ಚನ್ನಪಟ್ಟಣದಲ್ಲಿ ಕುತಂತ್ರ ರಾಜಕಾರಣ ನಡೆಯಲ್ಲ

| Published : Oct 30 2024, 12:46 AM IST

ಸಾರಾಂಶ

ಚನ್ನಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ನಡೆದ ಕುತಂತ್ರ ರಾಜಕಾರಣ ಚನ್ನಪಟ್ಟಣ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣ: ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ನಡೆದ ಕುತಂತ್ರ ರಾಜಕಾರಣ ಚನ್ನಪಟ್ಟಣ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣ ಕ್ಷೇತ್ರದ ಬೈರಾಪಟ್ಟಣ ಮಾರಮ್ಮ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿ ಚಿಕ್ಕ ವಯಸ್ಸಿನಲ್ಲೇ ಎರಡು ಚುನಾವಣೆ ಎದುರಿಸಿ ಸೋತಿದ್ದೇನೆ. ಜನರ ಅಭಿಪ್ರಾಯವನ್ನು ಗೌರವಿಸುತ್ತೇನೆ. ಈ ಬಾರಿ ಯಾವ ಕುತಂತ್ರಕ್ಕೆ ಬಲಿಯಾಗಲು ಮತದಾರರು ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಮಂಡ್ಯ ಕ್ಷೇತ್ರದ ಜನರು ಐದೂವರೆ ಲಕ್ಷ ಮತಗಳನ್ನು ನೀಡಿದ್ದರು. ಬಳಿಕ ರಾಮನಗರದಲ್ಲಿ ಕಾರ್ಯಕರ್ತರ ಒತ್ತಾಯದ ಮೇಲೆ ಸ್ಪರ್ಧೆ ಮಾಡಿದೆ. ಅಲ್ಲಿಯೂ 76 ಸಾವಿರ ಮತಗಳನ್ನು ನೀಡಿದರು. ಕೂಪನ್ ಕಾರ್ಡ್ ಕೊಟ್ಟು ಮೋಸ ಮಾಡಿ ಕುತಂತ್ರದಿಂದ ಅಲ್ಲಿ ಕಾಂಗ್ರೆಸ್ ಗೆದ್ದಿತು. ಹಾಗಾಗಿ ನಾವು‌ ಮತ್ತು ಬಿಜೆಪಿ ಇಂದು ಒಂದಾಗಿ ಕೆಲಸ ಮಾಡ್ತಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಎನ್‌ಡಿಎ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಎರಡು ಬಾರಿ ಪೆಟ್ಟು ತಿಂದಿದ್ದೇನೆ:

ಈ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿಗೆ ನೀವು ಶಕ್ತಿ ತುಂಬಿದ್ದೀರಿ. ಎಲ್ಲರಿಗೂ ಕೈ ಮುಗಿದು ಕೇಳಿಕೊಳ್ತೇನೆ. ಇದು ನಮ್ಮ ಎನ್ ಡಿಎ ಕುಟುಂಬಕ್ಕೆ ಅಗ್ನಿ ಪರೀಕ್ಷೆ. ಈ ಪರೀಕ್ಷೆಯಲ್ಲಿ ನಮಗೆ ಜಯ ನೀಡಿ. ಎರಡು ಬಾರಿ ಜೀವನದಲ್ಲಿ ಪೆಟ್ಟು ತಿಂದಿದ್ದೇನೆ. ನಿಮ್ಮನ್ನು ನಂಬಿಕೊಂಡು ಬಂದಿದ್ದೇನೆ. ನಿಮಗಾಗಿ ಕೆಲಸ ಮಾಡುತ್ತೇನೆ, ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದನ್ನು ಜನರು ಚರ್ಚೆ ಮಾಡುತ್ತಿದ್ದಾರೆ. ಹಣ ಇಲ್ಲದೆ, ಸರ್ಕಾರ ದಿವಾಳಿಯಾಗಿದೆ. ಸರ್ಕಾರದಲ್ಲಿ ದುಡ್ಡಿಲ್ಲ. ವಾಲ್ಮೀಕಿ ಹಗರಣ, ಮುಡಾ ಹಗರಣ ರಾಜ್ಯದಲ್ಲಿ ಚರ್ಚೆ ಆಗುತ್ತಿದೆ. ವಾಲ್ಮೀಕಿ ನಿಗಮದ ಹಣ ಬೇರೆ ರಾಜ್ಯದ ಚುನಾವಣೆಗೆ ಬಳಕೆ ಆಗಿದೆ.ಇಂತಹ ಸರ್ಕಾರವನ್ನ ನಾವು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತವಾದ ಚುನಾವಣೆ. ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರ ಜನರು ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಬಳಿಕ ಕಳೆದ ಲೋಕಸಭಾ ಚುನಾವಣೆ ವೇಳೆ ಒತ್ತಡಕ್ಕೆ ಮಣಿದು ಮಂಡ್ಯದಲ್ಲಿ ಸ್ಪರ್ಧೆ ಮಾಡಿದರು. ಬಳಿಕ ಮಂಡ್ಯದಿಂದ ಗೆದ್ದು ಕೇಂದ್ರ ಸಚಿವರಾಗಿದ್ದಾರೆ. ಇದು ನನ್ನ ಪಾಲಿಗೆ ಬಯಸದೇ ಬಂದ ಚುನಾವಣೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಬಾಕ್ಸ್‌........

ನಿಖಿಲ್ ಬಿರುಸಿನ ಪ್ರಚಾರ

ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದ ದೂಡ್ಡಮಳೂರು, ಕೋಟೆ ಮಾರನಹಳ್ಳಿ, ಬೈರಾಪಟ್ಟಣ, ದೇವರಹಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ತಾಲೂಕಿನ ದೊಡ್ಡಮಳೂರು ಗ್ರಾಮದಿಂದ ಆರಂಭವಾದ ಪ್ರಚಾರದಲ್ಲಿ ನಿಖಿಲ್ ಅವರಿಗೆ ಅದ್ದೂರಿ ಸ್ವಾಗತ ಕೋರಿದರು. ಪ್ರತಿ ಗ್ರಾಮದಲ್ಲೂ ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರ ಹಾಕಿ ಗ್ರಾಮಸ್ಥರು ಸ್ವಾಗತಿಸಿದರು.

ದೊಡ್ಡಮಳೂರು ಗ್ರಾಮದ ಶ್ರೀ ಅಪ್ರಮೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮತಯಾಚಿಸಿದರು. ನಂತರ ಕೋಟೆ ಮಾರನಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ಕೋಟೆ ಮಾರನಹಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾದರು. ಒಬ್ಬ ಯುವಕನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ನಂತರ ಬೈರಾಪಟ್ಟಣ ಮಾರಮ್ಮ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಹಿಳೆಯರು ಹಿರಿಯರ ಬಳಿ ತೆರಳಿ ಕೈ ಮುಗಿದು ಮತಯಾಚಿಸಿದರು. ವಳೆಗೆರೆದೊಡ್ಡಿಯಲ್ಲಿ ಪ್ರಚಾರ ಮಾಡಿದ ನಿಖಿಲ್, ಗ್ರಾಮದ ರಾಮಮಂದಿರವನ್ನು ಅಭಿವೃದ್ಧಿ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಅಲ್ಲದೆ, ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ವಳಗೆರೆದೊಡ್ಡಿ ಗ್ರಾಮದಿಂದ ಹೊಸೂರು ದೊಡ್ಡಿ ಗ್ರಾಮಕ್ಕೆ ಕಾರ್ಯಕರ್ತರೊಂದಿಗೆ ಬೈಕಿನ ಮೂಲಕ ತೆರಳಿ ಮತಯಾಚನೆ ಮಾಡಿದರು.

ಬಾಕ್ಸ್‌..............

ಎಚ್ಡಿಡಿ - ಎಚ್ಡಿಕೆ ನೀರಾವರಿ ಯೋಜನೆಗಳ ಕೊಡುಗೆ

ಚನ್ನಪಟ್ಟಣ: ದೇವೇಗೌಡರು ಇಗ್ಗಲೂರು ಡ್ಯಾಂ ಕಟ್ಟಿ ನೀರಾವರಿ ಯೋಜನೆ ಕೊಟ್ಟರು. ಕುಮಾರಣ್ಣ ಅವರು ಸಾರಾಯಿ, ಲಾಟರಿ ನಿಷೇಧ ಮಾಡಿದರು. ಸತ್ತೆಗಾಲದಿಂದ ನೀರಾವರಿ ಯೋಜನೆ ಜೊತೆಗೆ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರೆ ಎಂದು ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣ ಕ್ಷೇತ್ರದ ಹೊಸೂರುದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ರೈತರ ಪಕ್ಷ, ರೈತರ ಸಾಲಮನ್ನಾ ಮಾಡಿ ರೈತರ ಪರ ನಿಂತಿದ್ದು ಕುಮಾರಣ್ಣ. ಇದೆಲ್ಲವನ್ನು ನಿಮ್ಮ ಹೃದಯದಲ್ಲಿ ಸ್ಮರಿಸಿಕೊಂಡು ನನಗೆ ಮತ ನೀಡಿ ಎಂದು ಮನವಿ ಮಾಡಿದರು.

ಈ ಚುನಾವಣೆಯಲ್ಲಿ ಯಾವ ಜಾತಿಯೂ ಲೆಕ್ಕಕ್ಕಿಲ್ಲ. ಪ್ರಬುದ್ಧ ಮತದಾರರು ಆಶೀರ್ವಾದ ಮಾಡಲಿದ್ದಾರೆ. ತಾಯಂದಿರ ಪಾದಗಳಿಗೆ ನಮಸ್ಕಾರ ಮಾಡಿ ಹೇಳುತ್ನೆ. ಎರಡು ಚುನಾವಣೆಯಲ್ಲಿ ಕುತಂತ್ರದಿಂದ ಸೋತಿದ್ದೇನೆ. ಆದರೂ ನನಗೆ ಜನ ಬೆಂಬಲ ಆಶೀರ್ವಾದ ಕಡಿಮೆ ಆಗಿಲ್ಲ. ನನಗೆ ಇದು ಅನಿರೀಕ್ಷಿತ ಚುನಾವಣೆ ಎಂದು ತಿಳಿಸಿದರು.

ದೇವೇಗೌಡರು, ಬಿಜೆಪಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ನಿಮಗೋಸ್ಕರ ದುಡಿಮೆ ಮಾಡಲು ಬಂದಿದ್ದೇನೆ. ದಯವಿಟ್ಟು ನನ್ನನ್ನ ಆಶೀರ್ವದಿಸಿ ನಿಮ್ಮ ಕಷ್ಟದಲ್ಲಿ ಭಾಗಿಯಾಗುತ್ತೇನೆ ಎಂದು ನಿಖಿಲ್ ಭರವಸೆ ನೀಡಿದರು.

ಶೆಟ್ಟಹಳ್ಳಿ, ಮುದುಗೆರೆ, ಬೆಳಕೆರೆ, ಮಾರ್ಚನಹಳ್ಳಿ, ಪುಟ್ಟಪ್ಪ ದೊಡ್ಡಿ ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳಿ ನಿಖಿಲ್ ಪ್ರಚಾರ ನಡೆಸಿದರು.

---------------------------

29ಕೆಆರ್ ಎಂಎನ್ 7,8.ಜೆಪಿಜಿ

7.

ಚನ್ನಪಟ್ಟಣದ ದೊಡ್ಡಮಳೂರು ಗ್ರಾಮದ ಶ್ರೀ ಅಪ್ರಮೇಯ ಸ್ವಾಮಿಯ ದೇಗುಲಕ್ಕೆ ನಿಖಿಲ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.

8

ವಳಗೆರೆದೊಡ್ಡಿ ಗ್ರಾಮದಲ್ಲಿ ಚಿತ್ರನಟ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ನಿಖಿಲ್ ಪುಷ್ಪನಮನ ಸಲ್ಲಿಸಿದರು.