ಸಾರಾಂಶ
ಬೆಂಗಳೂರು : ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಈ ಪ್ರದೇಶದ ನದಿಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಭಾರಿ ಮಳೆಗೆ ಕೊಡಗಿನ ತ್ರಿವೇಣಿ ಸಂಗಮ, ಕುಕ್ಕೆ ಸುಬ್ರಮಣ್ಯ, ನಂಜನಗೂಡಿನ ಸ್ನಾನಘಟ್ಟಗಳು ಜಲಾವೃತಗೊಂಡಿವೆ. ಹಲವೆಡೆ ಭೂಕುಸಿತ ಮುಂದುವರಿದ್ದು, ವಾಹನ ಸಂಚಾರ ವ್ಯತ್ಯಯಗೊಂಡಿದೆ. ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ 10, ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ ತಾಲೂಕುಗಳು, ಶಿವಮೊಗ್ಗದ ಹೊಸನಗರ ತಾಲೂಕಿನ ಶಾಲೆಗಳು, ಕೊಡಗಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.
ಭಾರಿ ಮಳೆಗೆ ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ, ನೂತನ ಉದ್ಯಾನವನಗಳು ಜಲಾವೃತವಾಗಿವೆ. ಭಾಗಮಂಡಲ-ಮಡಿಕೇರಿ, ನಾಪೋಕ್ಲು ರಸ್ತೆ ಮೇಲೆ ಎರಡೂವರೆ ಅಡಿಯಷ್ಟು ನೀರು ಹರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗಿನ ಶಾಲಾ-ಪದವಿ ಪೂರ್ವ ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ಮಳೆಯಿಂದಾಗಿ ಕುಕ್ಕೆ ಸುಬ್ರಮಣ್ಯದ ಸ್ನಾನಘಟ್ಟ ಭಾಗಶ: ಮುಳುಗಡೆಯಾಗಿದ್ದು, ತೀರ್ಥಸ್ನಾನಕ್ಕೆ ತೊಂದರೆಯಾಗಿದೆ. ಶೃಂಗೇರಿಯ ವಿದ್ಯಾರಣ್ಯಪುರ, ಭಾರತೀ ಬೀದಿಯಲ್ಲಿ ಪ್ರವಾಹ ಮುಂದುವರಿದಿದೆ.
ಕಬಿನಿಯಿಂದ 45 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಮೈಸೂರು ಜಿಲ್ಲೆ ನಂಜನಗೂಡು ಶ್ರೀನಂಜುಂಡೇಶ್ವರ ಸ್ವಾಮಿ ದೇವಾಲಯದ ಸಮೀಪದ ಸ್ನಾನಘಟ್ಟ, 16 ಕಾಲು ಮಂಟಪ ಮತ್ತು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಪಟ್ಟಣದ ಹಳ್ಳದಕೇರಿ ಬಡಾವಣೆಯಲ್ಲಿ ನಾಲ್ಕು ಮನೆಗಳು ಜಲಾವೃತಗೊಂಡಿವೆ. ಉಡುಪಿ ಜಿಲ್ಲೆಯ ಪಡುಬಿದ್ರಿಯ ನಡಿಪಟ್ಣ ಪ್ರದೇಶದಲ್ಲಿ ಕಡಲ್ಕೊರೆತ ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ಜಿಲ್ಲೆಯ ಹೊಸನಗರ ತಾಲೂಕಿನ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಗುಡ್ಡ ಕುಸಿತದ ಪ್ರಕರಣಗಳು ಮುಂದುವರಿದಿವೆ. ಮುಂಜಾಗ್ರತಾ ಕ್ರಮವಾಗಿ ಮುಂಡಗೋಡ, ಹಳಿಯಾಳ ಹೊರತಾಗಿ ಉತ್ತರ ಕನ್ನಡ ಜಿಲ್ಲೆಯ ಉಳಿದ ಎಲ್ಲಾ ತಾಲೂಕುಗಳ ಶಾಲಾ- ಕಾಲೇಜಿಗೆ ಗುರುವಾರ ರಜೆ ಘೋಷಿಸಲಾಗಿದೆ. ಹೊನ್ನಾವರ ಹಾಗೂ ಕಾರವಾರದ ಕಾಳಜಿ ಕೇಂದ್ರಗಳಲ್ಲಿ 1005 ಜನರಿಗೆ ಆಶ್ರಯ ಕಲ್ಪಿಸಲಾಗಿದೆ.
ಮಳೆಗೆ ಮರಗಳು ಉರುಳಿ ಬಿದ್ದಿದ್ದು, ಕೊಡಗಿನಲ್ಲಿ 11, ಚಿಕ್ಕಮಗಳೂರು ಜಿಲ್ಲೆಯಲ್ಲಿ 18, ಉಡುಪಿ ಜಿಲ್ಲೆಯಲ್ಲಿ 14, ಹಾವೇರಿ ಜಿಲ್ಲೆಯಲ್ಲಿ 3 ಮನೆಗಳಿಗೆ ಹಾನಿ ಸಂಭವಿಸಿದೆ. ಅಪಾರ ಪ್ರಮಾಣದ ಬೆಳೆಗಳು ಹಾನಿಗೀಡಾಗಿವೆ.
ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ 5.5 ಟಿಎಂಸಿ ನೀರು: ತುಂಗಭದ್ರಾ ನದಿ ಉಕ್ಕಿ ಹರಿದ ಪರಿಣಾಮ ದಾವಣಗೆರೆ ಜಿಲ್ಲೆ ಮಲೇಬೆನ್ನೂರು ಸಮೀಪ ಉಕ್ಕಡಗಾತ್ರಿ ಮತ್ತು ಫತೇಪುರ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಉಕ್ಕಡಗಾತ್ರಿ ಕರಿಬಸವೇಶ್ವರ ದೇವಾಲಯದ ಸ್ನಾನಘಟ್ಟ ಮತ್ತು ಅಂಗಡಿಗಳು ಮುಳುಗಡೆಯಾಗಿವೆ. ತುಂಗಭದ್ರಾ ಜಲಾಶಯಕ್ಕೆ ಬುಧವಾರ ಒಂದೇ ದಿನ 5.5 ಟಿಎಂಸಿಯಷ್ಟು ನೀರು ಹರಿದು ಬಂದಿದೆ. ಕೆಆರ್‌ಎಸ್ ಗೆ ಒಂದೇ ದಿನ 3 ಅಡಿಗಳಷ್ಟು ನೀರು ಹರಿದು ಬಂದಿದೆ. ಕೃಷ್ಣಾ ನದಿಯ ಒಳಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಆಲಮಟ್ಟಿಯಿಂದ 65 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಗುಡ್ಡ ಕುಸಿತ, ಶಿರಾಡಿ ಘಾಟ್ ಸೇರಿ ಕೆಲವೆಡೆ ಸಂಚಾರ ಬಂದ್: ಮಳೆ ಹಿನ್ನೆಲೆಯಲ್ಲಿ ಗುಡ್ಡ ಕುಸಿತಗಳು ಮುಂದುವರಿದಿವೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಸಂಕಲಾಪುರ ಮಠದ ಸಂಪರ್ಕ ಸೇತುವೆ ಎತ್ತಿನಹೊಳೆಯಲ್ಲಿ ಪ್ರವಾಹ ಬಂದಿದೆ. ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡ ತಪ್ಪಲೆ, ಹೆಗ್ಗದ್ದೆ ಸೇರಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಶಿರಾಡಿ ಘಾಟ್ ನಲ್ಲಿ ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಹೆದ್ದಾರಿ ಸಂಚಾರ ಬಂದ್ ಆಗಿತ್ತು. ಮುಂಜಾಗ್ರತಾ ಕ್ರಮವಾಗಿ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಆಲೂರು ತಾಲೂಕುಗಳ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.
ಮಹಾರಾಷ್ಟ್ರದ ಸಾವಂತವಾಡಿ ತಾಲೂಕಿನ ಅಂಬೋಲಿ ಫಾಲ್ಸ್ ಬಳಿ ಬೃಹತ್ ಗಾತ್ರದ ಬಂಡೆಗಲ್ಲು ಉರುಳಿ ಬಿದ್ದಿದ್ದು, ಬೆಳಗಾವಿ- ಸಿಂಧದುರ್ಗ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ, ಅಂಬೋಲಿ ಫಾಲ್ಸ್ ವೀಕ್ಷಣೆಗೆ ಬಂದಿದ್ದವರು ವಾಪಸ್ ತೆರಳಬೇಕಾಯಿತು. ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಮೇಗರಮಕ್ಕಿ ಸೇರಿ ಹಲವೆಡೆ ಗುಡ್ಡ ಕುಸಿದಿದ್ದು, ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗದ ತಾಣಗಳಿಗೆ ಪ್ರವಾಸಿಗರಿಗೆ ಜುಲೈ 22ರವರೆಗೆ ಪ್ರವಾಸ ನಿರ್ಬಂಧಿಸಲಾಗಿದೆ.
ತುಂಗೆ ಶಾಂತವಾಗಲೆಂದು ಶೃಂಗೇರಿ ಶ್ರೀ ಪೂಜೆ: ಈ ಮಧ್ಯೆ, ತುಂಗೆಯ ಅಬ್ಬರ ಶಾಂತವಾಗಲೆಂದು ಪ್ರಾರ್ಥಿಸಿ, ಶೃಂಗೇರಿ ಮಠದ ಕಿರಿಯ ಶ್ರೀಗಳಾದ ವಿಧುಶೇಖರ ಶ್ರೀಗಳು ಬುಧವಾರ ತುಂಗಾನದಿಗೆ ಪೂಜೆ ಸಲ್ಲಿಸಿದರು. ಮಠದ ಗಾಂಧಿ ಮೈದಾನ, ಸಂಧ್ಯಾವಂದನೆ ಮಂಟಪ, ಗುರುಗಳ ಸ್ನಾನಘಟ್ಟ, ನರಸಿಂಹವನ, ಮಠದ ಯಾತ್ರಿನಿವಾಸ, ಶೌಚಾಲಯ, ಊಟದ ಹಾಲ್, ಕಪ್ಪೆಶಂಕರನಾರಾಯಣ ದೇಗುಲಗಳಿಗೆ ನೀರು ನುಗ್ಗಿದ್ದು, ಭಕ್ತಾದಿಗಳಿಗೆ ತೊಂದರೆಯಾಗಿದೆ.