ಸಾರಾಂಶ
ಮಾಗಡಿ: ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ತಕ್ಷಣ ಈ ಜಿಲ್ಲೆಗೆ ಏನಾದರೂ ಕೊಡುಗೆ ಸಿಗುತ್ತಾ ಎಂದು ಮಾಜಿ ಶಾಸಕ ಎ.ಮಂಜುನಾಥ್ ಪ್ರಶ್ನಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಮನಗರ ಹೆಸರು ಬದಲಾವಣೆಯಿಂದ ಏನೂ ಪ್ರಯೋಜನವಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ, ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ತಂದರೆ ಎಲ್ಲಾ ಹೂಡಿಕೆದಾರರು ನಮ್ಮ ಜಿಲ್ಲೆಗೆ ಬಂದು ಬಿಡುತ್ತಾರೆ ಭೂಮಿಯ ಬೆಲೆ ದುಪ್ಪಟ್ಟಾಗುತ್ತದೆ ಎಂದು ಶಾಸಕ ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಈಗ ಹೆಸರು ಬದಲಾವಣೆ ಆಗಿದೆ, ಕೆಲವು ಕಚೇರಿಗಳಲ್ಲಿ ಹೆಸರು ಬದಲಾಣೆ ಮಾಡಿಕೊಂಡಿದ್ದಾರೆ. ಹೆಸರು ಬದಲಾವಣೆ ಆದ ಮೇಲೆ ಭೂಮಿ ಬೆಲೆ 1ರಿಂದ 4 ಅಥವಾ 10 ಪಟ್ಟು ದುಪ್ಪಟಾಗಿದೆಯಾ? ಇಲ್ಲ ಸರ್ಕಾರವೇ ಭೂಮಿಯ ಬೆಲೆ ದುಪ್ಪಾಟಗಿದೆ ಎಂದು ಎಸ್.ಆರ್ ರೇಟ್ ಬದಲಾವಣೆ ಮಾಡಿದ್ದಾರಾ? ಏನೂ ಎಲ್ಲ, ಈ ಡೊಂಗಿ ವಿಚಾರ ಬಿಟ್ಟು ಅಭಿವೃದ್ಧಿ ಮಾಡಬೇಕೆಂದರೆ ಜಿಲ್ಲೆಯ 5 ತಾಲೂಕುಗಳನ್ನು ಅಭಿವೃದ್ಧಿ ಮಾಡಲು ಚಿಂತನೆ ನಡೆಸಬೇಕಿದೆ ಎಂದರು.ಬೆಂಗಳೂರಿಗೆ ನಾವು ಕೇವಲ 40 ಕಿ.ಮೀ.ದೂರ ಇದ್ದರೂ ನಮ್ಮ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿವೆ. ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿ ಸರ್ಕಾರಿ ಕಟ್ಟಡಗಳು ನಿರ್ಮಾಣವಾಗಿದ್ದು ಬಿಟ್ಟರೆ, ಕಾಂಗ್ರೆಸ್ ಸರ್ಕಾರ ಬಂದು 2 ವರ್ಷವಾದರೂ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿವೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಉಳಿದುಕೊಳ್ಳಬೇಕು ಎಂದು ಹೇಳುತ್ತೀರಾ, ಆದರೆ ಇಲ್ಲಿ ಅಧಿಕಾರಿಗಳು ಉಳಿದುಕೊಳ್ಳಲು ವಸತಿ ಸೌಲಭ್ಯವಿಲ್ಲ. ಜನಪ್ರತಿನಿಧಿಗಳು ಇದರ ಬಗ್ಗೆ ಚಿಂತನೆ ಮಾಡಬೇಕು. ಒಳ್ಳೆಯ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳನ್ನು ಜಿಲ್ಲೆಗೆ ತರಬೇಕು, ಯುವಕರಿಗೆ ಉದ್ಯೋಗ ಕೊಡಿಸಿದರೆ ಉಪಮುಖ್ಯಮಂತ್ರಿ ಶಾಸಕರಾಗಿರುವುದಕ್ಕೆ ಒಳ್ಳೆಯ ಹೆಸರು ಬರುತ್ತದೆ. ಅದನ್ನು ಬಿಟ್ಟು, ನಾನು ಹಠ ಹಿಡಿದಿದ್ದೇ, ಕೇಂದ್ರ ಸರ್ಕಾರವನ್ನು ಧಿಕ್ಕರಿಸಿ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ದೇನೆಂದರೆ ಅದು ನಿಮಗೆ ಮಾತ್ರ ಖುಷಿ, ಜಿಲ್ಲೆಯ ಜನಕ್ಕೆ ಯಾವುದೇ ಖುಷಿ ಇಲ್ಲ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.
ತಾಲೂಕು ಕಚೇರಿಯಲ್ಲಿರುವ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಬೇಕೆಂಬ ನಿಟ್ಟಿನಲ್ಲಿ ತಹಸೀಲ್ದಾರ್ ಕೂಡಿಸಿಕೊಂಡು ಸಮಸ್ಯೆ ಬಗೆಹರಿಸಬಹುದಾ, ಇಲ್ಲ ಮೇಲಿನ ಹಂತಕ್ಕೆ ಹೋಗಬೇಕಾ ಎಂದು ಇಂದಿನ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ಜನಸಾಮಾನ್ಯರಿಗೆ ತೊಂದರೆಯಾಗಬಾರದೆಂಬುದೇ ನಮ್ಮ ಉದ್ದೇಶ. ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಆಗಬೇಕಾದ ಕೆಲಸಕ್ಕೆ ತಾಲೂಕು ಕಚೇರಿಯಲ್ಲಿ ಅಲೆಯುತ್ತಿರುತ್ತಾರೆ. ರೈತರಿಗೆ ಮಾಹಿತಿ ಕೊಟ್ಟು, ತಹಸೀಲ್ದಾರ್ ಮುಖೇನ ಕೆಲಸ ಮಾಡಿಸುತ್ತಿದ್ದು, ನಾನು ತಾಲೂಕು ಕಚೇರಿಗೆ ಭೇಟಿ ನೀಡಲು ಶುರು ಮಾಡಿದ ನಂತರ ಹಂತಹಂತವಾಗಿ ಸಮಸ್ಯೆಗಳು ಬಗೆಹರಿಯುತ್ತಿವೆ ಎಂದು ತಿಳಿಸಿದರು.ತಾಲೂಕು ಕಚೇರಿಯಲ್ಲಿ ಉಳುಮೆ ಚೀಟಿ, ರಸ್ತೆ, ಖಾತೆ ಸಮಸ್ಯೆಗಳ ಜೊತೆಗೆ ರಿಕಾರ್ಡ್ ರೂಂ ನಲ್ಲಿ ಅರ್ಜಿ ಸಲ್ಲಿಸಿದರೂ ದಾಖಲಾತಿಗಳನ್ನು ಒದಗಿಸುತ್ತಿಲ್ಲ. ರೆಕಾರ್ಡ್ ರೂಂನಲ್ಲಿರುವ ಕಡತಗಳನ್ನು ಕೆಲವರು ಕದ್ದು ತೆಗೆದುಕೊಂಡು ಹೋಗಿದ್ದಾರೆ, ಗಟ್ಟಿಯಾಗಿ ಕೇಳಿದರೆ ರಿಕಾರ್ಡ್ ಇಲ್ಲ ಎಂದು ಎಂಡಾರ್ಸ್ಮೆಂಟ್ ಕೊಡುತ್ತಾರೆ. ಇಲ್ಲದಿರುವ ದಾಖಲೆಗಳಿಗೆ ಕೇವಲ ಎಂಡಾರ್ಸ್ಮೆಂಟ್ ಕೊಟ್ಟರೆ ಆಗುವುದಿಲ್ಲ, ದಾಖಲೆಗಳನ್ನು ಹುಡುಕಿಸಿಕೊಡಿ ಎಂದು ತಹಸೀಲ್ದಾರ್‌ಗೆ ಸೂಚಿಸಿದ್ದೇವೆ ಎಂದರು.ಈ ವೇಳೆ ತಹಸೀಲ್ದಾರ್ ಶರತ್ ಕುಮಾರ್ ಇತರರು ಭಾಗವಹಿಸಿದ್ದರು.
(ಫೋಟೋ ಕ್ಯಾಪ್ಷನ್)ಮಾಗಡಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಶರತ್‌ಕುಮಾರ್ ಸಮ್ಮುಖದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಮಾಜಿ ಶಾಸಕ ಎ.ಮಂಜುನಾಥ್.