ಎಲ್.ವಿ.ನವೀನ್ ಕುಮಾರ್
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಕಾವೇರಿ ನದಿ ಪಕ್ಕದಲ್ಲೇ ಹರಿದರೂ ತಾಲೂಕಿನ ಹಮದೇವಪುರ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಸಿಗದೆ ಪರಿತಪ್ಪಿಸುತ್ತಿದ್ದು, ದೀಪ ಜನತ್ತಿಗೆಲ್ಲ ಬೆಳಕನ್ನು ಕೊಟ್ಟರೂ ತನ್ನ ಬುಡಕ್ಕೇ ಕತ್ತಲು ಎಂಬ ಮಾತಿನಂತಾಗಿದೆ.
ಗ್ರಾಮದ 5 ಮತ್ತು 6ನೇ ಬ್ಲಾಕ್ ಜನರಿಗೆ 3 ರಿಂದ 4 ದಿನಗಳಿಗೊಮ್ಮೆ ಹೊಳೆಯ ಕಚ್ಚಾ ನೀರನ್ನೇ ನೇರವಾಗಿ ಸರಬರಾಜು ಮಾಡುತ್ತಿದ್ದಾರೆ. ಕಾಲು, ಕೈ ತೊಳೆಯಲೂ ಯೋಗ್ಯವಲ್ಲದ ನೀರನ್ನೇ ನಲ್ಲಿಗಳ ಮೂಲಕ ಜನರು ಕುಡಿಯಲು ಹರಿಸುತ್ತಿದ್ದಾರೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವಂತಾಗಿದೆ.ಈ ಹಿಂದೆ ಗ್ರಾಪಂನಿಂದ ಸುಮಾರು 23 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ವರ್ಷಗಳೇ ಕಳೆದಿವೆ. ಇದನ್ನು ರಿಪೇರಿ ಮಾಡಿಸಲೂ ಸಹ ಮುಂದಾಗಿಲ್ಲ. ಈ ಘಟಕ ನಿಷ್ಕ್ರಿಯಗೊಂಡು ಬಾಗಿಲಿನ ಬೀಗದಿಂದ ಹಿಡಿದ ಎಲ್ಲಾ ವಸ್ತುಗಳು ತುಕ್ಕು ಹಿಡಿಯುತ್ತಿವೆ.
ಈ ಗ್ರಾಮವಲ್ಲದೆ ತಾಲೂಕಿನ ಅಲಗೂಡು, ಕೊಡಿಯಾಲ, ನೇರಲಕೆರೆ, ವಡಿಯಾಂಡಹಳ್ಳಿ, ಚಿನ್ನೇನಹಳ್ಳಿ, ಮರಳಾಗಾಲ ಸೇರಿದಂತೆ ಇತರೆ ಗ್ರಾಮಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ನಿಷ್ಕ್ರಿಯಗೊಂಡಿವೆ. ನೀರಿನ ಘಟಕಗಳು ಹಾಳಾದರೂ ಮತ್ತೆ ಅವುಗಳನ್ನು ದುರಸ್ತಿ ಮಾಡಿಸಿ ಜನರಿಗ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗುತ್ತಿಲ್ಲ.
ಕುಡಿಯುವ ನೀರಿಗೆ ಗ್ರಾಮದ ಜನರು ತೊಂದರೆ ಅನುಭವಿಸುತ್ತಿರುವುದು ಒಂದೆಡೆಯಾದರೆ, ಇನ್ನು ಕೋಡಿಶೆಟ್ಟಿಪುರ, ಚನ್ನನಕೆರೆ ಗ್ರಾಮಗಳ ಜನರ ಪರಿಸ್ಥಿತಿ ಹೇಳತೀರದಾಗಿದೆ. ಇಲ್ಲಿನ ಕೊಳವೆ ಬಾವಿಗಳು ಸಂಪೂರ್ಣ ಬತ್ತಿ ಹೋಗಿರುವ ಕಾರಣ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಇಲ್ಲಿನ ನಿವಾಸಿಗಳಿಗೆ ಎರಡು-ಮೂರು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮಂಡ್ಯ ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡುತ್ತಿರುವ ಕೊಳವೆಯಿಂದ ನೀರು ಪೂರೈಸುವ ಕೆಲಸ ನನೆಗುದಿಗೆ ಬಿದ್ದಿದೆ. ಇನ್ನಾದರೂ ಈ ಯೋಜನೆ ಕೈಗೆತ್ತುಕೊಂಡು ಜನರಿಗೆ ಶುದ್ಧ ಕುಡಿಯುವ ನೀರು ಹರಿಸಿದರೆ ಗ್ರಾಮದ ಜನರು ನೆಮ್ಮದಿಯಿಂದ ಜೀವನ ನಡೆಸಬಹುದು ಎನ್ನತ್ತಾರೆ ಗ್ರಾಮಸ್ಥರು.ತಾಲೂಕಿನಲ್ಲಿ ಒಟ್ಟಾರೆ 75 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 67 ಘಟಕಗಳನ್ನು ಗ್ರಾಪಂ ಸುಪರ್ದಿಗೆ ನೀಡಲಾಗಿದೆ. ಇನ್ನು ವಡಿಯಾಂಡಹಳ್ಳಿ, ಅಲಗೂಡು, ಕೊಡಿಯಾಲ, ನೇರಲೆಕೆರೆ ಸೇರಿದಂತೆ ಗ್ರಾಮಗಳಲ್ಲಿನ 8 ಘಟಕಗಳು ದುರಸ್ತಿಯಲ್ಲಿದ್ದು, ಸುಮಾರು 20ಕ್ಕೂ ಹೆಚ್ಚು ನೀರಿನ ಘಟಕಗಳು ಕೆಟ್ಟು ನಿಂತಿವೆ.
ತಾಲೂಕಿನ ಹುಲಿಕೆರೆ, ಹೊಸಉಂಡವಾಡಿ, ನಗುವನಹಳ್ಳಿ ಮತ್ತು ಸಬ್ಬನಕುಪ್ಪೆ ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದಿಂದ ನಿರ್ವಹಣೆ ಮಾಡಲಾಗುತ್ತಿದೆ. ಉಳಿದಂತೆ ಹುಲಿಕೆರೆ, ಹೊಸಹಳ್ಳಿ, ಪಾಲಹಳ್ಳಿ, ಟಿ.ಎಂ.ಹೊಸೂರು, ಮಹದೇವಪುರ ಮತ್ತು ಗಾಮನಹಳ್ಳಿ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕಾವೇರಿ ನೀರು ಸರಬರಾಜು ಮಾಡುತ್ತಿರುವುದಾಗಿ ಹೆಸರೇಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಕಾವೇರಿ ನದಿಯಿಂದ ಶುದ್ಧೀಕರಿಸದೆ ನೇರವಾಗಿ ನೀರನ್ನೇ ಉಪಯೋಗಿಸುತ್ತಿರುವುದರಿಂದ ಮಹದೇವಪುರ ಗ್ರಾಮದ 5 ಮತ್ತು 6 ನೇ ಬ್ಲಾಕ್ ನ ಹಲವಾರು ಮಂದಿ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಶುದ್ಧ ಕುಡಿಯುವ ನೀರು ಪೂರೈಸಬೇಕು.
- ಎಂ.ವಿ.ಕೃಷ್ಣ, ಗ್ರಾಪಂ ಮಾಜಿ ಸದಸ್ಯ, ಮಹದೇವಪುರಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆಗಳು ಹೆಚ್ಚಾಗುತ್ತಿದೆ. ಗ್ರಾಮಗಳಲ್ಲಿ ಕೆಟ್ಟು ನಿಂತಿರುವ ಬೋರ್‌ವೆಲ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಇನ್ನೂ ಮುಂದಾಗುತ್ತಿಲ್ಲ. ಹಲವು ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ. ಇನ್ನಾದೂ ಅಧಿಕಾರಿಗಳು ಇತ್ತ ಗಮನ ಹರಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು.
- ಮಜ್ಜಿಗೆಪುರ ಮಂಜುನಾಥ್, ಹುಲಿಕೆರೆ ಗ್ರಾಪಂ ಮಾಜಿ ಸದಸ್ಯಮುಖ್ಯಾಂಶ
- ಮಹದೇವಪುರ ಗ್ರಾಮಸ್ಥರಿಗೆ ಕೈ- ಕಾಲು ತೊಳೆಯಲೂ ಯೋಗ್ಯವಲ್ಲದ ಕಚ್ಚಾ ನೀರು ಪೂರೈಕೆ- ಕಾವೇರಿ ನದಿ ಪಕ್ಕದಲ್ಲೇ ಹರಿದರೂ ಜನರಿಗೆ ಶುದ್ಧ ಕುಡಿಯುವ ನೀರಿಲ್ಲ
- ನಿಷ್ಕ್ರಿಯಗೊಂಡ ತಾಲೂಕಿನ ಬಹುತೇಕ ಕುಡಿಯುವ ನೀರಿನ ಘಟಕಗಳು- ದುರಸ್ತಿ ಮಾಡಿಸದ ಸಂಬಂಧಪಟ್ಟ ಅಧಿಕಾರಿಗಳು; ಆಕ್ರೋಶ