ಶೇ.16ಕ್ಕೂ ಹೆಚ್ಚು ಮಳೆಯಾಗಿದ್ದು, ಕುಡಿವ ನೀರಿನ ಕೊರತೆಯ ಸಾಧ್ಯತೆ ಇಲ್ಲ: ಡಿಸಿ ಡಾ.ವಿದ್ಯಾಕುಮಾರಿ

| Published : Feb 04 2025, 12:30 AM IST

ಶೇ.16ಕ್ಕೂ ಹೆಚ್ಚು ಮಳೆಯಾಗಿದ್ದು, ಕುಡಿವ ನೀರಿನ ಕೊರತೆಯ ಸಾಧ್ಯತೆ ಇಲ್ಲ: ಡಿಸಿ ಡಾ.ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬರುವ ಬೇಸಿಗೆ ದಿನಗಳಲ್ಲಿ ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಮುಂಬರುವ ಬೇಸಿಗೆ ದಿನಗಳಲ್ಲಿ ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಹೇಳಿದರು.ಅವರು ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ 4,535 ಮಿ.ಮೀ. ವಾಡಿಕೆ ಮಳ‍ೆಯಾಗುತ್ತದೆ, ಆದರೆ ಕಳೆದ ಸಾಲಿನಲ್ಲಿ 5261 ಮಿ.ಮೀ.ನಷ್ಟು ಅಂದರೆ ಶೇ.16ರಷ್ಟು ಹೆಚ್ಚು ಮಳೆಯಾಗಿದ್ದು, ನೀರಿನ ಕೊರತೆ ಆಗುವ ಸಾಧ್ಯತೆಗಳಿಲ್ಲ. ಆದರೂ ಅಂತರ್ಜಲ ಕುಸಿತಗೊಂಡು ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು. ಅಲ್ಲ ನೀರಿನ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರುಗಳು ಬಂದಿರುವುದಿಲ್ಲ. ಒಂದು ವೇಳೆ ದೂರುಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದ ಅವರು, ನೀರಿನ ಪೈಪ್‌ ಲೈನ್‌ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಕ್ರಮ ವಹಿಸಬೇಕು ಎಂದರು.ಅಂತರ್ಜಲ ಮಟ್ಟ ಕಡಿಮೆಯಾಗುವುದನ್ನು ತಡೆಗಟ್ಟುವ ಸಲುವಾಗಿ ಹಾಗೂ ಸಮುದ್ರದ ಉಪ್ಪು ನೀರು ನದಿಯ ಸಿಹಿ ನೀರಿಗೆ ಸೇರದಂತೆ ಈಗಾಗಲೇ ಜಿಲ್ಲೆಯಲ್ಲಿರುವ ಎಲ್ಲ 666 ಕಿಂಡಿ ಆಣೆಕಟ್ಟುಗಳಿಗೆ ಹಲಗೆಗಳನ್ನು ಅಳವಡಿಸಲಾಗಿದೆ ಎಂದ ಅವರು, ಬತ್ತಿಹೋಗಿರುವ ಸರ್ಕಾರಿ ಬಾವಿಗಳಿಗೂ ಸಹ ಮಳೆ ನೀರಿನ ಕೊಯ್ಲನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಕ್ರಮಕ್ಕೆ ಈಗಾಗಲೇ ಪಿ.ಡಿ. ಖಾತೆಯಲ್ಲಿ 10.15 ಕೋಟಿ ರು. ಅನುದಾನ ಲಭ್ಯವಿದೆ. ಈಗಾಗಲೇ ತಾಲೂಕು ಮಟ್ಟದ ತಹಸೀಲ್ದಾರ್‌ ವಿಪತ್ತು ಪಿ.ಡಿ. ಖಾತೆಯಲ್ಲಿ 1.53 ಕೋಟಿ ರು. ಅನುದಾನ ಲಭ್ಯವಿದ್ದು, ಬರ ನಿರ್ವಹಣೆಗೆ ಯಾವುದೇ ಕೊರತೆ ಇರುವುದಿಲ್ಲ ಎಂದರು.ಸಭೆಯಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ನಾಗರಾಜ್ ವಿ. ನಾಯಕ್, ಸಹಾಯಕ ಕಮೀಷನರ್ ಮಹೇಶ್ಚಂದ್ರ, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ತಾಲೂಕುಗಳ ತಹಸೀಲ್ದಾರ್‌ಗಳು, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ಎನ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.