ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಒಳಚರಂಡಿ ಹಾಗೂ ದುರಸ್ತಿ ಕಾಮಗಾರಿ, ಗುಂಡಿಗಳಿಂದ ಕೂಡಿರುವ ಚಿಕ್ಕಮಗಳೂರು ನಗರದ ಗಲ್ಲಿ ರಸ್ತೆಗಳಿಗೆ ಸದ್ಯಕ್ಕೆ ಡಾಂಬರೀಕರಣದ ಭಾಗ್ಯ ಇಲ್ಲ.

ಇದಕ್ಕೆ ಶಾಸಕ ಎಚ್‌.ಡಿ.ತಮ್ಮಯ್ಯ ಆಗಲಿ, ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆಗಲಿ, ಬಿಜೆಪಿ- ಕಾಂಗ್ರೆಸ್‌ನ ಕಾರ್ಯಕರ್ತರ ನಡುವಿನ ಕಲಹವಾಗಲಿ, ನಗರ ಸಭೆಯ ಅಧ್ಯಕ್ಷರು, ಸದಸ್ಯರು, ಆಯುಕ್ತರು, ಎಂಜಿನಿಯರ್‌ ಅಥವಾ ಗುತ್ತಿಗೆದಾರರು ಕಾರಣವಲ್ಲ.

ಇನ್ನೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಯಿಂದ ಕಾಮಗಾರಿಗೆ ಅನುದಾನದ ಕೊರತೆಯೂ ಕಾರಣವಲ್ಲ. ಡಾಂಬರೀಕರಣ ಕಾಮಗಾರಿಗೆ ವಿಳಂಬಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಹೊಸೇನಿ ಖಮೇನಿ ಕಾರಣರಾಗಿದ್ದಾರೆ.


ಹೌದು, ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಅಮೆರಿಕ-ಇರಾನ್‌-ಇಸ್ರೇಲ್‌ದ ಯುದ್ಧದಿಂದ ಕೇವಲ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಸಿಲಿಂಡರ್‌ ಸಮಸ್ಯೆ ಮಾತ್ರವಲ್ಲ, ರಸ್ತೆಗೆ ಹಾಕುವ ಬಿಟುಮಿನ್‌ (ಡಾಂಬರ್‌ ದ್ರಾವಣ) ದೊರೆಯದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ನಡುವೆ ಒಪ್ಪಂದ ಫಲಪ್ರದವಾಗುತ್ತಿಲ್ಲ. ಹೀಗಾಗಿ, ಚಿಕ್ಕಮಗಳೂರು ನಗರದ ಹಲವು ಗಲ್ಲಿ ರಸ್ತೆಯ ಡಾಂಬರೀಕರಣ ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲವಾಗಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭಗೊಂಡ ಬಳಿಕ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಇದರಿಂದ ಅಗತ್ಯ ವಸ್ತುಗಳಲ್ಲಿ ಬೆಲೆ ಏರಿಕೆ ಆಗುತ್ತಿದೆ. ಅದರಲ್ಲೂ ಪೆಟ್ರೋಲ್‌, ಡೀಸಲ್‌, ಗ್ಯಾಸ್‌ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

12 ಕೋಟಿ ರು. ಡಾಂಬರೀಕರಣ ಸ್ಥಗಿತ:

ಯುದ್ಧ ಪ್ರಾರಂಭವಾಗುವುದಕ್ಕೂ ಮೊದಲ ಪ್ರತಿ ಬ್ಯಾರಲ್‌ ಡಾಂಬರ್‌ ದ್ರಾವಣದ ಬೆಲೆ 30 ರಿಂದ 35 ಸಾವಿರ ರು. ಇತ್ತು. ಆದರೆ, ಇದೀಗ 90 ರಿಂದ 95 ಸಾವಿರ ರು,ಗೆ ಏರಿಕೆಯಾಗಿದೆ. ಹೀಗಾಗಿ, ಚಿಕ್ಕಮಗಳೂರಿನ ರಸ್ತೆ ಡಾಂಬರೀಕರಣಕ್ಕೆ ಕಾಮಗಾರಿಯ ಮುಂದುವರಿಸುವುದಕ್ಕೆ ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸುಮಾರು 12 ಕೋಟಿ ರು. ಮೊತ್ತದ ನಗರದ ರಸ್ತೆ ಡಾಂಬರೀಕರಣ ಕಾಮಗಾರಿ ಸ್ಥಗಿತಗೊಂಡಿದೆ.

ಯುದ್ಧ ಆರಂಭಕ್ಕೂ ಮೊದಲೇ ಸುಮಾರು 10 ಕೋಟಿ ರು. ಮೊತ್ತದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು. ಮೊದಲ ಹಂತದಲ್ಲಿ ಮುಖ್ಯ ರಸ್ತೆಗಳಲ್ಲಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿತ್ತು. ಹೀಗಾಗಿ, ಮುಖ್ಯ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ಇಲ್ಲ. ಆದರೆ, ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಡಾಂಬರೀಕರಣ ಬಾಕಿ ಇದೆ. ಆ ರಸ್ತೆಗಳ ಡಾಂಬರೀಕರಣಕ್ಕೆ ಇದೀಗ ಡಾಂಬರ್‌ ದ್ರಾವಣದ ಬೆಲೆ ಏರಿಕೆ ಅಡ್ಡಿಯಾಗಿದೆ.

ಯುದ್ಧ ನಿಲ್ಲುವವರೆಗೆ ಕಾಯಬೇಕು:

ಡಾಂಬರೀಕರಣ ಕಾಮಗಾರಿ ಆರಂಭಿಸುವುದಕ್ಕೆ ಯುದ್ಧ ಸಂಪೂರ್ಣವಾಗಿ ನಿಲ್ಲಬೇಕು. ಹರ್ಮುಜ್‌ ಜಲ ಸಂಧಿಯಲ್ಲಿ ಮುಕ್ತವಾಗಿ ಸರಕು ಸಾಗಾಣಿಕೆಯ ಹಡಗುಗಳು ಸಂಚಾರ ಆರಂಭಗೊಳ್ಳಬೇಕು. ಕಚ್ಚಾ ತೈಲ ಮೊದಲಿನಂತೆ ಪೂರೈಕೆ ಆಗಬೇಕು. ಡಾಂಬರ್‌ ದ್ರಾವಣದ ಬೆಲೆ ಇಳಿಕೆ ಆಗಬೇಕು. ಆ ನಂತರ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುವುದು. ಇಲ್ಲವಾದರೆ, ಸದ್ಯ ಮೀಸಲಿಟ್ಟಿರುವ ಹಣದಲ್ಲಿ ಡಾಂಬರೀಕರಣಕ್ಕೆ ಗುತ್ತಿಗೆದಾರರು ಮುಂದಾಗುವುದಿಲ್ಲ ಎಂದು ನಗರ ಸಭೆಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಕಾಂಕ್ರೀಟ್‌ ರಸ್ತೆ ನಿರ್ಮಾಣದ ಪರಿಹಾರ

ಡಾಂಬರೀಕರಣಕ್ಕೆ ಪರ್ಯಾಯವಾಗಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡುವುದಕ್ಕೆ ಅವಕಾಶವಿದೆ. ಆದರೆ, ನಗರ ಪ್ರದೇಶದಲ್ಲಿ ಯುಟಿಲಿಟಿ ವ್ಯವಸ್ಥೆ (ನೀರು, ವಿದ್ಯುತ್‌ ಕೇಬಲ್‌ ಸೇರಿದಂತೆ ಮೊದಲಾದ ಸೌಕರ್ಯ) ಮಾಡುವುದಕ್ಕೆ ಪದೇ ಪದೇ ರಸ್ತೆಗಳನ್ನು ಆಗೆಯಬೇಕಾಗಲಿದೆ. ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿದರೆ, ಸಮಸ್ಯೆ ಆಗಲಿದೆ. ಜತೆಗೆ, ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಮೊತ್ತ ಬೇಕಾಗಲಿದೆ. ಈ ಬಗ್ಗೆ ಉನ್ನತ್ತ ಮಟ್ಟದಲ್ಲಿ ಚರ್ಚೆ ನಡೆಸಬೇಕಾಗಲಿದೆ ಎಂದು ನಗರ ಸಭೆ ಆಯುಕ್ತ ಬಸವರಾಜ್‌ ತಿಳಿಸಿದ್ದಾರೆ.

ನಗರದ ಮುಖ್ಯ ರಸ್ತೆಗಳಲ್ಲಿ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದೆ. ಯಾವುದೇ ಸಮಸ್ಯೆ ಇಲ್ಲ. ಆದರೆ, ಮುಖ್ಯ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಡಾಂಬರೀಕರಣ ಮಾಡುವ ಕಾಮಗಾರಿ ಬಾಕಿ ಇದೆ. ಬಿಟುಮಿನ್‌ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿರುವುದರಿಂದ ಡಾಂಬರೀಕರಣ ಸಾಧ್ಯವಾಗುತ್ತಿಲ್ಲ.

ಬಸವರಾಜ್‌ ಆಯುಕ್ತ, ಚಿಕ್ಕಮಗಳೂರು ನಗರ ಸಭೆ.