ಮಂಗಳೂರು: ಉಪಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ. ಈ ವಿಚಾರಗಳ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಮುಂತಾದ ವಿಚಾರಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಾವು ಚರ್ಚೆ ಮಾಡುವ ಅಗತ್ಯ, ಅನಿವಾರ್ಯತೆ, ಅವಶ್ಯಕತೆ ಇಲ್ಲ. ಉಪ ಚುನಾವಣೆ ನಡೆದ ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲುವಿನ ಬಲವಾದ ನಿರೀಕ್ಷೆಗಳು ಇದೆ. ಒಳ್ಳೆ ಫಲಿತಾಂಶ ಬರುವ ಬಗ್ಗೆ ನೂರಕ್ಕೆ ನೂರು ವಿಶ್ವಾಸವಿದೆ ಎಂದರು.ನಾವು ಎಲ್ಲ ವರ್ಗ, ಧರ್ಮದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ನಮ್ಮಲ್ಲಿ ಯಾರನ್ನು ದೂರ ಮಾಡುವ ಪ್ರಶ್ನೆ ಬರುವುದಿಲ್ಲ. ಒಂದು ಕೋಮು ಇನ್ನೊಂದು ಕೋಮು ಎಂದು ಸೀಮಿತ ‌ಅಲ್ಲ. ಚುನಾವಣೆ ಸಂದರ್ಭ ಟಿಕೆಟ್‌ ಸಿಕ್ಕಿಲ್ಲ ಎಂದು ಕೆಲವು ಆಕಾಂಕ್ಷಿಗಳಿಗೆ ನೋವು ಇರಬಹುದು. ಅದರಿಂದ ದೊಡ್ಡ ಸಮಸ್ಯೆ ಆಗುವುದಿಲ್ಲ. ನಮ್ಮವರೆಲ್ಲಾ ಚುನಾವಣಾ ಪ್ರಚಾರದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿ ಲಿಂಗಾಯತರಿಗೆ ಟಿಕೆಟ್‌ ಕೊಟ್ಟಿಲ್ಲ. ಹಾಗೆಂದು ಲಿಂಗಾಯತರು ಯಾರು ಓಟು ಹಾಕಿಲ್ಲ ಎಂದು ಹೇಳಲು ಆಗುತ್ತಾ? ದಾವಣಗೆರೆಯಲ್ಲಿ ಹೆಚ್ಚಿನ ಅಂತರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.ಯುದ್ಧದ ಸನ್ನಿವೇಶದಿಂದಾಗಿ ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬರುತ್ತಿದ್ದ ಕೆಲವು ಔಷಧಗಳ ಪೂರೈಕೆ ಆಗುತ್ತಿಲ್ಲ. ಔಷಧ ಪೂರೈಕೆಗೆ ಸ್ವಲ್ಪ ಸಮಯ ಕೇಳುತ್ತಿದ್ದಾರೆ. ಈ ಹಿಂದೆ ಕೊಟ್ಟಿರುವ ಆರ್ಡರ್‌ಗಳ‌ ಡೆಲಿವರಿ ಮಾಡಲು ಆಗುತ್ತಿಲ್ಲ. 30 ದಿನ‌‌ ಸಮಯ ಕೊಡಿ ಎಂದು ಕೇಳುತ್ತಿದ್ದಾರೆ. ಮೆಡಿಸಿನ್ ತಯಾರಿಕೆ ಮಾಡುವವರಿಗೂ ಕಚ್ಚಾವಸ್ತುಗಳು ಬರದೆ ಕೊರತ ಆಗಿದೆ. ಈ ಬಗ್ಗೆ ಅವರು ಸಹ ನಮಗೆ ಪತ್ರ ಬರೆದಿದ್ದಾರೆ. ಕೆಲವು ಔಷಧಗಳ ಬೆಲೆ ಏರಿಕೆಯಾಗಿದೆ. ಮೆಡಿಸಿನ್ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಬೇರೆ ಬೇರೆ ದೇಶದಿಂದ ಖರೀದಿ ಮಾಡುವ ವ್ಯವಸ್ಥೆ ಮಾಡಬೇಕು. ಬಹಳ‌ ದೊಡ್ಡ ಜವಾಬ್ದಾರಿ ಕೇಂದ್ರದ ಮೇಲೆ ಇದೆ ಎಂದರು.

ರಾಜ್ಯದಲ್ಲಿ ಗ್ಯಾಸ್‌ ಸಮಸ್ಯೆ ಇದೆ: ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಇದೆ ಎಂದು ಸ್ಪಷ್ಟವಾಗಿ ಹೇಳಬೇಕು. ಸುಮ್ಮನೆ ಸಮಸ್ಯೆ ಇಲ್ಲ‌ ಎಂದು ಹೇಳಬಾರದು. ಅನೇಕ‌ ಕಡೆ ಆಹಾರ ತಯಾರಿಕೆ ಶೇ.50 ಕ್ಕೆ ಇಳಿಸಿದ್ದಾರೆ. ಕೋವಿಡ್ ಸಂದರ್ಭದ ಪರಿಸ್ಥಿತಿಯಂತಾಗಿದೆ ಈಗ. ಹಾಗೆಂದು ಸಮಸ್ಯೆ ಇಲ್ಲ ಎಂದು ಹೇಳಬಾರದು. ಜನರಿಗೆ‌ ಸ್ಪಷ್ಟವಾಗಿ ವಿಷಯ ತಿಳಿಸಬೇಕು. ಸಮಸ್ಯೆ ಇಲ್ಲ‌ ಎಂದು ಯಾಕೆ ಹೇಳಬೇಕು‌. ಪರ್ಯಾಯ ಕ್ರಮ, ನಿಜಾಂಶವನ್ನು ಜನರ ಮುಂದೆ ಇಡಬೇಕು. ಎಲ್ಲ ಕಡೆ ಕಮರ್ಷಿಯಲ್ ಗ್ಯಾಸ್‌ಗೆ ತೊಂದರೆ ಇದೆ. ಇಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಸಮಸ್ಯೆ ಇದ್ದಾಗ ಇಲ್ಲ ಎಂದು ಹೇಳಿದರೆ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.