ರಾಜ್ಯದಲ್ಲಿ ಲೈಟ್ ಫಿಶಿಂಗ್ ನಿಷೇಧ ಇಲ್ಲ: ಸಚಿವ ವೈದ್ಯ

| Published : Dec 06 2024, 08:58 AM IST

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಗುರುವಾರ ಪಟ್ಟಣದ ತಮ್ಮ ಕಚೇರಿಯಲ್ಲಿ ಜನಸ್ಪಂದನ ಸಭೆ ನಡೆಸಿ ಅಹವಾಲು ಸ್ವೀಕರಿಸಿದರು.

ಭಟ್ಕಳ: ರಾಜ್ಯದಲ್ಲಿ ಲೈಟ್ ಫಿಶಿಂಗ್ ನಿಷೇಧ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಖಡಾಖಂಡಿತವಾಗಿ ತಿಳಿಸಿದರು.ಗುರುವಾರ ಜನಸ್ಪಂದನ ಸಭೆಯಲ್ಲಿ ಕೆಲವು ಮೀನುಗಾರರು ಲೈಟ್ ಫಿಶಿಂಗ್‌ನಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದಾಗ ಸಚಿವರು ಪ್ರತಿಕ್ರಿಯಿಸಿ, ಲೈಟ್ ಫಿಶಿಂಗ್ ನಿಷೇಧದ ಬಗ್ಗೆ ಕರಾವಳಿಯ ಮೂವರು ಸಂಸದರ ಮೇಲೆ ಒತ್ತಡ ತರಬೇಕಿತ್ತು. ಅಲ್ಲದೇ ದೇಶದಲ್ಲಿ ಲೈಟ್ ಫಿಶಿಂಗ್ ನಿಷೇಧ ಮಾಡಿಲ್ಲ. ಹಾಗಾಗಿ ರಾಜ್ಯದಲ್ಲಿ ಮಾತ್ರ ಲೈಟ್‌ ಫಿಶಿಂಗ್‌ ನಿಷೇಧ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಚೇರಿಯಲ್ಲಿ ಜನಸ್ಪಂದನ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಗುರುವಾರ ಪಟ್ಟಣದ ತಮ್ಮ ಕಚೇರಿಯಲ್ಲಿ ಜನಸ್ಪಂದನ ಸಭೆ ನಡೆಸಿ ಅಹವಾಲು ಸ್ವೀಕರಿಸಿದರು.

ತಾಲೂಕಿನ ವಿವಿಧ ಭಾಗಗಳಿಂದ ಬಂದ ನೂರಾರು ಜನರು ರಸ್ತೆ, ಸೇತುವೆ, ಅರಣ್ಯ ಅತಿಕ್ರಮಣ ಸಮಸ್ಯೆ, ಶಾಲೆ ಕಟ್ಟಡ, ಶಿಕ್ಷಕರ ನೇಮಕ, ಉದ್ಯೋಗ, ಆರೋಗ್ಯ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿದರು.

ಅರ್ಜಿ ಹಿಡಿದು ಬಂದ ಜನರನ್ನು ಸಚಿವರು ಶಾಂತಚಿತ್ತದಿಂದ ಮಾತನಾಡಿಸಿ, ಅವರ ಸಮಸ್ಯೆ ಆಲಿಸಿ ಕೆಲವರ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಿಂದಲೇ ಫೋನ್‌ ಮಾಡಿ ಸಮಸ್ಯೆ ಬಗೆಹರಿಸಿಕೊಡುವಂತೆ ಸೂಚಿಸಿದರು.

ರಸ್ತೆ, ಸೇತುವೆ ಮುಂತಾದ ಸಮಸ್ಯೆಗಳ ಅರ್ಜಿಗೆ ಸ್ಪಂದಿಸಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಆರೋಗ್ಯ ಸಮಸ್ಯೆ ಎಂದು ಬಂದವರಿಗೆ ಸಚಿವರು ವೈಯಕ್ತಿಕ ಸಹಾಯವನ್ನೂ ಮಾಡಿದರು.

ಜನಸ್ಪಂದನ ಸಭೆಯಲ್ಲಿ ಬಂದ ಅರ್ಜಿಗಳನ್ನು ಆಯಾ ಇಲಾಖೆಗೆ ಕಳುಹಿಸಿ ಅಧಿಕಾರಿಗಳೊಂದಿಗೆ ಮಾತನಾಡಿ ಬಗೆಹರಿಸಿಕೊಡುವಂತೆ ಸಚಿವರು ತಮ್ಮ ಆಪ್ತ ಕಾರ್ಯದರ್ಶಿಗಳಾದ ನಾಗರಾಜ ನಾಯ್ಕ ಮತ್ತು ನಾಗೇಂದ್ರ ಮೊಗೇರ ಅವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಸಚಿವರ ಪುತ್ರಿ ಬೀನಾ ವೈದ್ಯ ಮುಂತಾದವರಿದ್ದರು.