ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧಿಸುವ ಅಧಿಕಾರವಿಲ್ಲ

| Published : Apr 28 2025, 12:45 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್ಸಿ ಎಸ್ಟಿ ಕುಂದುಕೊರತೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಾರ್ವಜನಿಕ ಸ್ಥಳ ಅಥವಾ ಖಾಸಗಿ ಸ್ಥಳ ಯಾವುದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿದರೆ ಆ ದೇವಸ್ಥಾನಕ್ಕೆ ಎಲ್ಲರಿಗೂ ಪ್ರವೇಶವಿರಲಿದೆ ಯಾರಿಗೂ ಪ್ರವೇಶ ನಿರ್ಬಂಧಿಸುವ ಅಧಿಕಾರವಿಲ್ಲ ಎಂದು ಎಸ್ಪಿ ಕವಿತಾ ಅವರು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ಕುಂತೂರು ಗ್ರಾಮದಲ್ಲಿ ದೇವಸ್ಥಾನದ ಒಳಕ್ಕೆ ಬಿಡುತ್ತಿಲ್ಲ ಎಂದು ಸಭೆಯಲ್ಲಿ ದೂರು ಬಂದ ಹಿನ್ನಲೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರಿಗೆ ದೇವಸ್ಥಾನ ನಿರ್ಮಿಸಿದಾಗ ಕೆಲವು ಜನರಿಗೆ ಅಥವಾ ಸಮುದಾಯಕ್ಕೆ ನಿರ್ಬಂಧಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ನಿರ್ಬಂಧಿಸುವುದಕ್ಕೆ ಅವಕಾಶವನ್ನು ನೀಡುವುದಿಲ್ಲ ಎಂದರು.

ಜಿಲ್ಲೆಯಲ್ಲಿ 37 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 33 ಪ್ರಕರಣಗಳು ಇತ್ಯರ್ಥಗೊಂಡಿದ್ದು, 4 ಪ್ರಕರಣಗಳು ಬಾಕಿ ಉಳಿದಿದೆ. ಜಿಲ್ಲೆಯಲ್ಲಿ ಡಿಸಿಆರ್‌ಇ ಠಾಣೆಯನ್ನು 15 ದಿನದಲ್ಲಿ ಪ್ರಾರಂಭಿಸಲಾಗುವುದು. ಮಹಿಳಾ ಠಾಣೆಯ ಕಟ್ಟಡದ ಮೇಲ್ಬಾಗದಲ್ಲಿ ಠಾಣೆಯನ್ನು ಪ್ರಾರಂಭಿಸಲಾಗುತ್ತಿದ್ದು, ಈಗಾಗಲೇ ಡಿಸಿಆರ್‌ಇ ಠಾಣೆಗೆ ಚಂದ್ರಕಲಾ ಅವರನ್ನು ಅಧಿಕಾರಿಯಾಗಿ ನೇಮಕಮಾಡಲಾಗಿದೆ ಎಸ್ಸಿಎಸ್ಟಿ ದೌರ್ಜನ್ಯ ಪ್ರಕರಣಗಳ ಸಂಬಂಧ ದೂರುಗಳನ್ನು ಠಾಣೆಗೆ ತೆರಳಿ ದಾಖಲಿಸಬಹುದಾಗಿದೆ ಎಂದು ತಿಳಿಸಿದರು.

ಹಿಂದಿನ ಜಿಲ್ಲಾಧಿಕಾರಿ ಪ್ರತಿ ಮೂರು ತಿಂಗಳಿಗೊಮ್ಮೆ ಸಂಘ, ಸಂಸ್ಥೆಗಳ ಸಭೆ ಕರೆಯುತ್ತಿದ್ದರು. ಆದರೆ ಇಂದಿನ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಬಂದು 2 ವರ್ಷದಲ್ಲಿ ಒಂದು ಸಭೆ ಮಾಡಿದ್ದಾರೆ. ನಾವು ಕೂಡ ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಒತ್ತಾಯ ಮಾಡಿದ್ದೇವೆ. ಜಿಲ್ಲಾಧಿಕಾರಿಗೆ ಈ ಸಭೆಯಲ್ಲಿ ಚರ್ಚೆಯಾಗಿರುವುದರ ಕುರಿತು ವರದಿ ಸಲ್ಲಿಸಬೇಕು ಎಂದು ದಲಿತ ಮುಖಂಡರು ಮನವಿ ಮಾಡಿದರು.

ಸಂತೇಮರಹಳ್ಳಿ ಜೋಡಿ ಕೊಲೆ ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಮೇಲ್ಮನವಿ ವಿಳಂಬವಾಗುತ್ತಿದೆ. ಸಂತ್ರಸ್ತರಿಂದ ಸಮಾಜ ಕಲ್ಯಾಣ ಇಲಾಖೆಯ ಮುಖಾಂತರ ಖಾಸಗಿ ಮೇಲ್ಮನವಿ ಸಲ್ಲಿಸಬೇಕು. ಕೊಲೆಯಾದ ಕಾವುದವಾಡಿ ನಂಜಯ್ಯನ ಮಗಳಾದ ಜಯಮ್ಮ ಅವರಿಗೆ ಉದ್ಯೋಗ ನೀಡುವಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೇಲಾಧಿಕಾರಿಗಳ ಎಡವಟ್ಟಿನಿಂದ ಸಮಸ್ಯೆಯಾಗಿದೆ. ಜಯಮ್ಮ ಪತಿ ಬಿಟ್ಟು ತಂದೆಯ ಜೊತೆ ಅವಲಂಬಿತರಾಗಿದ್ದರು. ಹಾಗಾಗಿ ಆಕೆಗೆ ಕಾಯಂ ಉದ್ಯೋಗ ಕೊಡಸಬೇಕು ಸಿ.ಎಂ.ಕೃಷ್ಣಮೂರ್ತಿ, ಕೆ.ಎಂ.ನಾಗರಾಜು, ಸಿ.ಕೆ.ಮಂಜುನಾಥ್ ಸಭೆ ಗಮನಕ್ಕೆ ತಂದಾಗ ಮರು‌ ಅರ್ಜಿ ಸಲ್ಲಿಸಿ ಉದ್ಯೋಗ ಕೊಡಿಸುವುದಾಗಿ ಇನ್ನೂ 15ದಿನಗಳೊಳಗೆ ಪ್ರಕರಣಕ್ಕೆ ಸಿನಿಯಾರಿಟಿ ಸಿಗುತ್ತಿದ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು ತಿಳಿಸಿದರು.ನಗರಪ್ರದೇಶದಲ್ಲಿ ಯುವ ಜನರು ಗಾಂಜಾ ವ್ಯಸನಿಗಳಾಗುತ್ತಿದ್ದು, ಕುಟುಂಬಗಳು ಬೀದಿಗೆ ಬೀಳುತ್ತಿದೆ. ಈ ಕುರಿತು ಪೊಲೀಸ್‌ ಇಲಾಖೆ ಗಂಭೀರವಾಗಿ ಕ್ರಮವಹಿಸಬೇಕು ಎಂದು ಶಿವು ವಿರಾಟ್‌ ಮನವಿ ಮಾಡಿದರು. ಎಸ್ಪಿ ಕವಿತಾ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷ 37 ಪ್ರಕರಣಗಳು ಎನ್‌ಡಿಪಿಎಸ್‌ ನಡಿಯಲ್ಲಿ ದಾಖಲಾಗಿದೆ. ಈ ವರ್ಷದಲ್ಲಿ ನಾಲ್ಕೇ ತಿಂಗಳಿಗೆ 28 ಪ್ರಕರಣಗಳು ದಾಖಲಾಗಿದ್ದು, ಜಿಲ್ಲಾ ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪೊಲೀಸ್‌ ಠಾಣೆಗಳಲ್ಲಿ ಬೀಟ್‌ ಮಾಹಿತಿ ಹಾಕಲಾಗಿದ್ದು, ಅಲ್ಲಿ ಹರಿಜನ ಎಂಬ ಪದವನ್ನು ಬಳಕೆ ಮಾಡಲಾಗಿದೆ. ಹರಿಜನ ಎಂಬ ಪದವನ್ನು ಬ್ಯಾನ್‌ ಮಾಡಲಾಗಿದ್ದು, ಸರ್ಕಾರದ ಗೈಡ್‌ ಲೈನ್‌ ಕೂಡ ಇದೆ ಹರಿಜನ ಪದ ತೆಗೆದುಹಾಕಲು ಹೇಳಲಾಗಿದ್ದರೂ ತೆಗೆದುಹಾಕಿಲ್ಲ. ಹರಿಜನ ಎಂಬ ಪದವನ್ನು ತೆಗೆದುಹಾಕಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕಾಡಹಳ್ಳಿ ಮಹೇಂದ್ರ ಮನವಿ ಮಾಡಿದರು.

ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ 1772 ಸಿಸಿ ಕ್ಯಾಮೆರಾ ಇತ್ತು. ಈಗ ಒಂದು ವರ್ಷದಲ್ಲಿ 4709 ಸಿಸಿ ಕ್ಯಾಮೆರಾಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹಾಕಲಾಗಿದೆ. ಪೊಲೀಸ್‌ ಇಲಾಖೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಎಎಸ್ಪಿ ಶಶಿಧರ ಎಂ.ಎನ್, ಡಿವೈಎಸ್ಪಿಗಳಾದ ಲಕ್ಷ್ಮಯ್ಯ, ಧರ್ಮೇಂದ್ರ, ಎಸ್ಸಿ, ಎಸ್ಟಿ ಸಂಘಟನೆಗಳ ಮುಖಂಡರಾದ ಶಿವುವಿರಾಟ್, ಅಂಬರೀಶ್, ಶಿವರಾಜ್, ಕೃಷ್ಣಮೂರ್ತಿ, ಸಾಗಡೆ ನಂಜುಂಡನಾಯಕ, ಬಸವಣ್ಣ ಬ್ಯಾಡಮೂಡ್ಲು, ದೊಡ್ಡಿಂದುವಾಡಿ ಸಿದ್ದರಾಜು,ನಾಗೇಶ್, ನಟರಾಜು, ನಾರಾಯಣ್, ಬದನಗುಪ್ಪೆ ಮಹೇಶ್ ಇತರರು ಭಾಗವಹಿಸಿದ್ದರು.