ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಎರಡು ವರ್ಷಗಳವರೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಿದೆ. ಜಿಲ್ಲೆಯ ನೆನಪುಗಳು ಜೀವನದುದ್ದಕ್ಕೂ ಜೊತೆಗಿರಲಿವೆ. ನನ್ನಿಬ್ಬರು ಮಕ್ಕಳು ಜನಿಸಿದ್ದು ಬಾಗಲಕೋಟೆ ಹಾಗೂ ವಿಜಯಪುರದಲ್ಲಿಯೇ. ಇದು ಅವರಿಗೆ ಭಾವನಾತ್ಮಕ ಬೆಸುಗೆ ಬೆಸೆಯಲಿದೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಜಗುರು ಮಾರ್ಟ್‌ನಲ್ಲಿ ನಡೆದ ದುರಂತದ ಸಂದರ್ಭ, ಅತಿವೃಷ್ಟಿ-ಅನಾವೃಷ್ಟಿ ಬಂದಾಗ ಸಮರ್ಥವಾಗಿ ನಿರ್ವಹಿಸುವ ಸಂದರ್ಭಗಳಲ್ಲಿ, ಬೋರವೆಲ್ ಸಿಲುಕಿದ ಮಗುವಿನ ಒಂದೂವರೆ ದಿನ ರಕ್ಷಣಾ ಕಾರ್ಯ ನಿರ್ವಹಣೆ ಸಂದರ್ಭದಲ್ಲಿ ಅಧಿಕಾರಿಗಳು, ಸಾರ್ವಜನಿಕರು ನೀಡಿರುವ ಸಹಾಯ-ಸಹಕಾರವನ್ನು ನೆನೆದರು. ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಪೊಲೀಸ್ ಇಲಾಖೆಯ ಸಹಕಾರಕ್ಕೆ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸಿದರು.
ನೂತನ ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿಗಳು ನಡೆಸಿಕೊಂಡ ಬಂದ ಕಾರ್ಯಗಳೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ, ಜನರ ಆಶೋತ್ತರಗಳಿಗುಣವಾಗಿ ಶ್ರಮಿಸುವುದಾಗಿ ತಿಳಿಸಿದ ಅವರು, ಇಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ತಮ್ಮ ಅನಿಸಿಕೆ ಹಂಚಿಕೊಂಡ ವಿಷಯಗಳಿಂದ ಜಿಲ್ಲೆಯ ಸಮಗ್ರ ಚಿತ್ರಣವೂ ಸಹ ತಿಳಿದುಕೊಳ್ಳಲು ಸಾಧ್ಯವಾಯಿತು. ಈ ಅನಿಸಿಕೆಗಳಿಂದ ನಿಕಟ ಪೂರ್ವ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿರುವ ಕುರಿತು ಮನನವಾಗಿದೆ. ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವುದರಿಂದ ಈ ಅವಕಾಶಗಳನ್ನು ಬಳಸಿಕೊಂಡು ಚೆನ್ನಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.ಸಿಇಒ ರಿಷಿ ಆನಂದ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ್ ವಾಲಿಕಾರ, ರೈತ ಮುಖಂಡ ಅರವಿಂದ ಕುಲಕರ್ಣಿ, ಡಾ.ಎಲ್.ಎಚ್.ಬಿದರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ಇಂಡಿ ತಹಸೀಲ್ದಾರ ಬಿ.ಎಸ್ ಕಡಕ್‌ಭಾವಿ, ವಿಜಯಪುರ ತಹಸೀಲ್ದಾರ್ ಪ್ರಶಾಂತ ಚನಗೊಂಡ, ಅಭಿಷೇಕ ಚಕ್ರವರ್ತಿ ಸೇರಿದಂತೆ ಇತರರು ಹಾಜರಿದ್ದರು.
ಕೋಟ್ವಿಜಯಪುರ ಇಲ್ಲಿನ ಜನರು ವಿಶಾಲ ಹೃದಯವುಳ್ಳವರೂ, ಅವರು ನೀಡಿರುವ ಪ್ರೀತಿ-ವಿಶ್ವಾಸ, ಸಹಕಾರವನ್ನು ಎಂದಿಗೂ ಮರೆಯಲಾಗದು. ನಾನು ಬೇರೆ ರಾಜ್ಯದವನು ಎಂಬ ಭಾವನೆ ಬರದ ಹಾಗೆ ನೋಡಿಕೊಂಡು, ನನ್ನನ್ನು ತಮ್ಮ ಮನೆ ಮಗನೆಂದು ಭಾವಿಸಿ ನನಗೆ ನೀಡಿದ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
ಟಿ.ಭೂಬಾಲನ್, ನಿರ್ಗಮಿತ ಡಿಸಿ