ಕನ್ನಡಪ್ರಭ ವಾರ್ತೆ ಮಂಡ್ಯ
ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸಿ ಮುನ್ನಡೆಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಸಂಪೂರ್ಣ ಹಿಂದುಳಿದಿದೆ. ಸಾವಿರಾರು ಸಮಸ್ಯೆಗಳು, ಹಗರಣಗಳಿಂದಾಗಿ ಆಡಳಿತ ಗೊಂದಲಗಳಿಂದ ಕೂಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ದೂರಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದ್ದರೂ ಬರೀ ಹಗರಣಗಳು, ಕುರ್ಚಿ ಕಾಳಗ, ಶಾಸಕರ ಡಿನ್ನರ್, ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು.
ಆರೋಗ್ಯ ಇಲಾಖೆಗೆ ಅನಾರೋಗ್ಯ:ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಅಗತ್ಯ ಔಷಧಗಳಿಲ್ಲ. ಈ ಸರ್ಕಾರ ಔಷಧಿಗಳನ್ನೇ ಖರೀದಿಸುತ್ತಿಲ್ಲ. ಸರಬರಾಜು ಮಾಡುತ್ತಿಲ್ಲ. ಎಲ್ಲವೂ ಖಾಲಿ ಖಾಲಿಯಾಗಿದೆ. ಯೂಸರ್ಸ್ ಫಂಡ್‌ನಿಂದಲೂ ಖರೀದಿ ಮಾಡದಂತೆ ಆದೇಶ ನೀಡಿದೆ. ರೋಗಿಗಳು ಚೀಟಿ ಹಿಡಿದುಕೊಂಡು ಔಷಧಿ ಅಂಗಡಿಗಳತ್ತ ಹೋಗುವಂ ಸ್ಥಿತಿ ಎದುರಾಗಿದೆ. ಇದರಿಂದ ಆರೋಗ್ಯ ಇಲಾಖೆಗೆ ಅನಾರೋಗ್ಯ ಕಾಡುತ್ತಿದೆ ಎಂದು ಟೀಕಿಸಿದರು.
ರಾಜ್ಯಾದ್ಯಂತ ಮಾ.12ರಿಂದ ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಗುತ್ತಿಗೆದಾರರು, ಅಂಗನವಾಡಿ ಕಾರ್ಯಕರ್ತರು, ಕೆಎಸ್ ಆರ್ ಟಿಸಿ , ಆರೋಗ್ಯ ಇಲಾಖೆ ನೌಕರರು ಗಡವು ನೀಡಿದ್ದಾರೆ. ಇನ್ಮುಂದೆ ರಾಜ್ಯದಲ್ಲಿ ಬರೀ ಪ್ರತಿಭಟನೆಗಳೇ ನಡೆಯುತ್ತವೆ. ಸರ್ಕಾರ ಬದುಕಿದ್ದರೆ ಕೂಡಲೇ ಔಷಧಿಗಳನ್ನು ಖರೀದಿಸಬೇಕು. ಇಂದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಕಾರಣ ಎಂದು ದೂರಿದರು.
ಜೊತೆಗೆ ಗ್ಯಾರಂಟಿಗಳು ಹೊರೆಯಾಗಿವೆ ಎಂದು ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಈ ಹೊರೆಯಿಂದ ಎಲ್ಲಾ ಇಲಾಖೆಗಳಲ್ಲೂ ಶೇ.25 ರಿಂದ 30ರಷ್ಟು ಕಡಿತವಾಗುತ್ತಿದೆ. ಯಾವ ಇಲಾಖೆಯಿಂದಲೂ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಖಾತೆ ಆರಂಭಿಸಿದರೂ 11 ರಿಂದ 12 ಸಾವಿರ ಲಂಚ ಕೊಡದೆ ಕೆಲಸವಾಗುತ್ತಿಲ್ಲ. ಸರ್ಕಾರವೇ ಡಿಜಿಟಲ್ ಖಾತೆಗಳನ್ನು ಬದಲಾವಣೆ ಮಾಡಬೇಕಿತ್ತು. ಆದರೆ, ಲಂಚಕ್ಕೆ ದಾರಿ ಮಾಡಿಕೊಡಲು ಈ ಖಾತಾ ಮಾಡಿದ್ದಾರೆ. ಕಂದಾಯ ಇಲಾಖೆಯಲ್ಲಿ ಶೇ.20ಕ್ಕಿಂತಲೂ ಹೆಚ್ಚಿಗೆ ಆದಾಯ ಕಡಿಮೆಯಾಗಿದೆ. ಅಬಕಾರಿ ಬಿಟ್ಟರೆ ಎಲ್ಲ ಇಲಾಖೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದಕ್ಕೆಲ್ಲಾ ಸಿಎಂ ಕುರ್ಚಿ ಕಾದಾಟವೇ ಕಾರಣ ಎಂದು ಆರೋಪಿಸಿದರು.ಮಂಡ್ಯದಲ್ಲಿ ಸಿಎಲ್-7 ಪಡೆಯಲು 1 ಕೋಟಿ ಲಂಚ ಕೇಳುತ್ತಾರೆ. ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ಸಚಿವರು ಹೈಕಮಾಂಡ್‌ಗೆ ಇಟಿಎಂ ಆಗಿದ್ದಾರೆ. 5 ರಾಜ್ಯಗಳ ಚುನಾವಣೆಗೆ ರಾಜ್ಯ ಸರ್ಕಾರ ಫಂಡ್ ನೀಡಬೇಕಿದೆ. ಇದರಿಂದ ಎಲ್ಲಾ ಸಚಿವರ ಕುರ್ಚಿ ಅಲ್ಲಾಡುತ್ತಿದೆ. ಸಂಪುಟ ವಿಸ್ತರಣೆ ವಿಚಾರ ಬಂದರೆ ಸಾಕು ಮಂತ್ರಿಗಳಿಗೆ ರೇಟ್ ಫಿಕ್ಸ್ ಆಗುತ್ತದೆ. ಕರ್ನಾಟಕ ಒಂದೇ ಹೈಕಮಾಂಡ್‌ಗೆ ಹಣ ನೀಡುವ ರಾಜ್ಯ. ಈ ಕಾರಣಕ್ಕೆ ಎಲ್ಲಾ ರಾಜ್ಯಗಳ ಚುನಾವಣೆಗೂ ಕರ್ನಾಟಕದ ಸಚಿವರನ್ನೇ ಉಸ್ತುವಾರಿಗಳನ್ನಾಗಿ ನೇಮಕ ಮಾಡುತ್ತಿದ್ದಾರೆ ಎಂದು ಛೇಡಿಸಿದರು.
ರಾಜ್ಯ ಸರ್ಕಾರ ಸಂಪೂರ್ಣ ಪಾಪರ್ ಆಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ 3.15 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರಾಜ್ಯವನ್ನು ಆಳಿದ ಎಲ್ಲ ಮುಖ್ಯಮಂತ್ರಿಗಳು ಮಾಡಿದ ಅರ್ಧದಷ್ಟು ಸಾಲವನ್ನು ಇವರೊಬ್ಬರೇ ಮಾಡಿದ್ದಾರೆ. ರಾಜ್ಯದ 6 ಕೋಟಿ ಜನರ ಮೇಲೆ 1 ಲಕ್ಷ ಸಾಲ ಇದ್ದರೆ, ಸಿದ್ದರಾಮಯ್ಯ ಅವರೊಬ್ಬರೇ ಒಂದೊಂದು ಲಕ್ಷ ಸಾಲ ಹೊರಿಸಿದ್ದಾರೆ. ಇದು ಕಾಂಗ್ರೆಸ್ಸ ರ್ಕಾರದ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.ಅರ್ಧ ಕೆಜಿ ತರಕಾರಿಯನ್ನು ಅಂಗನವಾಡಿ ಮಕ್ಕಳಿಗೆ ಹಂಚಬೇಕಿದೆ. ಮಕ್ಕಳಿಗೆ 50 ಪೈಸೆಗೆ ತರಕಾರಿ ಹಂಚಲು ಸಾಧ್ಯವೇ?. ಕಾಂಗ್ರೆಸ್ ಪಕ್ಷ ಮಾಡಿದ ಪಾಪದಿಂದಾಗಿ ರಾಜ್ಯ ದಿವಾಳಿಯತ್ತ ಸಾಗಿದೆ. ಸಾಲದ ಹೊರೆ, ತೆರಿಗೆಗಳ ಹೊರೆಯಿಂದ ಜನ ಬೇಸತ್ತಿದ್ದಾರೆ. ಕೇಂದ್ರ ಸ್ವಲ್ಪ ಬೆಲೆ ಇಳಿಸಿದರೆ ರಾಜ್ಯದವರು ಏರಿಕೆ ಮಾಡುತ್ತಾರೆ ಎಂದು ಆರೋಪಿಸಿದರು.
ಬಿಜೆಪಿಗಿಂತ ಮೂರು ಪಟ್ಟು ಭ್ರಷ್ಟಾಚಾರ ಆರೋಪವನ್ನು ಸ್ವತಃ ಗುತ್ತಿಗೆದಾರರೇ ಈ ಸರ್ಕಾರದ ಮೇಲೆ ಮಾಡಿದ್ದಾರೆ. ಬಜೆಟ್‌ನಲ್ಲಿ ಕಳೆದ ಮೂರು ವರ್ಷದಲ್ಲಿ ಏನು ಘೋಷಣೆ ಮಾಡಿದ್ದಾರೆ ಅದರ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ. ಅಧಿವೇಶನದಲ್ಲಿ ಈ ಸರ್ಕಾರದ ಮುಖಕ್ಕೆ ಮಂಗಳಾರತಿ ಮಾಡುತ್ತೇವೆ. ನಮ್ಮ ಹೋರಾಟಕ್ಕೆ ಸರ್ಕಾರ ಹೆದರಿ ಉದ್ಯೋಗದ ಬಗ್ಗೆ ಘೋಷಣೆ ಮಾಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸಿಎಂ ಕುರ್ಚಿ ಬಿಡದ ಸಿದ್ದರಾಮಯ್ಯ:
ಮುಖ್ಯಮಂತ್ರಿ ಕುರ್ಚಿ ಬಿಡೋ ರಾಮಯ್ಯ ಅಲ್ಲ. ಎರಡೂವರೆ ವರ್ಷ ಒಪ್ಪಂದ ಆಗಿದೆ ಎಂದು ಡಿಕೆಶಿ ಹೇಳುತ್ತಾರೆ. ಆದರೆ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತ್ರ ಬಾಯಿ ಬಿಡಲ್ಲ. ಸರ್ಕಾರ ಸತ್ತು ಹೋಗಿದೆ. ಹೆಣ ಹೊರಲು ಡಿಕೆಶಿ ಮುಂದೆ ಬರ್ತೀನಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಬಿಡುತ್ತಿಲ್ಲ. ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್‌ಗೆ ಪಂಗನಾಮ ಹಾಕುವುದು ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.ಮೈತ್ರಿ ವಿಚಾರ ಹೈಕಮಾಂಡ್ ತೀರ್ಮಾನ:
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ. ರಾಜ್ಯದ ಪರಿಸ್ಥಿತಿ ಬಗ್ಗೆ ಈಗಾಗಲೇ ರಾಜ್ಯ ಉಸ್ತುವಾರಿಗೆ ನಮ್ಮ ಅಭಿಪ್ರಾಯಗಳನ್ನು ಹೇಳಿದ್ದೇವೆ. ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ವಿಚಾರ ಇದೆ. ದೇವೇಗೌಡರೇ ಮೊದಲು ಮೈತ್ರಿ ಬೇಡ ಎಂದಿದ್ದರು. ಈಗ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಹೊಂದಾಣಿಕೆ ಬಗ್ಗೆ ಆ ಮೇಲೆ ನೋಡೋಣ. ಆದರೆ, ಸಿದ್ದರಾಮಯ್ಯ ಉಳಿದುಕೊಳ್ಳಲು ಸ್ಥಳೀಯ ಚುನಾವಣೆ ಘೋಷಣೆ ಮಾಡಲಿ ಎಂದು ತಿರುಗೇಟು ನೀಡಿದರು.ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಎಸ್.ಸಚ್ಚಿದಾನಂದ ಇಂಡುವಾಳು, ವಸಂತ್‌ಕುಮಾರ್, ಅಶೋಕ್‌ಕುಮಾರ್, ಸಿ.ಟಿ. ಮಂಜುನಾಥ್, ನಾಗಾನಂದ್ ಇದ್ದರು.