ರಾಜ್ಯದಲ್ಲಿ ವರ್ಷಕ್ಕೆ 1.20 ಲಕ್ಷ, ದೇಶದಲ್ಲಿ 12 ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೊರಬರುತ್ತಿದ್ದು, ಉದ್ಯೋಗ ಸಿಗುವಲ್ಲಿ ಸ್ಪರ್ಧೆ ಇದೆ. ನಿಗದಿತ ಪಠ್ಯಕ್ರಮದ ಜತೆಗೆ ಕೇಂದ್ರ ಸರ್ಕಾರದ ಹೊಸ ಕೈಗಾರಿಕಾ ನೀತಿ ಅಧ್ಯಯನ ಮಾಡಿ ಉದ್ಯಮಿಯಾಗಿ ಉದ್ಯೋಗ ನೀಡಬೇಕು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

- ಜಿಎಂ ವಿವಿಯಲ್ಲಿ ಮಲ್ಲಿಕಾ-26.0 ಸಾಂಸ್ಕೃತಿಕ ಉತ್ಸವ ಉದ್ಘಾಟನೆ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲಿ ವರ್ಷಕ್ಕೆ 1.20 ಲಕ್ಷ, ದೇಶದಲ್ಲಿ 12 ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೊರಬರುತ್ತಿದ್ದು, ಉದ್ಯೋಗ ಸಿಗುವಲ್ಲಿ ಸ್ಪರ್ಧೆ ಇದೆ. ನಿಗದಿತ ಪಠ್ಯಕ್ರಮದ ಜತೆಗೆ ಕೇಂದ್ರ ಸರ್ಕಾರದ ಹೊಸ ಕೈಗಾರಿಕಾ ನೀತಿ ಅಧ್ಯಯನ ಮಾಡಿ ಉದ್ಯಮಿಯಾಗಿ ಉದ್ಯೋಗ ನೀಡಬೇಕು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಇಲ್ಲಿನ ಜಿಎಂ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಲ್ಲಿಕಾ-26.0 ಸಾಂಸ್ಕೃತಿಕ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಎಂಜಿನಿಯರಿಂಗ್ ಪದವೀಧರರು ಸರ್ಕಾರಿ, ಅರೆಸರ್ಕಾರಿ ಕೆಲಸಗಳನ್ನು ಅವಲಂಬಿಸದೇ ಉದ್ಯಮಿಗಳಾಗಬೇಕು. ಹೆಚ್ಚು ಅಂಕ ಪಡೆದ ಪದವೀಧರರು ದೇಶದ ಜಿಡಿಪಿಗೆ ಕೊಡುಗೆ ನೀಡಬೇಕು. ದೇಶ ಸೇವೆ ಕಡೆಗೆ ಗಮನಹರಿಸಬೇಕು. ಅನೇಕ ಸಾಧಕರ ಕುಟುಂಬ ಹಿನ್ನೆಲೆ ಗಮನಿಸಿದರೆ ಅವರೆಲ್ಲರೂ ಶೂನ್ಯದಿಂದಲೇ ಹೀರೋ ಆಗಿದ್ದಾರೆ. ಹೀಗಾಗಿ, ಸಾಧನೆಗೆ ಹಣ, ಗಾಡ್‌ಫಾದರ್ ಅಥವಾ ಮಾರ್ಗದರ್ಶಕರಿಲ್ಲ ಎಂಬ ಮನೋಭಾವದಿಂದ ಮುಕ್ತರಾಗಿ ಎಂದರು.

ಹೆಚ್ಚು ಅಂಕ ಪಡೆದವರು ಉದ್ಯೋಗ ಪಡೆಯಬಹುದು. ಕಡಿಮೆ ಅಂಕ ಪಡೆದವರು ಹತಾಶರಾಗಬೇಕಿಲ್ಲ. ಅಂಥವರು ಮಂತ್ರಿಯೂ ಆಗಬಹುದು. ನನ್ನೊಂದಿಗೆ ಕಡಿಮೆ ಅಂಕ ಪಡೆದ ಸಿ.ಸಿ.ಪಾಟೀಲ್, ಜಿ.ಎಂ. ಸಿದ್ದೇಶ್ವರ ಅವರೇ ಇದಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಹೇಳಿ ನಗೆಚಟಾಕಿ ಹಾರಿಸಿದರು.

ಸ್ಯಾಂಡಲ್ ವುಡ್ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಮಾತನಾಡಿ, ನೀವು ಜೀವನದಲ್ಲಿ ಏನೇ ಸಾಧಿಸಿದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ ಮೊದಲು ಮಾನವೀಯತೆಯನ್ನು ಬೆಳೆಸಿಕೊಳ್ಳಿ. ಕುವೆಂಪು ಅವರು ಹೇಳಿದಂತೆ ''''''''''''''''ಮೊದಲು ಮಾನವನಾಗು'''''''''''''''' ಎಂಬ ತತ್ವವನ್ನು ಪಾಲಿಸಿ. ನಿಮ್ಮ ಪೋಷಕರನ್ನು ಯಾವತ್ತೂ ಗೌರವಿಸಿ, ಅವರಿಗಿಂತ ದೊಡ್ಡ ಪ್ರಶಸ್ತಿ ಯಾವುದೂ ಇಲ್ಲ ಎಂದರು.

ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಚಿವ ಸಿ.ಸಿ. ಪಾಟೀಲ್, ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಜಿ.ಎಂ. ವಿವಿ ಕುಲಾಧಿಪತಿ ಜಿ.ಎಂ.ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಉಪಕುಲಪತಿ ಡಾ. ಎಂ.ವೇಣುಗೋಪಾಲ ರಾವ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ.ಕಿರಣ್‌ಕುಮಾರ್, ಉಪ ನಿರ್ದೇಶಕರಾದ ಡಾ.ಸಂತೋಷ್ ಕುಮಾರ್, ಸುನಿಲ್‌ಕುಮಾರ್ ಇತರರಿದ್ದರು. ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

- - -

-9ಕೆಡಿವಿಜಿ31:

ದಾವಣಗೆರೆಯ ಜಿಎಂ ವಿ.ವಿ.ಯಲ್ಲಿ ನಡೆದ ಮಲ್ಲಿಕಾ-26.0 ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಉದ್ಘಾಟಿಸಿದರು.