ್ನು ಬಹುತೇಕ ವಲಸೆ ಕಾರ್ಮಿಕರು ಹೊಂದಿದ್ದು, ಅವರ ದುಡಿಮೆಯ ಹಣವನ್ನು ಈ ಖಾತೆಯಲ್ಲೇ ವ್ಯವಹರಿಸುತ್ತಿರುತ್ತಾರೆ. ಆಂಡ್ರಾಯ್ಡ್ ಮೊಬೈಲ್ ಫೋನ್ ಮೂಲಕ ನಿರ್ವಹಿಸುವ ಈ ಖಾತೆಯನ್ನು ಅಂತಹ ಫೋನನ್ನು ಹೊಂದಿಲ್ಲದ ಮಂದಿ ಸದ್ರಿ ಖಾತೆಯ ನಿರ್ವಹಣೆಗೆ ಅಂಚೆ ಇಲಾಖೆಗೆ ಆಗಮಿಸುತ್ತಾರೆ. ಆದರೆ ಐಪಿಪಿಬಿ ಖಾತೆಯನ್ನು ನಿರ್ವಹಿಸುವ ಐಡಿಯನ್ನು ಪ್ರಸಕ್ತ ಯಾವುದೇ ಸಿಬ್ಬಂದಿಗೆ ನೀಡಿಲ್ಲದ ಕಾರಣ, ಖಾತೆಯನ್ನು ವ್ಯವಹರಿಸುವ ಐಡಿಯನ್ನು ಹೊಂದಿರುವ ಪೋಸ್ಟ್ ಮ್ಯಾನ್‌ಗಳನ್ನೇ ಅವಲಂಬಿಸುವ ಸ್ಥಿತಿ ಈ ಅಂಚೆ ಕಚೇರಿಯಲ್ಲಿದೆ. ಪೋಸ್ಟ್ ಮ್ಯಾನ್ ಅಂಚೆ ಪತ್ರಗಳ ವಿತರಣೆಗೆ ಹೋದ ಸಂದರ್ಭದಲ್ಲಿ ಆಗಮಿಸುವ ಗ್ರಾಹಕ, ಸೇವೆ ದೊರೆಯದೆ ಅತಂತ್ರ ಸ್ಥಿತಿಗೆ ಸಿಲುಕುವಂತಾಗಿದೆ. ಇಲ್ಲಿನ ಸಿಬ್ಬಂದಿಗೆ ಖಾತೆಯನ್ನು ನಿರ್ವಹಿಸುವ ಐಡಿಯನ್ನು ಒದಗಿಸಿ ಸೇವಾವಧಿಯುದ್ದಕ್ಕೂ ಖಾತೆಯನ್ನು ನಿರ್ವಹಿಸುವ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಅನಿವಾರ್ಯತೆ ಇದೆ.ವಿಮಾ ಸೌಲಭ್ಯವಿದೆ; ಒದಗಿಸುವವರಿಲ್ಲ!ಪ್ರಸಕ್ತ ಅಂಚೆ ಕಚೇರಿಯ ಐಪಿಪಿಬಿ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ೧೫ ಲಕ್ಷ ವರೆಗಿನ ಅಪಘಾತ ವಿಮೆ, ೧೫ ಲಕ್ಷ ವರೆಗಿನ ಆರೋಗ್ಯ ವಿಮಾ ಸೌಲಭ್ಯವಿದ್ದು, ಕನಿಷ್ಠ ಪ್ರೀಮಿಯಂ ಮೊತ್ತ ಪಾವತಿಸಿ ಗರಿಷ್ಠ ವಿಮಾ ಭದ್ರತೆಯನ್ನು ಪಡೆಯುವ ಸೌಲಭ್ಯವನ್ನು ಹೊಂದಿರುವ ಈ ಯೋಜನೆಯನ್ನು ಬಯಸಿ ಇಲ್ಲಿನ ಅಂಚೆ ಕಚೇರಿಗೆ ಬಂದರೆ ಈ ಸೇವೆಯನ್ನು ಒದಗಿಸುವ ಸಿಬ್ಬಂದಿಯೇ ಇಲ್ಲಿ ಇಲ್ಲ ಎಂದು ತಿಳಿಸಲಾಗುತ್ತಿದೆ.ಸೇವೆ ಬೇಕೆಂದಾದರೆ ದೂರದ ರಾಮಕುಂಜದಲ್ಲಿ ಕಾರ್ಯನಿರ್ವಹಿಸುವ ಪೋಸ್ಟ್ ಮ್ಯಾನ್ ಇಲ್ಲಿಗೆ ಬಂದು ಸೇವೆ ಸಲ್ಲಿಸಬೇಕು ಎನ್ನುತ್ತಾರೆ. ಅವರ ಆಗಮನ ಮತ್ತು ನಿರ್ಗಮನ ನಿಯಮಿತ ಸಮಯವನ್ನು ಹೊಂದಿರದ ಕಾರಣ ಈ ವಿಮಾ ಸೌಲಭ್ಯವನ್ನು ಪಡೆಯಬೇಕಾದರೆ ಸಾರ್ವಜನಿಕರು ಅನಗತ್ಯ ಸಮಯ ಹರಣಕ್ಕೆ ಸಿಲುಕಬೇಕಾಗಿದೆ.ಆಧಾರ್ ಸೇವೆಯೂ ಇಲ್ಲ:ದಿನಂಪ್ರತಿ ೪೦ಕ್ಕೂ ಹೆಚ್ಚು ಜನ ಆಧಾರ್ ಸೇವೆ ಪಡೆಯುತ್ತಿದ್ದ ಇಲ್ಲಿನ ಅಂಚೆ ಕಚೇರಿಯಲ್ಲಿ ಸಿಬ್ಬಂದಿಯ ವರ್ಗಾವಣೆ ಕಾರಣದಿಂದ ೨೦೨೪ರ ಜೂನ್‌ನಿಂದ ಈ ಸೇವೆ ಸ್ಥಗಿತಗೊಂಡಿತ್ತು. ಇದರಿಂದಾಗಿ ಸಾರ್ವಜನಿಕರು ಪುತ್ತೂರಿಗೆ ಅಲೆದಾಡಬೇಕಾಗಿದೆ.ಮೆಸ್ಕಾಂ ಬಿಲ್, ಪ್ರಿಮೀಯಂ ಪಾವತಿ ಸೇವೆಯೂ ಇಲ್ಲ:ಗ್ರಾಮೀಣ ಭಾಗದ ವಿದ್ಯುತ್ ಬಳಕೆದಾರರಿಗೆ ಅನುಕೂಲವಾಗಿದ್ದ ಮೆಸ್ಕಾಂ ಬಿಲ್ ಪಾವತಿ ವ್ಯವಸ್ಥೆ, ಎಲ್‌ಐಸಿ ಪ್ರೀಮಿಯಂ ಪಾವತಿ ವ್ಯವಸ್ಥೆಯು ಕಳೆದ ಕೆಲ ತಿಂಗಳಿಂದ ಸ್ಥಗಿತಗೊಂಡಿದ್ದು, ಯಾವುದು ಜನರಿಗೆ ಅಗತ್ಯವಾಗಿದೆಯೋ ಅದೆಲ್ಲವೂ ಲಭಿಸದಂತಹ ಸ್ಥಿತಿ ಪ್ರಸಕ್ತ ಅಂಚೆ ಕಚೇರಿಯಲ್ಲಿದೆ.ಐಡಿ ಹೊಂದಿದ್ದ ಕೆಲ ಸಿಬ್ಬಂದಿಯ ವರ್ಗಾವಣೆಯಿಂದಾಗಿ ಸಮಸ್ಯೆ ಕಾಡಿದೆ. ಐಪಿಪಿಬಿ ಗ್ರಾಹಕರಿಗೆ ಉಂಟಾಗುತ್ತಿರುವ ಅನಾನುಕೂಲತೆಯನ್ನು ನಿವಾರಿಸಲು ಪ್ರಸಕ್ತ ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಐಡಿ ಒದಗಿಸಲು ವಿನಂತಿಸಲಾಗಿದೆ. ಆಧಾರ್ ಸಂಬಂಧಿಸಿ ಅಧಿಕಾರಿಗಳು ಪರಿಶೀಲನೆ ಮಾಡಿ ಹೋಗಿದ್ದಾರೆ. ಶೀಘ್ರದಲ್ಲೇ ಸೇವೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಆರೋಗ್ಯ ಮತ್ತು ಅಪಘಾತ ವಿಮಾ ಸೌಲಭ್ಯವನ್ನು ರಾಮಕುಂಜದ ಪೋಸ್ಟ್ ಮ್ಯಾನ್ ಪ್ರತಿ ದಿನ ಮಧ್ಯಾಹ್ನದ ನಂತರ ಬಂದು ಒದಗಿಸುತ್ತಿದ್ದಾರೆ.ವಿಶ್ವನಾಥ್, ಉಪ್ಪಿನಂಗಡಿಯ ಪೋಸ್ಟ್ ಮಾಸ್ಟರ್--------------
ದೇಶದ ಜನತೆಗೆ ಆರೋಗ್ಯ ವಿಮಾ ಯೋಜನೆ ಸಹಿತ ಹಲವಾರು ಯೋಜನೆಗಳು ಅಂಚೆ ಕಚೇರಿಯಲ್ಲಿದ್ದರೂ ಅದನ್ನು ಒದಗಿಸುವ ಸಿಬ್ಬಂದಿಗಳಿಲ್ಲದೆ ಸರ್ಕಾರದ ಯೋಜನೆಗಳು ಜನರನ್ನು ತಲುಪದಂತಾಗಿದೆ. ಈ ನಿಟ್ಟಿನಲ್ಲಿ ಲೋಪವನ್ನು ಸರಿಪಡಿಸಿ ಉಪ್ಪಿನಂಗಡಿ ಅಂಚೆ ಕಚೇರಿಯಲ್ಲಿ ಸರಿಯಾದ ಸೇವೆ ದೊರೆಯುವಂತಾಗಲಿ.ಝಕಾರಿಯ ಕೊಡಿಪ್ಪಾಡಿ, ಅಂಚೆ ಇಲಾಖೆಯ ಗ್ರಾಹಕ