ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ ಹಲವು ಕಲೆಗಳ ಆಗರ ಮತ್ತು ತವರು. ಪ್ರತಿ ತಾಲೂಕು, ಜಿಲ್ಲೆ ತನ್ನದೇಯಾದ ವಿಶಿಷ್ಟ ಕಲೆ ಹೊಂದಿವೆ. ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಕಲೆಗಳನ್ನು ಪೋಷಣೆ ಮಾಡುವ ಹೊಣೆಗಾರಿಕೆ ಮಠಗಳು ಸರ್ಕಾರ ಸಂಘ ಸಂಸ್ಥೆಗಳ ಮೇಲಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.ಬಸವಕೇಂದ್ರ ಮುರುಘಾ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಉತ್ತರ ಕರ್ನಾಟಕದ ಪ್ರಾಚೀನ ವಂಶಪಾರಂಪರ‍್ಯ, ಮೌಖಿಕ ಸಂಪ್ರದಾಯದ ಜಾನಪದ ಕಲೆಯನ್ನು ರೂಢಿಸಿಕೊಂಡು ಪದ್ಮಶ್ರೀ ಪ್ರಶಸ್ತಿ ಪಡೆದ ಬಾಗಲಕೋಟೆಯ ಡಾ.ವೆಂಕಪ್ಪ ಅಂಬಾಜಿ ಸುಗತೇಕರ ಅವರ ಹಲವು ಬಗೆಯ ವಿಶಿಷ್ಟ ಜಾನಪದ ಶೈಲಿಯ ಹಾಡುಗಳ ಸಮಾರಂಭದಲ್ಲಿ ಮಾತನಾಡಿದರು.
ಗೊಂದಳಿ ಅತ್ಯದ್ಭುತ ಕಲೆಯಾಗಿದೆ. ಇಂತಹ ಕಲೆ ಉಳಿಯಬೇಕಾದರೆ ಕಲಾವಿದರನ್ನು ಗೌರವಿಸಬೇಕಾಗುತ್ತದೆ. ಅವರಲ್ಲಿನ ಪ್ರತಿಭೆಯನ್ನು ಹೊರಹಾಕಲಿಕ್ಕೆ ವೇದಿಕೆಗಳನ್ನು ಒದಗಿಸಿ ಅವಕಾಶ ಕಲ್ಪಿಸಿ ಕಲೆಗೆ ನೆಲೆ ಒದಗಿಸಿದರೆ ಉಳಿಯಲು ಸಾಧ್ಯವಿದೆ ಎಂದರು.ಗೊಂದಳಿಯ ಕಲೆಯನ್ನು 83ರ ಇಳಿಯವಸ್ಸಿನಲ್ಲಿಯೂ ತಮ್ಮ ಕಂಚಿನ ಕಂಠದ ಮೂಲಕ ಹಾಡುತ್ತ ಸಾಗಿ ಕರ್ನಾಟಕಕ್ಕೆ ಕೀರ್ತಿ ತಂದ ವೆಂಕಪ್ಪ ಅಂಬಾಜಿ ಸುಗತೇಕರ ಅವರ ಕಲಾಸೇವೆ ಅನನ್ಯವಾದುದು. ಮುಂದಿನ ದಿನಗಳಲ್ಲಿ ಒಂದುದಿನ ಅಹೋರಾತ್ರಿ ವಚನಗಳಿಗೆ ಮೀಸಲಾದ ವೇದಿಕೆಯನ್ನು ಒದಗಿಸಲಾಗುತ್ತದೆ. ಅದಕ್ಕೆ ತಯಾರಾಗಿ ಬನ್ನಿ ಎಂದು ಶ್ರೀಗಳು ಆಮಂತ್ರಿಸಿದರು.
ಡಾ.ವೆಂಕಪ್ಪ ಅಂಬಾಜಿ ಮಾತನಾಡಿ, ಗೊಂದಳಿ ಕಲೆ ವಂಶಪಾರಂಪರ್ಯವಾಗಿದ್ದು ಇದು ಹೆಚ್ಚಾಗಿ ಕನ್ನಡ ನಾಡಿನ ಉತ್ತರ ಕರ್ನಾಟಕ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಲ್ಲಿ ಪ್ರಚಲಿತವಿದೆ. ಭಜನೆಯ ಮೂಲಕ ಹಾಡುವ ಕಲೆ ಇದಾಗಿದ್ದು ವಚನ, ಜಾನಪದ, ಪುರಾಣ, ಇತರೆ ಪ್ರಕಾರಗಳ ಹಾಡುಗಳನ್ನು ಹಾಡುತ್ತ ಸಾಗಿದ್ದೇವೆ. ಮೊದಲು ಪುರುಷರಷ್ಟೆ ಇದ್ದೆವು. ಈಗೀಗ ಮಹಿಳೆಯರೂ ಈ ಕಲೆಯತ್ತ ಬರುತ್ತಿದ್ದಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಥೆಗಳನ್ನು ಹೇಳುವ ಕಲಾಪ್ರಕಾರ ಇದಾಗಿದ್ದು, ಇದರಲ್ಲಿ ಸಮಾಳ, ಚೌಡಿಕೆ, ತಾಳ, ಕಂಜರ, ಡೋಲು ಮತ್ತು ದಮಡಿಯನ್ನು ಪಕ್ಕ ವಾದ್ಯಗಳಾಗಿ ಬಳಸಿಕೊಳ್ಳಲಾಗುತ್ತದೆಂದು ಹೇಳಿದರು.ಶಿರಸಂಗಿ ಮಹಾಲಿಂಗೇಶ್ವರ ಮಠದ ಬಸವ ಮಹಾಂತ ಸ್ವಾಮೀಜಿ, ಇಂಜಿನಿಯರ್ ಬಿ.ಎಂ.ಜಗದೀಶ್, ಕಛೇರಿ ಸಿಬ್ಬಂದಿಗಳಾದ ಎನ್.ಚೆಲುವರಾಜ್, ಪರಮೇಶ್ವರಸ್ವಾಮಿ ಸೇರಿದಂತೆ ಆಸಕ್ತರು ಭಾಗವಹಿಸಿದ್ದರು. ವೆಂಕಪ್ಪ ಅವರ ಹಾಡುಗಾರಿಕೆಯ ಪಕ್ಕ ವಾದ್ಯದಲ್ಲಿ ಹನುಮಂತು, ಅಂಬಾಜಿ ಮತ್ತು ಚೇತನ್ ಅವರು ಸಾಥ್ ನೀಡಿದರು.
---