ಕನ್ನಡಪ್ರಭ ವಾರ್ತೆ ಮಾಲೂರು
ನಗರಸಭೆಯ ಅರ್ಥಿಕತೆ ಹೆಚ್ಚಿಸುವ ಸಲುವಾಗಿ ತೆಗೆದುಕೊಂಡಿರುವ ಕೆಲವು ಕಠಿಣ ಕ್ರಮಗಳಲ್ಲಿ ಯಾವುದೇ ರಾಜಿ ಇಲ್ಲ ಎಂದು ಶಾಸಕ ಕೆ.ವೈ. ನಂಜೇಗೌಡ ಹೇಳಿದರು.ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಗರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಬಸ್ ನಿಲ್ದಾಣ ಕೆಡವಿ ಹೊಸ ಬಸ್ ನಿಲ್ದಾಣ ನಿರ್ಮಿಸಲು, ಹಳೇ ನಗರಸಭೆ ಮಳಿಗೆಗಳನ್ನು ಮರುಹರಾಜು ಹಾಕಲು, ಪಟ್ಟಣದಲ್ಲಿ ಹಾದು ಹೋಗುವ ನಾಲ್ಕು ಪಥದ ರಸ್ತೆಗೆ ಅಡ್ಡಿಗಳನ್ನು ನಿವಾರಿಸಲು ಬಹಳಷ್ಟು ಒತ್ತಡ ಬಂದಿದೆ ಹಾಗೂ ಬರುತ್ತಿದೆ. ಆದರೆ ಯಾವುದಕ್ಕೂ ನಾನು ರಾಜಿಯಾಗುವುದಿಲ್ಲ. ಪಟ್ಟಣದ ಅಭಿವೃದ್ಧಿಯಲ್ಲಿ ರಾಜಿ ಇಲ್ಲ ಎಂದರು.ನಾನು ರಾಜಿಯಾದರೆ ಮತ್ತೆ ಈ ಹಿಂದಿನ ಆಡಳಿತದಂತೆ ಪಟ್ಟಣದ ಅಭಿವೃದ್ಧಿ ಹಾದಿ ತಪ್ಪಿ, ಬಲಾಢ್ಯರಿಗೆ ಮಣೆ ಹಾಸಿಕೊಟ್ಟಂತಾಗುತ್ತದೆ. ಈಗಾಗಲೇ ಬಸ್ ನಿಲ್ದಾಣ ನೂತನವಾಗಿ ನಿರ್ಮಾಣವಾಗುತ್ತಿದೆ. ಬಹುಶ ಎಪ್ರಿಲ್-ಮೇ ತಿಂಗಳೂಳಗೆ ನೆಲ ಅಂತಸ್ತು ಪೂರ್ಣಗೊಂಡು ಹರಾಜಿನಲ್ಲಿ ಕೊಂಡುಕೊಡವರಿಗೆ ಮಳಿಗೆ ಬಿಟ್ಟುಕೊಡಲಿದ್ದೇವಿ ಎಂದರು.
ಐಡಿ ಸಮಿತಿ ಸಂರ್ಕೀಣ ಸೇರಿದಂತೆ ಪಟ್ಟಣದಲ್ಲಿ ಉಳಿದಿರುವ ನಗರಸಭೆ ಮಳಿಗೆಗಳ ಮರು ಹರಾಜು ಯಾವುದೇ ಬದಲಾವಣೆ ಇಲ್ಲದೇ ಮಾರ್ಚ್ ಅಥವಾ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ. ಇದಲ್ಲದೇ ಹುಣಸೇಮರಗಳ ಕಳಗೆ ಇರುವ ಶಿಥಿಲ ಅವಸ್ಥೆಯಲ್ಲಿರುವ ಮಳಿಗೆಗಳನ್ನು ಕೆಡವಲು ಜಿಲ್ಲಾಧಿಕಾರಿಗಳ ಒಪ್ಪಿಗೆ ಸಿಕ್ಕಿದ್ದು, ಈ ವಾರದೂಳಗೆ ಅಂಗಡಿಗಳನ್ನು ಖಾಲಿ ಮಾಡಿಸಿ ಮಳಿಗೆಗಳನ್ನು ಕೆಡವಲಾಗುತ್ತದೆ ಎಂದ ಶಾಸಕರು ಈ ಎಲ್ಲ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಈಗಾಗಲೇ ಕೆವಿಯೇಟ್ ಹಾಕಲಾಗಿದೆ ಎಂದರು.ಆಶ್ರಯ ಯೋಜನೆಯಲ್ಲಿ ನೀಡಬೇಕಾಗಿರುವ 1,500 ನಿವೇಶನಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಯಾವುದೇ ಹಣ ಬಾರದಿರುವುದರಿಂದ ಆಶ್ರಯ ಬಡಾವಣೆಯ ಕಾರ್ನರ್ ಸೈಟ್ ಗಳನ್ನು ಹರಾಜು ಮಾಡಿ ಬರುವ ಹಣದಿಂದ ಬಡಾವಣೆ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ.ಮಾಲೂರು ಹೊಸಕೋಟೆ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕು ಪಥದ ರಸ್ತೆ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಹಾಗೆಯೇ ಸಂಪೂರ್ಣ ಹಾಳಾಗಿರುವ ಹೊಸೂರು ರಸ್ತೆ ದುರಸ್ಥಿ ಬಗ್ಗೆ ಟೆಂಡರ್ ಪಡೆದಿರುವ ಗುತ್ತಿಗೆದಾರ ಮುಂದಾಗಬೇಕು. ಹೊಸೂರು ರಸ್ತೆಯ ಸೀತಾನಾಯನಹಳ್ಳಿವರೆಗೆ ನಡೆಯಲಿರುವ ನಾಲ್ಕು ಪಥದ ರಸ್ತೆ ಕಾಮಗಾರಿಯ ಗುತ್ತಿಗೆದಾರರು ಈ ಬಗ್ಗೆ ಗಮನ ಹರಿಸಿ ಎಂದರು.
ಪಟ್ಟಣದೊಳಗೆ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಇರುವ ಅಡ್ಡಿಗಳನ್ನು ಈ ಕೊಡಲೇ ಸಂಬಂಧ ಇಲಾಖೆ ಅಧಿಕಾರಿಗಳು ನಿವಾರಿಸಿ. ಕಾಮಗಾರಿ ಬಗ್ಗೆ ದೂರು ಬರದಂತೆ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಿ ಎಂದು ಸಭೆಯಲ್ಲಿದ್ದ ಗುತ್ತಿಗೆದಾರರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ತಮ್ಮಗಿದ್ದ ಕೆಲವು ಸಮಸ್ಯೆ ದೂರುಗಳ ಪ್ರಶ್ನೆಗೆ ಶಾಸಕರು, ತಹಸೀಲ್ದಾರ್ ಹಾಗೂ ಆಯುಕ್ತರು ಉತ್ತರ ಮೂಲಕ ಪರಿಹಾರ ನೀಡಿದರು. ತಹಸೀಲ್ದಾರ್ ರೂಪ, ಪ್ರಾಧಿಕಾರದ ಅಧ್ಯಕ್ಷ ವಿಜಯನರಸಿಂಹ, ಆಯುಕ್ತ ಮಹದೇವ, ಸಿಪಿಐ ರಾಮಯ್ಯ, ಬೆಸ್ಕಾಂ ಎಇಇ ಅನ್ಸರ್ ಪಾಷ, ಎ.ಡಿ.ಎಲ್.ಆರ್.ಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಲವು ಯೋಜನೆಗಳ ಅಧಿಕಾರಿಗಳಿದ್ದರು.